ಕಾಸರಗೋಡು: ಕೊಲೆ ಆರೋಪಿ ಸೆರೆ
.jpg)
ಕಾಸರಗೋಡು, ಎ.18: ಬೇಕಲ ಕೋಟಿಕುಳಂ ರೈಲ್ವೆ ನಿಲ್ದಾಣ ಸಮೀಪದ ಇಸ್ತ್ರಿ ಅಂಗಡಿ ಮಾಲಕ ತಮಿಳುನಾಡು ತಂಜಾವೂರಿನ ಅಶೋಕ್ (50) ಎಂಬವರನ್ನು ಕತ್ತುಹಿಸುಕಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ಬೇಕಲ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಚೆನ್ನೈ ಪುದುಕೋಟೆಯ ಕಾರ್ತಿಕ್ (26) ಎಂದು ಗುರುತಿಸಲಾಗಿದೆ.
ಆರೋಪಿಯು ಪಾಲಕ್ಕುನ್ನುವಿನ ಕ್ಷೌರದಂಗಡಿಯಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದು, ಚೆನ್ನೈಗೆ ತೆರಳಿದ್ದ ವಿಶೇಷ ಪೊಲೀಸ್ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಜ.27 ರಂದು ಇಸ್ತ್ರಿ ಅಂಗಡಿ ಮಾಲಕ ಅಶೋಕ್‌ರ ಮೃತದೇಹ ಅವರು ವಾಸವಾಗಿದ್ದ ಕೋಟಿಕುಳಂನ ಬಾಡಿಗೆ ಮನೆಯಲ್ಲಿ ಕೊಲೆಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಆರೋಪಿ ಕಾರ್ತಿಕ್‌ನ ಭಾವಚಿತ್ರ ಲಭಿಸಿದ್ದು, ಈತ ನಾಪತ್ತೆಯಾಗಿದ್ದರಿಂದ ಈತನೇ ಕೊಲೆಗೈದಿದ್ದಾನೆ ಎನ್ನುವುದು ಪೊಲೀಸರಿಗೆ ಸ್ಪಷ್ಟವಾಗಿತ್ತು. ತಲೆಮರೆಸಿಕೊಂಡಿದ್ದ ಆರೋಪಿಯು ಚೆನ್ನೈನಲ್ಲಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಚೆನ್ನೈಗೆ ತೆರಳಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.







