ಟ್ಯಾಂಕರ್ ಪಲ್ಟಿಯಾದದನ್ನು ಕಂಡ ಈ ಆಟೊ ಚಾಲಕ ಏನು ಮಾಡಿದ ಗೊತ್ತೆ?
ಸೂರಿಕುಮೇರು ಗ್ಯಾಸ್ ಟ್ಯಾಂಕರ್ ಪಲ್ಟಿ ಪ್ರಕರಣ

ಬಂಟ್ವಾಳ: ''ತಾನು ಮಾಣಿಗೆ ಬಾಡಿಗೆಗೆಂದು ಹೋಗಿ ವಾಪಸ್ ಬರುವಷ್ಟರಲ್ಲಿ ಸೂರಿಕುಮೇರು ತಿರುವಿನಲ್ಲಿ ಗ್ಯಾಸ್ ತುಂಬಿದ್ದ ಟ್ಯಾಂಕ್ ಪಲ್ಟಿಯಾಗಿ ಬಿದ್ದಿತ್ತು. ತಕ್ಷಣ ಅನತಿ ದೂರದಲ್ಲಿ ಆಟೊ ರಿಕ್ಷವನ್ನು ನಿಲ್ಲಿಸಿ ಟ್ಯಾಂಕರ್ ಬಳಿ ದೌಡಾಯಿಸಿದೆ. ಚಾಲಕ ಹಾಗೂ ಕ್ಲೀನರ್‌ನನ್ನು ಹುಡುಕಾಡಿದೆ. ಅಷ್ಟರಲ್ಲಿ ಅವರು ಪಲ್ಟಿಯಾದ ಟ್ಯಾಂಕರ್‌ನ ಒಳಗಡೆಯಿಂದ ಸುರಕ್ಷಿತವಾಗಿ ಹೊರಬರುತ್ತಿದ್ದರು. ಅಷ್ಟೊತ್ತಿಗಾಗಲೇ ಟ್ಯಾಂಕರ್‌ನ ಒಂದು ಬದಿಯಿಂದ ಒಮ್ಮೆಲೆ ಬುಸ್ಸೆಂದು ಅನಿಲ ಹೊರ ಬಂತು. ಇದರಿಂದ ಭಯಭೀತನಾದ ನಾನು ತಕ್ಷಣ ಅಕ್ಕಪಕ್ಕದ ಮನೆಯವರನ್ನು ಎಬ್ಬಿಸಿ ಜಾಗೃತರನ್ನಾಗಿಸಿದೆ.''
ಹೀಗೆಂದು ವಿವರಣೆ ನೀಡಿದವರು ಘಟನೆಯ ಪ್ರತ್ಯಕ್ಷ ಸಾಕ್ಷಿಯಾದ ಆಟೋ ಚಾಲಕ ಹನೀಫ್ ಅವರು.
ಸ್ಥಳಕ್ಕೆ ಭೇಟಿ ನೀಡಿದ ’ವಾರ್ತಾ ಭಾರತಿ’ಯೊಂದಿಗೆ ಘಟನೆಯ ವಿವರ ನೀಡಿದ ಇಲ್ಲಿನ ನಿವಾಸಿ ಆಟೊ ಚಾಲಕ ಹನೀಫ್, ''ಸೋಮವಾರ ರಾತ್ರಿ ಸುಮಾರು 10:30ರ ವೇಳೆ ಟ್ಯಾಂಕರ್ ಪಲ್ಟಿಯಾಗಿ ಬಿದ್ದಿರುವುದನ್ನು ಗಮನಿಸಿದೆ. ಅನತಿ ದೂರದಲ್ಲಿ ರಿಕ್ಷಾವನ್ನು ನಿಲ್ಲಿಸಿ ಟ್ಯಾಂಕರ್ ಹತ್ತಿರ ತೆರಳಿದೆ. ಅಷ್ಟೊತ್ತಿಗೆ ಬುಸ್ಸೆಂದು ಅನಿಲ ಹೊರ ಬಂದು ಭಾರೀ ಶಬ್ದದೊಂದಿಗೆ ಸೋರಿಕೆಯಾಗಲು ಶುರುವಾದವು. ಅಪಾಯದ ಅರಿವಾದ ಕೂಡಲೇ ಸಮೀಪದಲ್ಲಿದ್ದ ಮನೆಯವರಲ್ಲಿ ದೂರ ಓಡುವಂತೆ ಹೇಳುತ್ತಾ ಸಾಗಿದೆ. ನಿದ್ರೆಯಲ್ಲಿದ್ದ ಜನರು ನಾನಾ ದಿಕ್ಕಾಗಿ ಓಡ ತೊಡಗಿದರು'' ಎಂದು ಹೇಳಿದರು.
ದುರಂತ ನಡೆದ ಪ್ರದೇಶದಲ್ಲಿರುವ ನಿವಾಸಿಗಳು ಈ ಘಟನೆಯಿಂದ ಆತಂಕಿತರಾಗಿದ್ದು ತಕ್ಷಣವೇ ತಮ್ಮ ಮನೆಯಿಂದ ಕುಟುಂಬ ಸಮೇತರಾಗಿ ಸುರಕ್ಷಿತ ಸ್ಥಳಕ್ಕೆ ತೆರಳಿದರು. ಅಷ್ಟೊತ್ತಿಗೆ ಈ ಸುದ್ದಿ ಕಾಡ್ಗಿಚ್ಚಿನಂತೆ ಹರಡಿದ್ದು, ವಿಟ್ಲ, ಬಂಟ್ವಾಳ ಪೊಲೀಸರು, ಅಗ್ನಿ ಶಾಮಕ ದಳ ಸ್ಥಳಕ್ಕೆ ದೌಡಾಯಿಸಿ ಮುಂಜಾಗೃತಾ ಕ್ರಮ ಕೈಗೊಂಡರು







