ಮಹಾರಾಷ್ಟ್ರ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿಗೆ ಕೇವಲ 5 ಸ್ಥಾನ! ಕಾಂಗ್ರೆಸ್ ಗೆ 21 ಸ್ಥಾನ

ಮುಂಬೈ:ಮಹಾರಾಷ್ಟ್ರದ ಆರು ನಗರ ಪಂಚಾಯತ್ ಚುನಾವಣೆಯಲ್ಲಿ ಕೇವಲ ಐದು ಸ್ಥಾನ ಪಡೆದು ಬಿಜೆಪಿ ಹೀನಾಯ ಸೋಲು ಅನುಭವಿಸಿದ್ದರೆ, ಕಾಂಗ್ರೆಸ್ 21 ಸ್ಥಾನಗಳನ್ನು ಪಡೆದಿದೆ. ಶಿವಸೇನಾ ಹಾಗೂ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ ತಲಾ 20 ಸ್ಥಾನಗಳನ್ನು ಪಡೆದಿವೆ. ಒಟ್ಟು 102 ಸ್ಥಾನಗಳಿಗೆ ರವಿವಾರ ಮತದಾನ ನಡೆದಿದ್ದರೆ ಸೋಮವಾರ ಮತಎಣಿಕೆ ನಡೆದಿತ್ತು.
ಈ ಚುನಾವಣಾ ಫಲಿತಾಂಶದಿಂದ ಮಾಜಿ ಮಹಾರಾಷ್ಟ್ರ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ನಾರಾಯಣ ರಾಣೆ ತಮ್ಮ ಕಳೆದು ಹೋದ ಪ್ರತಿಷ್ಢೆಯನ್ನು ಮರಳಿ ಪಡೆದಿದ್ದಾರೆ. ರಾಣೆ 2014ನೇ ಅಸೆಂಬ್ಲಿ ಚುನಾವಣೆಯಲ್ಲಿ ಹಾಗೂ 2015ರ ಬಾಂದ್ರಾ ಉಪಚುನಾವಣೆಯಲ್ಲಿ ಸೋಲನ್ನು ಕಂಡಿದ್ದರೆ ಈ ಬಾರಿ ಕಾಂಗ್ರೆಸ್ ಕುಡಾಲ್ ನಗರ ಪಂಚಾಯತಿನಲ್ಲಿ ವಿಜಯ ದಾಖಲಿಸುವಲ್ಲಿ ಸಫಲವಾಗಿದೆ. ಇಲ್ಲಿನ ಒಟ್ಟು 17 ಸ್ಥಾನಗಳಲ್ಲಿರಾಣೆ ನೇತೃತ್ವದ ಕಾಂಗ್ರೆಸ್9 ಸ್ಥಾನಗಳನ್ನುಪಡೆದರೆ, ಬಿಜೆಪಿ ಕೇವಲ ಒಂದು ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಶಿವಸೇನೆ ಹಾಗೂ ಬಿಜೆಪಿ ಈ ಪಂಚಾಯತಿನಲ್ಲಿ ವಿಜಯ ಸಾಧಿಸಬೇಕೆಂದು ಇನ್ನಿಲ್ಲದ ಪ್ರಯತ್ನಗಳನ್ನು ಮಾಡಿದ್ದು ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಕೂಡ ಪ್ರಚಾರ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಒಸ್ಮಾನಾಬಾದಿನ ಲೊಹರ ನಗರ ಪಂಚಾಯತ್ ಚುನಾವಣೆಯಲ್ಲಿ ಶಿವ ಸೇನಾ ಅತ್ಯಾಂತ ಹೆಚ್ಚು ಅಂದರೆ, 9 ಸ್ಥಾನಗಳನ್ನು ಪಡೆದರೆ, ಎನ್‌ಸಿಪಿ (4) ಹಾಗೂ ಕಾಂಗ್ರೆಸ್ (3) ಸ್ಥಾನಗಳನ್ನು ಪಡೆದವು, ಬಿಜೆಪಿ ಇಲ್ಲಿ ಒಂದೂ ಸ್ಥಾನವನ್ನು ಪಡೆದಿಲ್ಲ.
ಸೋಲಾಪುರದ ಮೊಹೊಲ್ ಹಗೂ ಮಧ ನಗರ ಪಂಚಾಯತುಗಳಲ್ಲಿ ಕೂಡ ಶಿವಸೇನೆ ಹಾಗೂ ಎನ್‌ಸಿಪಿ ಬಿಜೆಪಿಯನ್ನು ಹಿಂದಿಕ್ಕಿದವು.





