ಎಸಿಬಿ ರಚನೆಯಲ್ಲಿ ಮಧ್ಯ ಪ್ರವೇಶವಿಲ್ಲ: ಹೈಕೋರ್ಟ್
ಬೆಂಗಳೂರು, ಎ.18: ಎಸಿಬಿ ರಚನೆ ವಿಚಾರ ವಿಭಾಗೀಯ ಪೀಠದಲ್ಲಿ ವಿಚಾರಣಾ ಹಂತದಲ್ಲಿರುವುದರಿಂದ ಮಧ್ಯಪ್ರವೇಶಿಸುವುದಿಲ್ಲ ಎಂದು ಹೈಕೋರ್ಟ್ ಏಕಸದಸ್ಯ ಪೀಠ ಅಭಿಪ್ರಾ ಯಪಟ್ಟಿದೆ.
ಈ ಸಂಬಂಧ ಡಾ.ವಿ.ಎಲ್.ನಂದೀಶ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎನ್.ವೇಣುಗೋಪಾಲಗೌಡ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೆ, ವಿಚಾರಣೆಯನ್ನು ಎ.25ಕ್ಕೆ ಮುಂದೂಡಿದೆ. ಲೋಕಾಯುಕ್ತದ ಶಕ್ತಿಯನ್ನು ಕುಂದಿಸಲು ಸರಕಾರ ಎಸಿಬಿಯನ್ನು ರಚಿಸಿದೆ. ಹೀಗಾಗಿ, ಎಸಿಬಿಯನ್ನು ರದ್ದುಗೊಳಿಸಬೇಕೆಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರಿಂದ ನ್ಯಾಯಾಪೀಠವು ಎಸಿಬಿ ರಚನೆ ವಿಚಾರ ವಿಭಾಗೀಯ ಪೀಠದಲ್ಲಿರುವುದರಿಂದ ಮಧ್ಯಪ್ರವೇಶಿಸುವುದಿಲ್ಲ ಎಂದು ಅಭಿಪ್ರಾಯಿಸಿತು.
ರಾಜ್ಯದಲ್ಲಿ ಎಸಿಬಿ ಸುಸಜ್ಜಿತವಾಗಿ ರಚನೆಯಾಗುವವರೆಗೂ ಲೋಕಾಯುಕ್ತದಲ್ಲಿ ದಾಖಲಾಗಿರುವ 1640 ಪ್ರಕರಣಗಳನ್ನು ಎಸಿಬಿಗೆ ವರ್ಗಾಯಿಸಬಾರದು ಹಾಗೂ ಎಸಿಬಿಯಲ್ಲಿ ದಾಖಲಾಗಿರುವ ಪ್ರಕರಣಗಳ ಬಗ್ಗೆ ವಿವರಣೆ ನೀಡಬೇಕೆಂದು ನ್ಯಾಯಪೀಠ ಸೂಚಿಸಿತು.
ಲೋಕಾಯುಕ್ತ ಪೊಲೀಸರು ಲೋಕಾಯುಕ್ತ ಇಲಾಖೆಯಲ್ಲಿ ಖಾಲಿ ಕುಳಿತಿದ್ದು, ಎಸಿಬಿ ರಚನೆಯಾಗುವ ವರೆಗಾದರೂ ಪ್ರಕರಣಗಳನ್ನು ವರ್ಗಾಯಿಸಬೇಡಿ ಎಂದು ಹೈಕೋರ್ಟ್, ಹೆಚ್ಚುವರಿ ಅಡ್ವೋಕೇಟ್ ಜನರಲ್ ಪೊನ್ನಣ್ಣಗೆ ಸೂಚನೆ ನೀಡಿತು.
ಕುಡಿಯಲು ನೀರಿಲ್ಲ: ರಾಜ್ಯದ 165 ತಾಲೂಕುಗಳಲ್ಲಿ ಭೀಕರ ಬರಗಾಲವಿದ್ದು, ಸರಕಾರ ಏನು ಕ್ರಮ ಕೈಗೊಂಡಿದೆ ಎಂದು ನ್ಯಾಯಮೂರ್ತಿ ವೇಣುಗೋಪಾಲಗೌಡ ಅವರಿದ್ದ ನ್ಯಾಯಪೀಠ ಸರಕಾರಿ ಹೆಚ್ಚುವರಿ ಅಡ್ವೋಕೇಟ್ ಜನರಲ್ ಶಿವಣ್ಣ ಅವರನ್ನು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಶಿವಣ್ಣ ಅವರು ಸರಕಾರ ಭೀಕರ ಬರಗಾಲವಿರುವ ತಾಲೂಕುಗಳಿಗೆ ಟ್ಯಾಂಕರ್‌ಗಳಿಂದ ನೀರನ್ನು ಸರಬರಾಜು ಮಾಡುತ್ತಿದ್ದು, ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರೂ ಬರಗಾಲವಿರುವ ತಾಲೂಕುಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸುತ್ತಿದ್ದಾರೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.







