ಕಳವಾರು: ನಿರ್ವಸಿತ ಕಾರ್ಮಿಕರಿಂದ ಜೆಬಿಎಫ್ ಕಂಪೆನಿ ವಿರುದ್ಧ ಪ್ರತಿಭಟನೆ

ಸುರತ್ಕಲ್, ಎ.18: ಕಳವಾರಿನಲ್ಲಿರುವ ಜೆಬಿಎಫ್ ಪೆಟ್ರೋ ಕೆಮಿಕಲ್ಸ್ ಕಂಪೆನಿಯು ನಿರ್ವಸಿತ ಕಾರ್ಮಿಕರಿಗೆ ಉದ್ಯೋಗ, ವೇತನ, ವೈದ್ಯಕೀಯ ಚಿಕಿತ್ಸೆಗೆ ಸಂಬಂಧಿಸಿ ತಾರತಮ್ಯ ಎಸಗುತ್ತಿದೆ ಎಂದು ಆರೋಪಿಸಿ ಇದರ ವಿರುದ್ಧ ಕಂಪೆನಿಯ ನಿರ್ವಸಿತ ಕಾರ್ಮಿಕರು ಎಂಸೆಝ್ ನಿರ್ವಸಿತರ ಹೋರಾಟ ಸಮಿತಿ ನೇತೃತ್ವದಲ್ಲಿ ಕಳೆದ 3 ದಿನಗಳಿಂದ ಕಂಪೆನಿಯ ಬಳಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಕಂಪೆನಿಯ ಇತರ ಉದ್ಯೋಗಿಗಳಂತೆ ನಮಗೂ ಸೌಲಭ್ಯಗಳನ್ನು ನೀಡಬೇಕು. ವೇತನ, ಉದ್ಯೋಗದಲ್ಲಿ ತಾರತಮ್ಯ ಎಸಗಬಾರದು ಎಂದು ನಿರ್ವಸಿತ ಕಾರ್ಮಿಕರು ಆಗ್ರಹಿಸಿದರು.
ಇದಕ್ಕೂ ಮೊದಲು ಕಾರ್ಮಿಕರು ವಿವಿಧ ಬೇಡಿಕೆಗಳನ್ನು ಮುಂದಿಟ್ಟು 3 ವಾರಗಳಿಂದ ಕಂಪೆನಿಯ ಮುಂಭಾಗದಲ್ಲ್ಲಿ ಧರಣಿ ನಡೆಸುತ್ತಿದ್ದರು. ಆದರೆ, ಕಂಪೆಯು ಇದರ ವಿರುದ್ಧ ನ್ಯಾಯಾಲಯದ ಮೂಲಕ ತಡೆಯಾಜ್ಞೆ ತಂದಿದೆ. ಈ ಹಿನ್ನೆಲೆಯಲ್ಲಿ ಕಳೆದ 3 ದಿನಗಳಿಂದ ಕಂಪೆನಿಯ ಹೊರಭಾಗದಲ್ಲಿರುವ ಸೆಕ್ಯೂರಿಟಿ ಕೊಠಡಿ ಬಳಿ ಕಾರ್ಮಿಕರು ಧರಣಿ ಹಮ್ಮಿಕೊಂಡಿದ್ದಾರೆ. ಈವರೆಗೂ ಕಂಪೆನಿಯ ಪ್ರತಿನಿಧಿಗಳಾಗಲಿ, ಸ್ಥಳೀಯ ಜನ ಪ್ರತಿ ನಿಧಿಗಳಾಗಲಿ ನಮ್ಮನ್ನು ಸಂಪರ್ಕಿಸಿಲ್ಲ ಎಂದು ಧರಣಿನಿರತರು ಬೇಸರ ವ್ಯಕ್ತಪಡಿಸಿದ್ದಾರೆ.
ಸೆಝ್ ಕಂಪೆನಿ ಸ್ಥಾಪನೆಗೆಂದು ಬಜ್ಪೆ ಪರಿಸರದ ಕಳವಾರು, ಪೆರ್ಮದೆ, ಚಂದ್ರಹಾಸ ನಗರ, ಜೋಕಟ್ಟೆ ನಿವಾಸಿಗಳ ನಿವೇಶನ ಗಳನ್ನು ಕಂಪೆನಿ ಪಡೆದುಕೊಂಡಿತ್ತು. ಈವೇಳೆ ಉತ್ತಮ ವೇತನದ ಜೊತೆಗೆ ಉತ್ತಮ ಉದ್ಯೋಗ ಕಲ್ಪಿಸುವ ಭರವಸೆ ನೀಡಿತ್ತು. ಆದರೆ ಇದೀಗ ಕಂಪೆನಿಯು ನಿರ್ವಸಿತ ಕಾರ್ಮಿಕರನ್ನು ಕಡೆಗಣಿಸಿ ಉದ್ಯೋಗ, ವೇತನ, ವೈದ್ಯಕೀಯ ಚಿಕಿತ್ಸೆ ಸೇರಿದಂತೆ ಮೂಲ ಸೌಕರ್ಯಗಳನ್ನು ನೀಡದೆ ಸತಾಯಿಸುತ್ತಿದೆ ಎಂದು ನೌಕರರು ಆರೋಪಿಸಿದ್ದಾರೆ.
ಎಂಆರ್‌ಪಿಎಲ್, ಸೆಝ್ ಕಂಪೆನಿಗಳು ಕಾರ್ಮಿಕರಿಗೆ ಕಲ್ಪಿಸುತ್ತಿರುವ ಸೌಲಭ್ಯಗಳ ಕನಿಷ್ಠ ಸೌಲಭ್ಯಗಳನ್ನೂ ಜೆಬಿಎಫ್ ಪೆಟ್ರೋ ಕೆಮಿಕಲ್ಸ್ ಕಂಪೆನಿ ನೀಡುತ್ತಿಲ್ಲ ಎಂದು ಆರೋಪಿಸಿರುವ ನಿರ್ವಸಿತ ನೌಕರರು, 2001ರಲ್ಲಿ ಕಂಪೆನಿಗಾಗಿ ತರಬೇತಿ ಪಡೆದಿದ್ದ 160 ನಿರ್ವಸಿತರಲ್ಲಿ 3 ವರ್ಷಗಳಿಂದಷ್ಟೇ ಕೆಲವರಿಗೆ ಉದ್ಯೋಗ ಕಲ್ಪಿಸಿದೆ. ಈವರೆಗೆ ಕೇವಲ 59 ಮಂದಿಗೆ ಮಾತ್ರ ಕೆಲಸ ನೀಡಲಾಗಿದೆ. ಇನ್ನೂ 101 ಮಂದಿ ಕೆಲಸದ ಆದೇಶ ಪತ್ರ ಬರುವ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ. ಸದ್ಯ ಈ ಕಂಪೆನಿಯಲ್ಲಿ ಸುಮಾರು 180 ಕೆಲಸಗಾರರಿದ್ದಾರೆ.
ಪೊಲೀಸರ ನಿರ್ಲಕ್ಷ:
ಪ್ರತಿಭಟನೆಯ ಬಗ್ಗೆ ಸುರತ್ಕಲ್ ಪೊಲೀಸರು ಹಾಗೂ ಎಸಿಪಿ ಯವರಿಗೆ ಪತ್ರ ಮುಖೇನ ಅನುಮತಿ ಸಹಿತ ರಕ್ಷಣೆ ಕೋರಿದ್ದೇವೆ. ಈ ಪತ್ರಕ್ಕೆ ಸಹಿ ಸಮೇತ ಮೊಹರು ಒತ್ತಿ ಹಿಂಬರಹ ನೀಡಿದ್ದ ಪೊಲೀಸ್ ಇಲಾಖೆ ರಕ್ಷಣೆ ಬಿಡಿ, ಸ್ಥಳಕ್ಕೆ ಭೇಟಿ ನೀಡುವ ಗೋಜಿಗೆ ಹೋಗಿಲ್ಲ ಎಂದು ಪ್ರತಿಭಟನಾ ನಿರತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.





