ಅನಂತ್ ಅಂಬಾನಿ ಬಳಿಕ ‘ತೂಕ’ ಕಳೆದುಕೊಂಡ ಮಹಾರಾಷ್ಟ್ರ ಸಿಎಂ
ಮೂರು ತಿಂಗಳಲ್ಲಿ 18 ಕೆ.ಜಿ. ಭಾರ ಇಳಿಸಿಕೊಂಡ ಫಡ್ನವೀಸ್
ವ್ಯಾಪಾರ ಕ್ಷೇತ್ರದ ದಿಗ್ಗಜ ಮುಖೇಶ್ ಅಂಬಾನಿಯವರ ಮಗ ಅನಂತ್ ಇತ್ತೀಚೆಗೆ ಭಾರೀ ತೂಕ ಕಳೆದುಕೊಂಡು ಅಚ್ಚರಿ ಮೂಡಿಸಿದ್ದರು. ಇದೀಗ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಅವರ ಸರದಿ. ದೇಹ ತೂಕ ಇಳಿಸಿಕೊಂಡವರ ಕ್ಲಬ್‌ಗೆ ಹೊಸ ಸೇರ್ಪಡೆ ಎನಿಸಿದ ಇವರು ಮೂರು ತಿಂಗಳಲ್ಲಿ 18 ಕೆ.ಜಿ. ತೂಕ ಕಳೆದುಕೊಂಡಿದ್ದಾರೆ.
ಮುಂಬೈ ಮಿರರ್ ವರದಿಯ ಪ್ರಕಾರ, ಫಡ್ನವೀಸ್ ಕಳೆದ ವರ್ಷದ ಡಿಸೆಂಬರ್‌ನಲ್ಲಿ ವೈದ್ಯರ ಸಲಹೆ ಪಡೆದು 122 ಕೆ.ಜಿ.ಯನ್ನು ಕಡಿಮೆ ಮಾಡಿಕೊಳ್ಳಲು ನಿರ್ಧರಿಸಿದರು. ವೈದ್ಯರು ಹೇಳಿದ ಆಹಾರ ಪಥ್ಯವನ್ನು ಅನುಸರಿಸಿ ಇದೀಗ 104 ಕೆ.ಜಿ.ಗೆ ಅವರ ತೂಕ ಇಳಿದಿದೆ. ಅವರ ಚಿಕಿತ್ಸೆಯಲ್ಲಿ, ಚಯಾಪಚಯ ಕ್ರಿಯೆಯನ್ನು ಉತ್ತೇಜಿಸುವ ಔಷಧ ಒಳಗೊಂಡಿದ್ದು, ಹಾಗೂ ಸಮರ್ಪಕ ಆಹಾರ ಪದ್ಧತಿಯನ್ನು ಅನುಸರಿಸಿದ್ದು ತೂಕ ಇಳಿಕೆಗೆ ಮುಖ್ಯ ಕಾರಣ ಎನ್ನುತ್ತಾರೆ ವೈದ್ಯೆ ಜಯಶ್ರೀ ತೋಡ್ಕರ್.
ಇದು ಅವರ ಮಧುಮೇಹ ಸಮಸ್ಯೆಯನ್ನು ನಿಯಂತ್ರಿಸಲು ಕೂಡಾ ಕಾರಣವಾಗಿದೆ ಎಂದು ಚಯಾಪಚಯ ಹಾಗೂ ಕೊಬ್ಬಿನ ಅಂಶ ಶಸ್ತ್ರಚಿಕಿತ್ಸಾ ತಜ್ಞೆಯಾಗಿರುವ ಅವರು ಹೇಳುತ್ತಾರೆ.
ಈ ಮೊದಲು ಅವರು ತೂಕ ಕಳೆದುಕೊಂಡಿದ್ದರು. ಆದರೆ ಕೆಲಸದ ಒತ್ತಡ ಹಾಗೂ ವೇಳಾಪಟ್ಟಿಯ ನಿಯತವಾಗಿಲ್ಲದ ಕಾರಣದಿಂದ ಮತ್ತೆ ತೂಕ ಹೆಚ್ಚಿತು. ನಾನು 5-6 ಕೆ.ಜಿ. ತೂಕ ಇಳಿಸಿಕೊಂಡದ್ದನ್ನು ನೋಡಿ ಉತ್ತೇಜಿತರಾಗಿದ್ದಾರೆ ಎಂದು ಪತ್ನಿ ಅಮೃತಾ ಹೇಳುತ್ತಾರೆ.