ಸಿಡಿಮದ್ದು: ಇನ್ನಷ್ಟು ಶುಲ್ಕವನ್ನು ಬೇಡುತ್ತಿರುವ ರಾಜಕಾರಣಿಗಳು

ಒಂದು ಪಾಠವನ್ನು ಕಲಿಯಲು ನೂರಾ ಎಂಟು ಅಮಾಯಕರು ತಮ್ಮ ಪ್ರಾಣವನ್ನು ಕಳೆದುಕೊಳ್ಳುವುದು ಸಣ್ಣ ಶುಲ್ಕವೇನೂ ಅಲ್ಲ. ಕೊಲ್ಲಂ ಜಿಲ್ಲೆಯ ದೇವಸ್ಥಾನದ ಜಾತ್ರೆಯಲ್ಲಿ ಸಿಡಿಮದ್ದು ಸಿಡಿತದ ಪರಿಣಾಮಗಳೇನು ಎನ್ನುವ ಪಾಠಕ್ಕೆ ನಾವು ತೆತ್ತ ಶುಲ್ಕ ಸಾಲದು ಎನ್ನುತ್ತಿದೆ ನಮ್ಮ ಸರಕಾರ ಮತ್ತು ನ್ಯಾಯಾಲಯ. ಅವು ಇನ್ನಷ್ಟು ದೊಡ್ಡ ಶುಲ್ಕವನ್ನು ಬೇಡುತ್ತಿವೆ. ಅಲ್ಲಿಯವರೆಗೆ ಜಾತ್ರೆಗಳಲ್ಲಿ ಸಿಡಿಮದ್ದು ಸ್ಫೋಟ ಮುಂದುವರಿಯಲಿ ಎಂದು ಹೇಳುತ್ತಿವೆ. ಮುಂದಿನ ತಿಂಗಳು ಕಠಿಣ ಚುನಾವಣೆಯನ್ನು ಎದುರಿಸಲು ಸಜ್ಜಾಗು ತ್ತಿರುವ ವೇಳೆಯಲ್ಲೇ ಈ ದುರಂತ ನಡೆದಿರುವುದು ರಾಜಕಾರಣಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಈ ಹಿಂದೆ ಸಿಡಿಮದ್ದು ಪ್ರದರ್ಶನದ ಮುಂದೆ ಜಿಲ್ಲಾಡಳಿತ ಅಸಹಾಯಕವಾದುದು, ಭಾವನಾತ್ಮಕ ವಿಷಯ ಎಂಬ ಕಾರಣಕ್ಕೆ. ಒಂದು ವೇಳೆ ಸಿಡಿಮದ್ದು ಪ್ರದರ್ಶನಕ್ಕೆ ಅನುಮತಿ ನೀಡದೇ ಇದ್ದರೆ, ಹಿಂದೂ ವಿರೋಧಿ ನೀತಿ ಎಂದು ಅದನ್ನು ಬಿಜೆಪಿ ಬಳಸಿ ಕೊಳ್ಳುವ ಸಾಧ್ಯತೆಗಳಿದ್ದವು. ಜಿಲ್ಲಾಡಳಿತವನ್ನು ಉಮ್ಮನ್ ಚಾಂಡಿ ಸರಕಾರದೊ ಳಗಿರುವವರೇ ಬ್ಲಾಕ್‌ಮೇಲ್ ಮಾಡಿದರು. ಇದೇ ಸಂದರ್ಭದಲ್ಲಿ, ಸ್ಥಳೀಯ ಬಡ ಜನರ ಅಳಲು ಯಾರಿಗೂ ಕೇಳಿಸಲಿಲ್ಲ. ಒಟ್ಟಿನಲ್ಲಿ, ಇದಕ್ಕಾಗಿ ನಾವು ತೆತ್ತ ಬೆಲೆ ನೂರಕ್ಕೂ ಅಧಿಕ ಜೀವಗಳು. ಮತ್ತು ಸಾವಿರಾರು ಗಾಯಾಳುಗಳ ಕಣ್ಣೀರು. ಇಷ್ಟಾದರೂ ಪಾಠ ಕಲಿಯಲು ಸಿದ್ಧರಿಲ್ಲದ ಜನರ ಕುರಿತಂತೆ ನಾವು ಇಂದು ಯೋಚಿಸಬೇಕಾಗಿದೆ. ರಾಜ್ಯದ ದೇವಸ್ಥಾನಗಳ ಜಾತ್ರೆ ಸಂದರ್ಭ ಬಾಣಬಿರುಸಿನ ಪ್ರದರ್ಶನಕ್ಕೆ ಅವಕಾಶ ನೀಡಬಾರದು ಎಂದು ಹಲವು ಮಂದಿ ಆಗ್ರಹಿಸಿದರೂ, ರವಿವಾರ ಆರಂಭವಾಗಿರುವ ತ್ರಿಶ್ಶೂರ್ ಪೂರಂ ಜಾತ್ರೆ ಮತ್ತೆ ಸಿಡಿಮದ್ದಿನ ಆಕರ್ಷಕ ಪ್ರದರ್ಶನಕ್ಕೆ ವೇದಿಕೆಯಾಗುತ್ತಿದೆ. ಬಾಣಬಿರುಸಿನ ಆಟಾಟೋಪಕ್ಕೆ ಆಡಳಿತ ಯಂತ್ರ ಕಡಿವಾಣ ಹಾಕಿಲ್ಲ. ಮುಖ್ಯಮಂತ್ರಿ ತಮ್ಮ ಪಕ್ಷಕ್ಕೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೆಲ ಮತಗಳನ್ನು ಉಳಿಸಿಕೊಳ್ಳುವ ಸಲುವಾಗಿ ಕೆಲ ಚತುರ ಕುಟಿಲೋಪಾಯವನ್ನು ಮಾಡಲೇಬೇಕಾಯಿತು. ಕಾಂಗ್ರೆಸ್‌ನ ಕೈತಪ್ಪಿ ಹೋಗುವ ಮತಗಳನ್ನು ಉಳಿಸಿಕೊಳ್ಳಲು ಚಾಂಡಿ, ತ್ರಿಶೂರ್‌ಪೂರಂ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.
ಎಪ್ರಿಲ್ 10ರಂದು ಪುಟ್ಟಿಂಗಲ್ ದುರಂತ ಸಂಭವಿಸಿದ ಬಳಿಕ, ಕೇರಳದಲ್ಲಿ ಸಿಡಿಮದ್ದು ಪ್ರದರ್ಶನ ನಿಷೇಧಿಸಬೇಕು ಎಂಬ ಸಾರ್ವಜನಿಕ ಅಭಿಪ್ರಾಯ ದಟ್ಟವಾಗುತ್ತಿದೆ. ಬಾಣಬಿರುಸು ಪ್ರದರ್ಶನ ದೇವಸ್ಥಾನದ ಉತ್ಸವಗಳ ಭಾಗವಲ್ಲ ಎಂದು ಶಬರಿಮಲೆಯ ಮುಖ್ಯ ಅರ್ಚಕ ಹಾಗೂ ತಂತ್ರಿ ಸ್ಪಷ್ಟಪಡಿಸುತ್ತಾರೆ. ವರ್ಕಲಾದ ಶಿವಗಿರಿ ಮಠದ ಸ್ವಾಮಿ ಪ್ರಕಾಶಾನಂದ ಕೂಡಾ, ದೇಗುಲಗಳಲ್ಲಿ ಬಾಣಬಿರುಸು ಪ್ರದರ್ಶನವನ್ನು ಟೀಕಿಸುತ್ತಾರೆ. ಕೆಲ ದೇವಸ್ಥಾನಗಳು ಈ ಪ್ರದರ್ಶನ ಕೈಬಿಟ್ಟಿದ್ದರೆ ಇದನ್ನು ಅನುಸರಿಸಿದ ಕೆಲ ಚರ್ಚ್ ಗಳು ಕೂಡಾ ಬಾಣಬಿರುಸು ಆಡಂಬರ ನಿಷೇಧಿಸಿವೆ.
ಬಾಣಬಿರುಸು ಪ್ರದರ್ಶನಕ್ಕೆ ಹೇರುವ ನಿರ್ಬಂಧಗಳು ಪರಿಣಾಮಕಾ ರಿಯಲ್ಲ; ಈ ಕಾರಣದಿಂದ ಇವುಗಳನ್ನು ನಿಷೇಧಿಸುವುದೇ ಸೂಕ್ತ ಎಂದು ಕೇರಳ ಪೊಲೀಸ್ ಮಹಾನಿರ್ದೇಶಕ ಟಿ.ಪಿ.ಸೇನ್‌ಕುಮಾರ್ ಹೇಳಿದ್ದಾರೆ. ಕೇರಳ ಹೈಕೋರ್ಟ್ ಎಪ್ರಿಲ್ 12ರಂದು ಉನ್ನತ ಶಕ್ತಿಶಾಲಿ ಸಿಡಿಮದ್ದನ್ನು ನಿಷೇಧಿಸಿ ಮಧ್ಯಾಂತರ ಆದೇಶ ಹೊರಡಿಸಿದೆ.
ಅದಾಗ್ಯೂ ಎಲ್ಲ ದೇವಸ್ಥಾನಗಳ ಆಡಳಿತಾಧಿಕಾರಿಗಳು ಹಾಗೂ ಆಡಳಿತ ಮಂಡಳಿಗಳು ನಿಷೇಧದ ಪರವಾಗಿ ನಿಂತಿಲ್ಲ. ಏಕೆಂದರೆ ಹಲವು ಮಂದಿ ಭಕ್ತರು ಬಾಣಬಿರುಸಿನ ಪ್ರದರ್ಶನವನ್ನು ಬೆಂಬಲಿಸಿದ್ದಾರೆ. ಇದರಲ್ಲಿ ಧಾರ್ಮಿಕ ಭಾವನೆಗಳಿಗಿಂತ, ಕೆಲ ಗುತ್ತಿಗೆದಾರರು, ಸಿಡಿಮದ್ದು ಮಾಫಿಯಾದ ಹಿಂದಿರುವ ಬೃಹತ್ ಕುಳಗಳ ಕೈಗಳು ಎದ್ದು ಕಾಣುತ್ತವೆ. ದೇವಳಗಳ ಹೆಸರಿನಲ್ಲಿ ಸಂಗ್ರಹಿಸಿಟ್ಟ ಸಿಡಿಮದ್ದುಗಳು ಇತರ ವ್ಯವಹಾರಗಳಿಗೂ ಬಳಕೆಯಾಗುತ್ತವೆ. ನಾಳೆ ಸಿಡಿಮದ್ದು ಪ್ರದರ್ಶನವನ್ನು ರದ್ದು ಪಡಿಸಿದರೆ ಅದರಿಂದ ಹಲವು ಕುಳಗಳು ನಷ್ಟ ಅನುಭವಿಸಬೇಕಾಗುತ್ತದೆ. ವಿಪರ್ಯಾಸವೆಂದರೆ ಈ ಸಿಡಿಮದ್ದು ಪ್ರದರ್ಶನಕ್ಕೆ ಇತರ ಧರ್ಮೀಯರೂ ಪರೋಕ್ಷ ಬೆಂಬಲ ನೀಡಿರುವುದು. ಅಂದರೆ ಈ ಉದ್ಯಮದ ಹಿಂದೆ ಇತರ ಧರ್ಮೀಯರ ಪಾತ್ರಗಳೂ ಇವೆ ಎನ್ನುವುದನ್ನು ಎತ್ತಿ ತೋರಿಸುತ್ತದೆ. ಇದು ಕೇವಲ ಸಿಡಿಮದ್ದುಗಳಿಗಷ್ಟೇ ಸೀಮಿತಗೊಂಡಿಲ್ಲ. ಉತ್ಸವದ ಹೆಸರಿನಲ್ಲಿ ಆನೆಯನ್ನು ನಗರದಲ್ಲಿ ಪರೇಡ್ ಮಾಡುವುದನ್ನು ನಿರ್ಬಂಧಿಸಲು ಅರಣ್ಯ ಇಲಾಖೆ ನಿರ್ಧರಿಸುವುದರೊಂದಿಗೆ ಸಮಸ್ಯೆ ಮತ್ತಷ್ಟು ಜಟಿಲವಾಗಿದೆ. ಆನೆಗಳನ್ನು ದಿನಕ್ಕೆ ಮೂರು ಗಂಟೆಗಿಂತ ಅಧಿಕ ಕಾಲ ಮೆರವಣಿಗೆ ಮಾಡುವಂತಿಲ್ಲ. ಜತೆಗೆ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಆನೆ ಮೆರವಣಿಗೆ ನಡೆಯುವಂತಿಲ್ಲ ಎಂದು ನಿರ್ಬಂಧ ವಿಧಿಸಿತು. ಇದರಿಂದ ತ್ರಿಶೂರ್‌ಪೂರಂನಲ್ಲಿ ಹಲವು ವರ್ಷಗಳಿಂದ ನಡೆದುಕೊಂಡು ಬಂದ ಸಂಪ್ರದಾಯವನ್ನು ನಿರ್ಬಂಧಿಸಿದಂತಾಗಿದೆ.
ಆದರೆ ಸಂಘಟಕರು ಈ ಬಗ್ಗೆ ದೂರು ನೀಡಿದ ತಕ್ಷಣ, ಮುಖ್ಯಮಂತ್ರಿ ಉಮ್ಮನ್ ಚಾಂಡಿ ತಕ್ಷಣ ಮಧ್ಯಪ್ರವೇಶಿಸಿದರು. ಹಾಗೂ ಅರಣ್ಯ ಸಚಿವ ತಿರುವಾಂಕೂರ್ ರಾಧಾಕೃಷ್ಣ ಪ್ರಾಮಾಣಿಕವಾಗಿ ಇಲಾಖೆಯ ಸುತ್ತೋಲೆಯನ್ನು ವಾಪಸು ಪಡೆದರು. ಸೆರೆ ಹಿಡಿದ ಆನೆಗಳ (ಆಡಳಿತ ಹಾಗೂ ನಿರ್ವಹಣೆ) ನಿಯಮಾವಳಿಯ ಷರತ್ತುಗಳು ಇದುವರೆಗೂ ರಾಜ್ಯದ ಕಾನೂನು ಆಗಿ ಮಾರ್ಪಟ್ಟಿಲ್ಲ ಎಂಬ ಕಾರಣ ನೀಡಿ ಸಚಿವರು ಷರತ್ತು ವಾಪಸು ಪಡೆದರು.
ಒಟ್ಟಿನಲ್ಲಿ, ಕೇರಳದಲ್ಲಿ ಸಿಡಿಮದ್ದುಗಳು ಕೇವಲ ದೇವಸ್ಥಾನಗಳ ಜೊತೆಗಷ್ಟೇ ಸಂಬಂಧಹೊಂದಿಲ್ಲ. ಅವುಗಳಿಗೆ ರಾಜಕೀಯ, ಉದ್ಯಮಿಗಳ ಜೊತೆಗೂ ಗಾಢ ಸಂಬಂಧವಿದೆ ಎನ್ನುವುದನ್ನು ಇತ್ತೀಚಿನ ಬೆಳವಣಿಗೆಗಳು ಬಹಿರಂಗಗೊಳಿಸಿವೆ. ಅಂದರೆ, ಸಿಡಿಮದ್ದು ಮತ್ತು ಆನೆಗಳ ಬಳಕೆ ಸಂಪೂರ್ಣ ನಿಷೇಧವಾಗಬೇಕಾದರೆ ಕೇರಳ ರಾಜ್ಯ ಇನ್ನಷ್ಟು ಮನುಷ್ಯ ಜೀವಗಳನ್ನು ಬೇಡುತ್ತಿವೆ. ಬೃಹತ್ ದುರಂತವೊಂದು ಸಂಭವಿಸುವುದರ ನಿರೀಕ್ಷೆಯಲ್ಲಿ ಕೇರಳ ಇದೆ. ಅತ್ಯಧಿಕ ಬುದ್ಧಿವಂತರು, ವಿದ್ಯಾವಂತರಿರುವ ಕೇರಳದಲ್ಲೇ ಸ್ಥಿತಿ ಇಷ್ಟು ಚಿಂತಾಜನಕವಾದರೆ, ಇನ್ನುಳಿದ ರಾಜ್ಯಗಳಲ್ಲಿ ಸಿಡಿಮದ್ದು ಮತ್ತು ಆನೆಗಳ ಬಳಕೆ ನಿಷೇಧಿಸುವುದನ್ನು ನಿರೀಕ್ಷಿಸುವುದಾದರೂ ಹೇಗೆ.







