ಬರದ ಬವಣೆ ನೀಗಿಸಲು ರೈಲಿನಲ್ಲಿ ‘ಜಲಯಾನ’
2013ರ ಜನವರಿಯಲ್ಲಿ ಮಹಾರಾಷ್ಟ್ರ ಪ್ರಪ್ರಥಮ ಬಾರಿಗೆ ಬರಪೀಡಿತ ಪ್ರದೇಶಗಳಿಗೆ ರೈಲುಗಳ ಮೂಲಕ ನೀರು ಸಾಗಣೆಯ ಸಾಧ್ಯತೆಯನ್ನು ಪರಿಶೀಲಿಸಿತ್ತು. ಬರದಿಂದ ತತ್ತರಿಸಿರುವ ಮರಠಾವಾಡಾಕ್ಕೆ ಕುಡಿಯುವ ನೀರಿನ ಪೂರೈಕೆಗೆ ರೈಲನ್ನು ಬಳಸಲು ಅದು ನಿರ್ಧರಿಸಿತ್ತು. ದಿನಂಪ್ರತಿ 5 ಲಕ್ಷ ಲೀಟರ್ ನೀರಿನ ಸಾಗಣೆಗೆ ವ್ಯವಸ್ಥೆ ಮಾಡಲು ರೈಲ್ವೆ ಜೊತೆ ಪ್ರಾಥಮಿಕ ಹಂತದ ಮಾತುಕತೆಗಳನ್ನು ನಡೆಸಿರುವುದಾಗಿ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ಸಂಪುಟ ಸಭೆಯಲ್ಲಿ ತಿಳಿಸಿದ್ದರು.
ಕಳೆದ ವರ್ಷವೂ ಮರಾಠಾವಾಡ ಪ್ರಾಂತ್ಯ ಬರಗಾಲಕ್ಕೆ ಸಾಕ್ಷಿಯಾದಾಗ, ಮತ್ತೊಮ್ಮೆ ರೈಲಿನಲ್ಲಿ ನೀರು ಪೂರೈಸುವ ಬಗ್ಗೆ ಸರಕಾರ ಚಿಂತಿಸಿತ್ತು. ಆದರೆ ಈ ವರ್ಷವೂ ಬರಗಾಲ ಉಲ್ಬಣಿಸಿದ ಹಿನ್ನೆಲೆಯಲ್ಲಿ ಪಂಡರಾಪುರದ ಉಜನಿ ಅಣೆಕಟ್ಟೆಯಿಂದ 190 ಕಿ.ಮೀ. ದೂರದ ಲಾತೂರ್ ಜಿಲ್ಲೆಗೆ ನೀರು ಸಾಗಿಸಲು ನಿರ್ಧರಿಸಿತ್ತು. ಅಂತಿಮವಾಗಿ ಸರಕಾರವು ಲಾತೂರ್‌ನಿಂದ 342 ಕಿ.ಮೀ. ದೂರದ ಸಾಂಗ್ಲಿ ಜಿಲ್ಲೆಯ ಮೀರಜ್ ನಗರದಿಂದ ನೀರು ಪೂರೈಕೆಗೆ ತೀರ್ಮಾನಿಸಿದೆ. ನೀರು ಪೂರೈಕೆ ಮಾಡುವ ರೈಲು ಕ್ರಮಿಸುವ ಅತ್ಯಧಿಕ ದೂರದ ರೈಲುಮಾರ್ಗ ಇದಾಗಿದೆ.
ದ್ರಾಕ್ಷೆ, ಕಬ್ಬು, ಬಾಳೆಹಣ್ಣು ಹಾಗೂ ಕಪ್ಪುದ್ರಾಕ್ಷೆ ಬೆಳೆಗಳಿಂದ ಸಮೃದ್ಧವಾಗಿರುವ ಹೊಲಗಳಿಂದ ಕೂಡಿರುವ ಸಾಂಗ್ಲಿ ಜಿಲ್ಲೆಯಲ್ಲಿ ತಾವು ಹಲವು ವರ್ಷಗಳಿಂದ ನೀರಿನ ಸಮಸ್ಯೆಯನ್ನು ಎದುರಿಸಿಯೇ ಇಲ್ಲವೆಂದು ರೈತರು ಹೇಳುತ್ತಾರೆ. ಅಲ್ಲಿನ ಇತರ ನಿವಾಸಿಗಳು ಕೂಡಾ ತಮಗೆ ದಿನಕ್ಕೆ ಎರಡು ಸಲ ನೀರು ಪೂರೈಕೆಯಾಗುತ್ತಿರುವುದಾಗಿ ತಿಳಿಸಿದ್ದಾರೆ. ಲಾತೂರ್‌ಗೆ ಪ್ರಯಾಣಿಸುವ ಜಲ ಪೂರೈಕೆ ರೈಲಿಗೆ ಪುಣೆಯ ವಿಭಾಗೀಯ ರೈಲ್ವೆ ಮ್ಯಾನೇಜರ್ ಬಿ.ಕೆ.ದಾದಾಬಾಯ್ ‘ಜಲದೂತ್’ ಎಂದು ಹೆಸರಿಸಿದ್ದಾರೆ. ಕೃಷ್ಣಾ ನದಿಗೆ ಕಟ್ಟಲಾಗಿರುವ ವರ್ಣಾ ಅಣೆಕಟ್ಟಿನ ನೀರನ್ನು ತೆಗೆದು ಲಾತೂರ್‌ಗೆ ಸಾಗಿಸಲಾಗುತ್ತಿದೆ.
ಇಲ್ಲಿಂದ ಲಾತೂರ್‌ಲು ತಲುಪಲು 25 ತಾಸು ಬೇಕಾಗಿದ್ದು, 10 ಟ್ಯಾಂಕ್ ವ್ಯಾಗನ್‌ಗಳೊಂದಿಗೆ ಪ್ರತಿ ಸಲದ ರೈಲು ಓಡಾಟಕ್ಕೆ 25 ಲಕ್ಷ ರೂ. ವೆಚ್ಚ ತಗಲುತ್ತಿದೆ. ಮುಂಬರುವ ದಿನಗಳಲ್ಲಿ ಪ್ರತಿ ಪ್ರಯಾಣದಲ್ಲೂ 50 ಬೋಗಿಗಳಲ್ಲಿ ನೀರು ಸಾಗಿಸುವ ಬಗ್ಗೆಯೂ ರೈಲ್ವೆ ಗಂಭೀರವಾಗಿ ಚಿಂತಿಸುತ್ತಿದೆ.
ಟ್ಯಾಂಕ್ ವ್ಯಾಗನ್‌ಗಳನ್ನು ಸಾಮಾನ್ಯವಾಗಿ ಪೆಟ್ರೋಲ್, ಖಾದ್ಯ ಎಣ್ಣೆ, ಕಾಕಂಬಿ ಹಾಗೂ ಕಚ್ಚಾ ತೈಲವನ್ನು ಸಾಗಾಟ ಮಾಡಲು ಬಳಸಲಾಗುತ್ತದೆ ಎಂದು ಉಪಮುಖ್ಯ ಮೆಕಾನಿಕಲ್‌ಇಂಜಿನಿಯರ್ ಹರಿಪಾಲ್ ಸಿಂಗ್ ಹೇಳುತ್ತಾರೆ.
ಇದೀಗ ಕುಡಿಯುವ ನೀರು ಸಾಕಣೆಗಾಗಿ ವ್ಯಾಗನ್‌ಗಳನ್ನು ಹಬೆಯಿಂದ ಸ್ವಚ್ಛಗೊಳಿಸಲಾಗುತ್ತದೆ. ಆನಂತರ ಅವುಗಳನ್ನು ರಾಸಾಯನಿಗಳನ್ನು ಬಳಸಿ ಸ್ವಚ್ಛಗೊಳಿಸಲಾಗುತ್ತದೆ, ಹಾಗೂ ಕೊನೆಯದಾಗಿ ಅದನ್ನು ಅಧಿಕ ಒತ್ತಡದ ನೀರಿನ ಜೆಟ್‌ಗಳಿಂದ ಶುದ್ಧಗೊಳಿಸಲಾಗುತ್ತದೆ ಎಂದವರು ಹೇಳಿದರು.
ನಿದ್ದೆಯಿಲ್ಲದ ಲಾತೂರ್...
ಲಾತೂರ್ ನಿಲ್ದಾಣದಲ್ಲಿಯೂ ಜಲದೂತ್‌ಗೆ ವಿಶೇಷ ಸ್ವಾಗತ ದೊರೆಯುತ್ತದೆ. ರೈಲ್ವೆ ಕೂಡಾ ‘ವಾಟರ್‌ಟ್ರೈನ್’ಗಾಗಿಯೇ ಮುಖ್ಯ ನಿಲ್ದಾಣದ ಹಿಂಭಾಗದಲ್ಲಿ ಹಳಿಯೊಂದನ್ನು ನಿರ್ಮಿಸಿದ್ದು, ಅಲ್ಲಿ ಅದು ನಿಲುಗಡೆಗೊಳ್ಳುತ್ತದೆ. 850 ಮೀ. ವಿಸ್ತೀರ್ಣದ ಆರ್‌ಸಿಸಿ ಪೈಪ್‌ಲೈನ್‌ಗಳ ಮೂಲಕ ವ್ಯಾಗನ್‌ಗಳಿಂದ ನೀರನ್ನು ಖಾಲಿ ಮಾಡಲಾಗುತ್ತದೆ. ಈ ನೀರನ್ನು ಬೃಹತ್ ಬಾವಿಯೊಂದರಲ್ಲಿ ತುಂಬಿಸಲಾಗುತ್ತದೆ. ಅಲ್ಲಿಂದ ನೀರನ್ನು ಬರಪೀಡಿತರಿಗೆ ಪೂರೈಕೆ ಮಾಡಲು ಸಾಗಿಸಲಾಗುತ್ತದೆ.
ಆರ್‌ಸಿಸಿ ಪೈಪ್‌ಲೈನನ್ನು ರೈಲಿನ ಮೊದಲ ಪ್ರಾಯೋಗಿಕ ಓಡಾಟಕ್ಕೆ ಮುನ್ನ ಅಳವಡಿಸಲಾಯಿತು. ಸಾಂಗ್ಲಿ ಜಿಲ್ಲೆಯ ಉಸ್ತುವಾರಿಯಾದ ಮಹಾರಾಷ್ಟ್ರದ ಕಂದಾಯ ಸಚಿವ ಏಕನಾಥ್ ಖಾಡ್ಸೆ , ಎಪ್ರಿಲ್ 5ರಂದು ಲಾತೂರ್‌ಗೆ ರೈಲಿನಲ್ಲಿ ನೀರು ಸಾಗಾಟ ಮಾಡುವುದಾಗಿ ಘೋಷಿಸಿದ ಬೆನ್ನಲ್ಲೇ ತಾವು ಈ ನಿಟ್ಟಿನಲ್ಲಿ ಕಾರ್ಯಾರಂಭಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ರೈಲಿನಲ್ಲಿ ನೀರು ಸಾಗಿಸುವ ಮಹಾರಾಷ್ಟ್ರ ಸರಕಾರದ ಕ್ರಮಕ್ಕೆ ಮರಾಠಾವಾಡ ಪ್ರಾಂತ್ಯದಲ್ಲಿ ಅಂತಹ ಉತ್ಸಾಹದ ಪ್ರತಿಕ್ರಿಯೆಯೇನೂ ಲಭ್ಯವಾಗಿಲ್ಲ. ಅಂದಹಾಗೆ ರೈಲಿನಲ್ಲಿ ನೀರು ಸಾಗಾಟವು ಭಾರತಕ್ಕೆ ಹೊಸದೇನೂ ಅಲ್ಲ. ಕಳೆದ 14 ವರ್ಷಗಳಿಂದ ರಾಜಸ್ಥಾನವು ತನ್ನ ಬರಪೀಡಿತ ಜಿಲ್ಲೆಗಳಿಗೆ ನೀರು ಪೂರೈಕೆಗಾಗಿ ರೈಲ್ವೆಯನ್ನು ಬಳಸಿಕೊಳ್ಳುತ್ತಿದೆ. ಈ ವರ್ಷದ ಜನವರಿಯಿಂದೀಚೆಗೆ ಆ ರಾಜ್ಯದ ಸಾರ್ವಜನಿಕ ಆರೋಗ್ಯ ಉತ್ತೇಜನಾ ಇಲಾಖೆ (ಪಿಎಚ್‌ಇಡಿ) ಇಲಾಖೆಯು ಅಜ್ಮೀರ್‌ನಿಂದ ಬಿಲ್ವಾರಾಗೆ ದಿನಂಪ್ರತಿ 50 ವ್ಯಾಗನ್‌ಗಳ ರೈಲಿನಲ್ಲಿ 25 ಲಕ್ಷ ಲೀಟರ್ ನೀರನ್ನು ಸಾಗಿಸುತ್ತದೆ. ಕಳೆದ ವರ್ಷ ರಾಜಸ್ಥಾನದ ಎಲ್ಲಾ ಜಿಲ್ಲೆಗಳನ್ನು ತೀವ್ರ ಬರಪೀಡಿತವೆಂದು ಘೋಷಿಸಲಾಗಿತ್ತು.
ಮುಖ್ಯವಾಗಿ ಅಜ್ಮೀರ್‌ನ ಜವಾಯ್ ಅಣೆಕಟ್ಟಿನಿಂದ ನೀರನ್ನು ಪಡೆಯಲಾಗುತ್ತದೆಯೆಂದು ನೈಋತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ತರುಣ್ ಜೈನ್ ತಿಳಿಸುತ್ತಾರೆ. ಈ ಅಣೆಕಟ್ಟು 78,875 ದಶಲಕ್ಷ ಕ್ಯೂಬಿಕ್ ಅಡಿಯಷ್ಟು ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದೆ.
‘ರೈಲು ಬಿಲ್ವಾರಾದ ಮಂಡಲ್ ರೈಲು ನಿಲ್ದಾಣಕ್ಕೆ ಆಗಮಿಸುತ್ತಿ ದ್ದಂತೆಯೇ ಜನರು ಬಕೆಟ್ ಹಾಗೂ ಪೈಪ್‌ಗಳೊಂದಿಗೆ ವ್ಯಾಗನ್‌ಗಳ ಮೇಲೇರುತ್ತಿದ್ದರು. ತಮಗೆ ಸಾಧ್ಯವಿರುವಷ್ಟು ನೀರನ್ನು ಸಂಗ್ರಹಿಸಿಕೊಳ್ಳುತ್ತಿದ್ದರು. ರೈಲ್ವೆ ರಕ್ಷಣಾ ಪಡೆ ಕೂಡಾ ಅವರ ಬಗ್ಗೆ ಕಠಿಣವಾಗಿ ವರ್ತಿಸುತ್ತಿರಲಿಲ್ಲ. ಅಲ್ಲಿನ ಜನರಿಗೆ ಕುಡಿಯಲು ನೀರಷ್ಟೇ ಬೇಕಾಗಿತ್ತು. ಆದಾಗ್ಯೂ ಅವರಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹಿಸಲು ಸಾಧ್ಯವಾಗುತ್ತಿರಲಿಲ್ಲವೆಂದು ಆಗ ಮಂಡಲ್ ನಿಲ್ದಾಣದ ಸ್ಟೇಶನ್ ಮಾಸ್ಟರ್ ಆಗಿದ್ದ ಅನ್ವರ್ ಅಲಿ ಖಾನ್ ಸ್ಮರಿಸಿಕೊಳ್ಳುತ್ತಾರೆ. ಆದರೆ ಭಾರತದ ಪ್ರಪ್ರಥಮ ಜಲ ರೈಲು, 1986ರ ಮೇ 2ರಂದು ಸಂಚಾರ ಆರಂಭಿಸಿತ್ತು. 200 ಕಿ.ಮೀ. ದೂರದವರೆಗೆ 3.7 ಲಕ್ಷ ಲೀಟರ್ ಕುಡಿಯುವ ನೀರನ್ನು ಹೊತ್ತ ಈ ರೈಲು ಹೊರಡಲು ಶಿಳ್ಳೆ ಹೊಡೆಯುತ್ತಿದ್ದಂತೆಯೇ ನಿಲ್ದಾಣದಲ್ಲಿ ಜಮಾಯಿಸಿದ್ದ ಸಹಸ್ರಾರು ಮಂದಿ ಹರ್ಷೋದ್ಘಾರ ಮಾಡಿದರು.
1980ರ ದಶಕದಲ್ಲಿ ಗುಜರಾತ್‌ನ ಸೌರಾಷ್ಟ್ರ ಪ್ರಾಂತ್ಯವು ಸತತವಾಗಿ ಬರಗಾಲಗಳನ್ನು ಕಂಡಿತ್ತು. 1986ರ ಫೆಬ್ರವರಿಯಲ್ಲಿ ಸೌರಾಷ್ಟ್ರದ ಅತಿ ದೊಡ್ಡ ನಗರವಾದ ರಾಜ್‌ಕೋಟ್‌ನಲ್ಲಿ ಕೆರೆ, ಬಾವಿ ಸೇರಿದಂತೆ ಎಲ್ಲಾ ಜಲಸಂಪನ್ಮೂಲಗಳ ಸಂಪೂರ್ಣ ಬತ್ತಿಹೋಗಿದ್ದವು. ಆಗ , ಹೊರಗಿನಿಂದ ನೀರು ಪಡೆಯದೆ ನಮಗೆ ಬೇರೆ ದಾರಿಯೇ ಇರಲಿಲ್ಲವೆಂದು ಆಗ ರಾಜ್‌ಕೋಟ್‌ನ ನಗರಪಾಲಿಕೆ ಸದಸ್ಯರಾಗಿದ್ದ ಜನಕ್ ಕೋಟಕ್ ಹೇಳುತ್ತಾರೆ. ಈ ಹಿನ್ನೆಲೆಯಲ್ಲಿ ಆಗಿನ ಮೇಯರ್ ವಜುಭಾಯಂ ವಾಲಾ ಅವರು ರಾಜ್ಯ ಸರಕಾರಕ್ಕೆ ಪತ್ರ ಬರೆದು,ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಏನಾದರೂ ಪ್ರಯತ್ನ ಮಾಡುವಂತೆಯೂ, ಇಲ್ಲದಿದ್ದಲ್ಲಿ ಇಡೀ ನಗರದ ಜನತೆ ಗುಳೆ ಹೋಗುವಂತಹ ಪರಿಸ್ಥಿತಿ ಬರಲಿದೆಯೆಂದು ಎಚ್ಚರಿಕೆ ನೀಡಿದ್ದರು.
ವಿದೇಶಗಳಲ್ಲಿಯೂ ವಾಟರ್ ರೈಲು 1800 ಶತಮಾನದಲ್ಲೇ ಆಸ್ಟ್ರೇಲಿಯ ದೇಶವು ನೀರಿನ ಸಾಗಣೆಗೆ ರೈಲು ಜಾಲವನ್ನು ಬಳಸಿಕೊಂಡಿತ್ತು. 1952ರಲ್ಲಿ ಬರಪೀಡಿತ ನ್ಯೂಸೌತ್‌ವೇಲ್ಸ್‌ನ ಗಣಿಗಾರಿಕೆಯ ನಗರ ಬ್ರೋಕನ್ ಹಿಲ್‌ಗೆ ದಿನಂಪ್ರತಿ ಆರು ರೈಲುಗಳಲ್ಲಿ ನೀರನ್ನು ಸಾಗಿಸಲಾಗುತ್ತಿತ್ತು. 2008ರಲ್ಲಿ ಆಸ್ಟ್ರೇಲಿಯವು ನೀರಿನ ಅಭಾವದಿಂದ ತತ್ತರಿಸಿದ್ದ ಉತ್ತರ ಕ್ವೀನ್ಸ್‌ಲ್ಯಾಂಡ್‌ಗೆ, ರೈಲಿನಲ್ಲಿ ನೀರು ಸಾಗಿಸಿತ್ತು.
ಅಮೆರಿಕ ಕೂಡಾ ವಾಟರ್ ಟ್ರೈನ್‌ಗಳನ್ನು ಬಹಳ ಸಮಯದಿಂದಲೇ ಬಳಸುತ್ತಾ ಬಂದಿದೆ. 1971ರ ಇಲಿನಾಯ್ಸಾ ಸಂಸ್ಥಾನದ ಜಲ ಸಮೀಕ್ಷೆ ಪ್ರಕಾರ 1905, 1925 ಹಾಗೂ 1945ರಲ್ಲಿ ರೈಲ್ವೆ ಟ್ಯಾಂಕರ್‌ಗಳ ಮೂಲಕ ಬರಪೀಡಿತ ವೌಂಟ್ ವೆರ್ನೊನ್‌ಗೆ ನೀರು ಪೂರೈಕೆ ಮಾಡಲಾಗಿತ್ತು. 1945ರ ಕಾರ್ಯಾಚರಣೆಯಲ್ಲಿ 100 ಟ್ಯಾಂಕರ್‌ಗಳಲ್ಲಿ 45 ದಿನಗಳ ಕಾಲ ನೀರು ಸಾಗಿಸಲಾಗಿದ್ದು, ಇದಕ್ಕಾಗಿ 50 ಸಾವಿರ ಡಾಲರ್ ವೆಚ್ಚ ತಗಲಿತ್ತು. 2015ರಲ್ಲಿಯೂ ಸತತ ನಾಲ್ಕು ವರ್ಷಗಳಿಂದ ಬರದ ಸುಳಿಗೆ ಸಿಲುಕಿರುವ ಕ್ಯಾಲಿಫೋರ್ನಿಯಾದ ಕೆಲವು ಪ್ರದೇಶಗಳಿಗೆ ಕುಡಿಯುವ ನೀರನ್ನು ಒದಗಿಸಲು ಕಿರು ರೈಲುಗಳನ್ನು ಬಳಸುವ ಪ್ರಸ್ತಾಪವನ್ನು ಅಮೆರಿಕ ಮುಂದಿಟ್ಟಿತ್ತು.