ನಮ್ಮ ನೀರು ಕದ್ದು ನಮಗೇ ಮಾರುವ ಕಂಪೆನಿಗಳು !

ದೇಶದೆಲ್ಲೆಡೆ ಬರ ಅಮರಿಕೊಂಡಿದೆ, ಬಹಳಷ್ಟು ಕಡೆಗಳಲ್ಲಿ ಪಶುಪಕ್ಷಿಗಳಿರಲಿ, ಮನುಷ್ಯನಿಗೂ ಕುಡಿಯುವ ನೀರು ಸಿಗುತ್ತಿಲ್ಲ. ಅನ್ನ ಬೆಳೆಯೋ ರೈತನಿಗೆ ಕೃಷಿಗೆ ನೀರಿಲ್ಲ, ನೀರಿಲ್ಲದೆ ಕೃಷಿಯಿಲ್ಲ, ಕೃಷಿಯಿಲ್ಲದೆ ಬದುಕಿಲ್ಲ. ಇದು ಜನಸಾಮಾನ್ಯರ ಸ್ಥಿತಿಗತಿ. ಕುಡಿಯಲು ನೀರು ಕೊಡಬೇಕಾದ ಸಾಹುಕಾರ ಸರ್ಕಾರಗಳು ಮೈಮರೆತು ಮಲಗಿಬಿಟ್ಟಿವೆ. ಜಲಾಶಯಗಳೇ ಬತ್ತಿಹೋಗಿವೆ. ಸರ್ಕಾರಗಳಿಗೆ ಜನರಿಗೆ ಪೂರೈಸಲು ನೀರಿಲ್ಲ, ನೀರೇ ಇಲ್ಲದೆ ಅವರೂ ತಾನೇ ಏನು ಮಾಡಿಯಾರು ಅನ್ನುವುದು ನಿಮ್ಮ ಪ್ರಶ್ನೆಯಾದರೆ ಸ್ವಲ್ಪ ತಡೆಯಿರಿ. ತಮಗೆ ಒಂದಷ್ಟು ಪ್ರಶ್ನೆಗಳಿವೆ.
ಸರಿ, ಸರ್ಕಾರಕ್ಕೆ ನೀರು ಕೊಡಲು ಮನಸ್ಸಿದೆ, ಆದರೆ ಜಲಾಶಯಗಳಲ್ಲೇ ನೀರಿಲ್ಲವೆಂದಾದರೆ ಬಾಟಲಿನೀರು ಮಾರುವ ಕಂಪನಿಗಳಿಗೆ ನೀರೆಲ್ಲಿಂದ ಬರುತ್ತೆ. ಈ ಕಂಪನಿಗಳಿಗೆ ಯಾವತ್ತೂ ನೀರಿನ ಕೊರತೆ ಬಂದೇ ಇಲ್ಲವೇಕೆ? ದೇಶದ ಯಾವ ಮೂಲೆಗೆ ಹೋದರೂ ನಿಮಗೆ ಬಾಟಲಿ ನೀರು ಸಿಗುತ್ತದೆ. ಬರಪೀಡಿತ ಊರುಗಳಲ್ಲು ಸಹ. ಈ ಬಾಟಲಿ ನೀರು ಮಾರುವ ಕಂಪನಿಗಳಿಗೆ ಈ ನೀರು ಎಲ್ಲಿಂದ ಪೂರೈಕೆ ಆಗ್ತಿದೆ? ಇವರೇನು ನೀರನ್ನು ಮಾಯಾ ಮ್ಯಾಜಿಕ್ ಮಾಡಿ ಶೂನ್ಯದಿಂದ ಸೃಷ್ಟಿ ಮಾಡ್ತಾರಾ? ಇಲ್ಲ. ಕಾರ್ಖಾನೆಗಳಲ್ಲಿ ಉತ್ಪಾದನೆ ಮಾಡ್ತಾರಾ? ಇಲ್ಲ. ಇವರಿಗೆ ಪುಡಿಗಾಸಿನ ವಾರ್ಷಿಕ ಗುತ್ತಿಗೆ ಕರಾರಿನಡಿಯಲ್ಲಿ ಲೆಕ್ಕವಿಲ್ಲದಷ್ಟು ಮನಸೋ ಇಚ್ಛೆ ನೀರು ಒದಗಿಸುತ್ತಿರುವುದು ಯಾರು? ಇನ್ಯಾರು? ನಮಗೆ ನೀರು ಕೊಡದ ಇದೇ ಕಳ್ಳ ಸರ್ಕಾರಗಳು.
ದೇಶದೊಳಗಿನ ಬಾಟಲಿ ನೀರಿನ ಕಂಪನಿಗಳಲ್ಲಿ ಅತಿಹೆಚ್ಚು ನೀರು ಮಾರುವುದು ಕೋಕಕೋಲ ಅನ್ನೋ ವಿದೇಶಿ ಕಂಪನಿ. ದೇಶದ ಮೂಲೆಮೂಲೆಯಲ್ಲಿ ಫ್ಯಾಕ್ಟರಿ ಹಾಕಿಕೊಂಡಿರೋ ಕೋಕಾಕೋಲ, ಅಂತರ್ಜಲದಿಂದ ದಿನಕ್ಕೆ ಲಕ್ಷಗಟ್ಟಲೆ ಲೀಟರ್ ನೀರು ಕದಿಯುತ್ತಿದೆ. ಇದಕ್ಕೆ ಸ್ಥಳೀಯ ಸಂಸ್ಥೆಗಳಿಗೆ ಕೆಲವೇ ಕೆಲವು ಸಾವಿರ ಹಣವನ್ನ ವರ್ಷದ ಲೆಕ್ಕದಲ್ಲಿ ಕೊಡುತ್ತದೆ. ಎರಡೂವರೆ ರುಪಾಯಿ ಪ್ರೊಡಕ್ಷನ್ ಕಾಸ್ಟ್ ನಲ್ಲಿ ತಯಾರಾಗೋ ಬಾಟಲಿ ನೀರಿಗೆ ಇವರಿಡುವುದು ಮುವ್ವತ್ತು ರುಪಾಯಿ ಬೆಲೆ. ವಾರ್ಷಿಕ ವಹಿವಾಟು ಸಾವಿರ ಕೋಟಿ ದಾಟುತ್ತದೆ. ಕೋಕಾಕೋಲದಂಥ ವಿದೇಶಿ ಕಂಪನಿಗಳು 1200ರಷ್ಟಿವೆ. ಈ ಬ್ರಾಂಡ್ ಕಂಪನಿಗಳು ಅಂತರ್ಜಲದಿಂದ ನಮ್ಮ ನೀರು ಕದ್ದು ನಮಗೇ ಮಾರುತ್ತಿವೆ. ಸಾವಿರಾರು ಕೋಟಿ ಲಾಭ ಮಾಡುತ್ತಿವೆ. ಇವರನ್ನ ಹೇಳುವರೂ ಇಲ್ಲ, ಕೇಳುವರೂ ಇಲ್ಲ.
ಕುತೂಹಲಕ್ಕೊಮ್ಮೆ ಹುಡುಕಾಡಿ ನೋಡಿ. ಈ ನೀರಿನ ಬಾಟಲಿ ಕಂಪನಿಗಳು ಮಾರುತ್ತಿರೋ ನೀರನ್ನ ಸರ್ಕಾರಿ ಲ್ಯಾಬ್ ಗಳಲ್ಲಿ ಟೆಸ್ಟ್ ಮಾಡಿಸಿದ ಹತ್ತಾರು ಪ್ರಸಂಗಗಳು ಸಿಗುತ್ತವೆ. ಟೆಸ್ಟ್ ರಿಸಲ್ಟ್ ಏನಿದೆ ಅಂತಲೂ ಚೆಕ್ ಮಾಡಿ ನೋಡಿ. ಅಂತರ್ಜಲದೊಳಗೆ ಬಸಿದುಕೊಂಡಿರುವ ಕೀಟನಾಶಕದ ಅಂಶ, ಮನುಷ್ಯನ ಮಲಮೂತ್ರದ ಅಂಶ, ಡಿಟಿಟಿ ಪೌಡರ್ ಅಂಶ, ಕ್ಲೋರೈಡ್ ಅಂಶ.. ಹತ್ತಾರು ರಾಸಾಯಾನಿಕ ಅಂಶಗಳು ಕಲಬೆರಕೆ ಮಾಡಿ ಸಿಕ್ಕಿಬಿದ್ದ ಕಂಪನಿಗಳು ನಿಮಗೇ ಕಾಣಸಿಗುತ್ತವೆ. ನಾವು ಸ್ಟೈಲಾಗಿ ಅವನ್ನ ಹಿಡ್ಕೊಂಡು ಓಡಾಡ್ತೀವಿ.
ಇದು ಸರ್ಕಾರದ ಪರ್ಮಿಷನ್ ಜೊತೆಗೇ ನಡೆಯೋ ನೀರಿನ ದರೋಡೆ. ಈ ಬಾಟಲಿ ಕಂಪನಿಗಳಿಗೆ ಇರುವ ನೀರಿನ ಲಭ್ಯತೆ ಸರ್ಕಾರಗಳಿಗೆ ಮಾತ್ರ ಇಲ್ಲ ನೋಡಿ. ನೀರು ಕೇಳಿದರೆ ಪೊಲಿಟಿಶಿಯನ್ ಗಳು, ಅಧಿಕಾರಿಗಳು ಬರಿದಾದ ಜಲಾಶಯಗಳತ್ತ ಬೊಟ್ಟು ಮಾಡುತ್ತಾರೆ. ಆ ಡ್ಯಾಂಗಳ ಪಕ್ಕದಲ್ಲೇ ಫ್ಯಾಕ್ಟರಿ ಹಾಕಿ ನೀರನ್ನು ಅಂತರ್ಜಲದ ಮಟ್ಟದಲ್ಲೇ ಕದಿಯುತ್ತಿರುವ ಕಂಪನಿಗಳತ್ತ ಮಾತ್ರ ಇವರು ನೋಡುವುದೇ ಇಲ್ಲ. ನಮ್ಮದೇ ನೀರು, ನಮ್ಮದೇ ನೆಲ, ಆದ್ರೆ ನೀರು ವಿದೇಶಿ ಕಂಪನಿಗಳದ್ದು. ನಮ್ಮದಲ್ಲ.
ಉಳಿದಂತೆ ದೇಶದೆಲ್ಲೆಡೆ ಬರ, ಜನಕ್ಕೆ ಕುಡಿಯಲು ನೀರಿಲ್ಲ.. ಸರ್ಕಾರಗಳು ಬರ ಅಧ್ಯಯನ ಪ್ರವಾಸದಂಥ ನಾಟಕಗಳನ್ನು ಆಡುತ್ತ ಓತ್ಲ ಹೊಡೆಯುತ್ತಿವೆ. ಜನರು ಅದನ್ನ ನಿಜ ಅಂತ ನಂಬಿದ್ದಾರೆ.







