ಮೆಟ್ರೋ ರೈಲು ಮಾರ್ಗ ಶೀಘ್ರದಲ್ಲೇ ಉದ್ಫಾಟನೆ: ಸಚಿವ ಕೆ.ಜೆ.ಜಾರ್ಜ್
ಭೈಯಪ್ಪನಹಳ್ಳಿಯಿಂದ ನಾಯಂಡನಹಳ್ಳಿ

ಬೆಂಗಳೂರು, ಎ.18: ಭೈಯಪ್ಪನಹಳ್ಳಿಯಿಂದ ಮೈಸೂರು ರಸ್ತೆಯ ನಾಯಂಡನಹಳ್ಳಿವರೆಗಿನ ಪೂರ್ವ-ಪಶ್ಚಿಮ ಮೆಟ್ರೋ ರೈಲು ಮಾರ್ಗದ ಕಾಮಗಾರಿ ಪೂರ್ಣ ಗೊಂಡಿದ್ದು, ಹತ್ತು-ಹದಿನೈದು ದಿನಗಳಲ್ಲಿ ನೂತನ ರೈಲ್ವೆ ಮಾರ್ಗವನ್ನು ಉದ್ಘಾಟನೆ ಮಾಡಲಾಗುವುದು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಈಗಾಗಲೇ ಮೇಲ್ಕಂಡ ಮಾರ್ಗದಲ್ಲಿ ರೈಲ್ವೆ ಸುರಕ್ಷತಾ ಆಯೋಗ ಪರೀಕ್ಷೆ ನಡೆಸಿ ಕೆಲ ಬದಲಾವಣೆಗೆ ಸೂಚಿಸಿದೆ.
ಆ ಬಳಿಕ ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಆಹ್ವಾನಿಸುತ್ತಿದ್ದು, ಶೀಘ್ರದಲ್ಲೇ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಮಾರ್ಗದ ಉದ್ಘಾಟನೆಗೆ ದಿನಾಂಕ ನಿಗದಿಪಡಿಸಲಾಗುವುದು ಎಂದು ಹೇಳಿದರು.
ಗೋದಾವರಿ ಹೊರಗೆ: ಇಲ್ಲಿನ ಮೆಜೆಸ್ಟಿಕ್‌ನಿಂದ ಮಲ್ಲೇಶ್ವರಂನ ಸಂಪಿಗೆ ರಸ್ತೆ ರೈಲ್ವೆ ನಿಲ್ದಾಣದ ವರೆಗೆ ಸುರಂಗ ಕಾಮಗಾರಿಯಲ್ಲಿ ತೊಡಗಿದ್ದ ‘ಗೋದಾವರಿ’ ಟಿಬಿಎಂ ಮಂಗಳವಾರ ಮಧ್ಯಾಹ್ನ 12ಗಂಟೆಯ ಸುಮಾರಿಗೆ ಹೊರ ಬರಲಿದೆ. ಇನ್ನು ಎರಡು ತಿಂಗಳೊಳಗೆ ಆ ಮಾರ್ಗದ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.
ಬಸವನಗುಡಿ ನ್ಯಾಷನಲ್ ಕಾಲೇಜಿನಿಂದ ಕನಕಪುರ ರಸ್ತೆ ವರೆಗಿನ ಮೆಟ್ರೊ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ಆ ಮಾರ್ಗದಲ್ಲಿ ಪ್ರಾಯೋಗಿಕ ಪರೀಕ್ಷೆ ಆರಂಭಿಸಲಾಗುವುದು ಎಂದ ಅವರು, ಸಂಚಾರ ದಟ್ಟಣೆ ಕಡಿಮೆ ಮಾಡಲು ಮೆಟ್ರೋ ರೈಲು ಸಂಚಾರ ತ್ವರಿತ ಆರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಟೆಂಡರ್: ಇಲ್ಲಿನ ಬಸವೇಶ್ವರ ವೃತ್ತದಿಂದ ಹೆಬ್ಬಾಳದ ವರೆಗೆ 1,200ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ರಸ್ತೆ ಮೇಲ್ಸೇತುವೆ ಕಾಮಗಾರಿಗೆ ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಾರ್ಜ್ ನುಡಿದರು.
ಉಪನಗರ ರೈಲು: ಮಂಡ್ಯ-ಕೆಂಗೇರಿ, ತುಮಕೂರು-ಯಶವಂತಪುರ, ವೈಟ್‌ಫೀಲ್ಡ್-ಬೈಯಪ್ಪನಹಳ್ಳಿ ವರೆಗಿನ ಸಬ್‌ಅರ್ಬನ್ ರೈಲ್ವೆ ಮಾರ್ಗಕ್ಕೆ ಕೇಂದ್ರ ಸರಕಾರ ಒಪ್ಪಿಗೆ ನೀಡಿದೆ. ಹೀಗಾಗಿ ತ್ವರಿತವಾಗಿ ಡಿಪಿಆರ್ ಸಿದ್ಧಪಡಿಸಿ ಪ್ರಕ್ರಿಯೆ ಆರಂಭಿಸಲು ಕ್ರಮ ವಹಿಸಲಾಗುವುದು ಎಂದರು.
‘ಬಿಡಿಎ ಬದಲಿ ನಿವೇಶನ ಹಂಚಿಕೆ ವಿಷಯಕ್ಕೆ ಸಂಬಂಧಪಟ್ಟಂತೆ ನಿವೃತ್ತ ಐಎಎಸ್ ಅಧಿಕಾರಿ ಶಶಿಧರ್ ಸಮಿತಿ ನೀಡಿರುವ ವರದಿ ಆಧರಿಸಿಯೇ ರಾಜ್ಯ ಸರಕಾರ ಕ್ರಮ ಕೈಗೊಂಡಿದ್ದು, ಹನುಮಂತೇಗೌಡಗೆ ಮಂಜೂರು ಮಾಡಿದ್ದ ನಿವೇಶನವನ್ನು ಹಿಂಪಡೆಯಲಾಗಿದೆ. ಅಲ್ಲದೆ, ರಾಜೇಶ್‌ಗೌಡಗೆ ಹಬ್ಬಾಳದ ಬಳಿ ಬದಲಿ ಭೂಮಿ ಮಂಜೂರಾತಿ ಸದಾನಂದ ಗೌಡ ಸಿಎಂ ಆಗಿದ್ದ ವೇಳೆ ಆಗಿತ್ತು. ಸರಕಾರ ಯಾವುದೇ ನಿಯಮ ಉಲ್ಲಂಘಿಸಿಲ್ಲ’
-ಕೆ.ಜೆ.ಜಾರ್ಜ್, ಬೆಂಗಳೂರು ನಗರಾಭಿವೃದ್ಧಿ ಸಚಿವ.







