ನೆರೆಯವರ ಅವಮಾನಕ್ಕೆ ಐಎಎಸ್ ಅಧಿಕಾರಿಯಾಗಿ ಸೇಡು ತೀರಿಸಿಕೊಂಡ ರಿಕ್ಷಾವಾಲಾನ ಮಗ!

ವರಣಾಸಿ, ಎ.19: ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೊ ಬಹಳ ವೈರಲ್ ಆಗಿದೆ. ಅದನ್ನು ನೀವು ತುಂಬ ಸಲ ನಿಮ್ಮ ಫೇಸ್ ಬುಕ್, ವಾಟ್ಸ್‌ಆ್ಯಪ್, ಟ್ವಿಟರ್ ಅಥವಾ ಮಾಧ್ಯಮಗಳಲ್ಲಿ ಖಂಡಿತಾ ನೋಡಿರಬಹುದು. ಈ ಫೋಟೊದಲ್ಲಿ ಒಬ್ಬ ಬಡ ರಿಕ್ಷಾವಾಲಾ ಕಷ್ಟುಪಟ್ಟು ಕಲಿಸಿ ತನ್ನ ಮಗನನ್ನು ಐಎಎಸ್ ಅಧಿಕಾರಿ ಮಾಡಿದ್ದಾನೆ ಎಂದು ಬರೆಯಲಾಗಿದೆ. ಎಬಿಪಿ ನ್ಯೂಸ್‌ನ ವರದಿ ಪ್ರಕಾರ ರಿಕ್ಷಾ ಚಲಾಯಿಸಿ ಮುಗುಳ್ನಗುತ್ತಾ ಕಾಣುತ್ತಿರುವವನ ಹೆಸರು ನಾರಾಯಣ್ ಜೈಸ್ವಾಲ್ ಮತ್ತು ಆ ರಿಕ್ಷಾದಲ್ಲಿ ಕುಳಿತಿರುವ ವ್ಯಕ್ತಿಯ ಹೆಸರು ಗೋವಿಂದ ಜೈಸ್ವಾಲ್ ಎಂದಾಗಿದೆ.
ಈ ಫೋಟೊದ ವಾಸ್ತವಿಕತೆ ನಿಮ್ಮನ್ನು ನಿಬ್ಬೆರಗಿಸದಿರಲಾರದು. ವಾರಣಾಸಿಯ ಜೈತಪುರಾ ಠಾಣೆ ಕ್ಷೇತ್ರದ ಉಸ್ಮಾನುಪುರದಲ್ಲಿ ಗೋವಿಂದ ತನ್ನ ತಂದೆ ಮತ್ತು ಇಬ್ಬರು ಸಹೋದರಿಯರ ಜೊತೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಗೋವಿಂದರ ತಂದೆ ತನ್ನ ಮೂವರು ಮಕ್ಕಳ ಖರ್ಚುವೆಚ್ಚವನ್ನು ರಿಕ್ಷಾಚಲಾಯಿಸಿ ಸರಿದೂಗಿಸುವುದು ತುಂಬ ಕಷ್ಟ ಇತ್ತು. ಆದರೂ ಹೇಗೋ ನಿಭಾಯಿಸಿಕೊಂಡು ಮುಂದುವರಿಯುತ್ತಿದ್ದರು.ಗೋವಿಂದ ಬಾಲ್ಯದಿಂದಲೇ ಒಬ್ಬ ಐಎಎಸ್ ಅಧಿಕಾರಿ ಆಗಲು ಬಯಸುತ್ತಿದ್ದರು. ಆರನೆ ಕ್ಲಾಸ್‌ನಲ್ಲಿ ಕಲಿಯುತ್ತಿದ್ದ ಈ ಬಾಲಕ ಇಂತಹ ಮಾತನ್ನಾಡಿದಾಗ ಗೋವಿಂದರ ತಂದೆ ನಾರಾಯಣ ಜೈಸ್ವಾಲ್‌ರಿೆಗೆ ಆಶ್ಚರ್ಯವಾಗಿತ್ತು. ನಾರಾಯಣ ಜೈಸ್ವಾಲ್ ತನ್ನಮಗ ಗೋವಿಂದನನ್ನು ಪ್ರಾಥಮಿಕ ಶಿಕ್ಷಣಕ್ಕಾಗಿ ಸರಕಾರಿ ಶಾಲೆಗೆ ಸೇರಿಸಿದ್ದರು. ಶಾಲೆಯಲ್ಲಿ ಮೂರು ರೂಪಾಯಿ ಇಪ್ಪತ್ತು ಪೈಸೆ ಶುಲ್ಕ ಭರಿಸಬೇಕಿತ್ತು. ಇದಕ್ಕಿಂತ ಹೆಚ್ಚು ಶುಲ್ಕವನ್ನು ನೀಡಿ ಗೋವಿಂದರಿಗೆ ಕಲಿಸಲು ಅವರಿಗೆ ಸಾಧ್ಯವಿರಲಿಲ್ಲ.
ನೆರೆಯವರ ಅವಮಾನದ ಮಾತು ಜೀವನವನ್ನೇ ಬದಲಾಯಿಸಿತು:
ಗೋವಿಂದರು ಬಾಲ್ಯದಲ್ಲಿ ನೆರೆಯವರೊಡನೆ ಆಟವಾಡುತ್ತಿದ್ದಾಗ ಅವರನ್ನು ಆಟದಿಂದ ಹೊರಗೆ ಹಾಕಲಾಯಿತು. ಯಾಕೆಂದರೆ ಗೋವಿಂದನದ್ದು ತುಂಬ ಬಡ ಕುಟುಂಬವಾಗಿತ್ತು. ಪುಸ್ತಕ ಖರೀದಿಸಲು ಹಣ ಇರಲಿಲ್ಲ. ಸೀನಿಯರ್ ವಿದ್ಯಾರ್ಥಿಗಳಿಂದ ಪುಸ್ತಕವನ್ನು ಪಡೆದು ಕಲಿಯುತ್ತಿದ್ದರು. ಗೋವಿಂದ ಯಾವಾಗಲೂ ತನ್ನ ಕ್ಲಾಸ್‌ನಲ್ಲಿ ಫಸ್ಟ್ ಬರುತ್ತಿದ್ದರಿಂದ ಪುಸ್ತಕ ಕೊಡುವವರು ಕೂಡಾ ನಿರಾಕರಿಸಲಿಲ್ಲ. ಮುಂದಿನ ಕಲಿಯುವಿಕೆಗಾಗಿ ಗೋವಿಂದ ದಿಲ್ಲಿಗೆ ಬರಬೇಕಾಗಿತ್ತು. ದಿಲ್ಲಿಗೆ ಬಂದು ಶಾಲೆಗೆ ಸೇರುವಷ್ಟು ಹಣ ಇರಲಿಲ್ಲ. ಆಗ ಅವರ ತಂದೆ ನಾರಾಯಣ ಜೈಸ್ವಾಲ್ ಮನೆಯ ಜಮೀನನ್ನು ಮಾರಿದರು. ಮಗನ ಮುಂದಿನ ಕಲಿಕೆಗಾಗಿ ದಿಲ್ಲಿಗೆ ಕಳುಹಿಸಿದರು. ದಿಲ್ಲಿಯಲ್ಲಿ ಉಳಿದು ತನ್ನ ಖರ್ಚುವೆಚ್ಚವನ್ನು ಭರಿಸಲಿಕ್ಕಾಗಿ ಎಂಟನೆಯವರೆಗಿನ ಮಕ್ಕಳಿಗೆ ಟ್ಯೂಶನ್ ನೀಡತೊಡಗಿದರು. ಜೊತೆಗೆ ತನ್ನ ಕಲಿಕೆಯನ್ನೂ ಮುಂದುವರಿಸಿದರು. ಹಣದ ಕೊರತೆ ಆಗುತ್ತಿದ್ದಾಗ ಮನೆಯಿಂದ ಸಹೋದರಿ ಹಣ ಕಳುಹಿಸಿಕೊಡುತ್ತಿದ್ದರು. ಆಕೆ ಮನೆಯಲ್ಲಿ ಹೊಲಿಗೆ ಕೆಲಸ ಮಾಡುತ್ತಿದ್ದರು. ಗೋವಿಂದರಿಗೆ ಐಎಎಸ್ ಆಗುವ ದಾರಿ ಸುಲಭದ್ದಾಗಿರಲಿಲ್ಲ. ಆದರೆ ಅವರು ನಿರಂತರ ಪ್ರಯತ್ನಿಸುತ್ತಿದ್ದರು. ಒಂದು ಸಮಯದಲ್ಲಿ ಅವರಿಗೆ ಸಂದರ್ಶನ ಬಂತು.ಆಗ ಸಂದರ್ಶನಕ್ಕೆ ಧರಿಸಲು ಒಳ್ಳೆಯ ಬಟ್ಟೆ ಕೂಡಾ ಅವರಲ್ಲಿರಲಿಲ್ಲ. ಯಾಕೆಂದರೆ ಬಹಳ ಸಮಯದಿಂದ ಬಟ್ಟೆಯನ್ನೇ ಹೊಲಿಸಿರಲಿಲ್ಲ. ಆದ್ದರಿಂದ ಸಹೋದರಿ ಮಮತಾರಿಗೆ ಫೋನ್ ಮಾಡಿದಾಗ ಗರ್ಭಿಣಿಯಾಗಿದ್ದು ಹೆರಿಗೆಗಾಗಿ ತೆಗೆದಿರಿಸಿದ್ದ ಹಣವನ್ನುಕೊಟ್ಟರು ಎಂದು ಗೋವಿಂದ ಭಾವುಕರಾಗಿ ಹೇಳಿದ್ದಾರೆ. ಹೀಗೆ ಗೋವಿಂದ ಐಎಎಸ್ ಅಧಿಕಾರಿಯಾದ ಆ ಒಂದು ದಿನ ಬಂದಿತ್ತು.
ಐಎಎಸ್ ಆದ ಮೇಲೆ ಒಂದು ಘಟನೆ ಜರಗಿತ್ತು. ವಾರಣಾಸಿಯಲ್ಲಿ ಗೋವಿಂದರ ತಂದೆ ರಿಕ್ಷಾ ಓಡಿಸುತ್ತಿದ್ದರು. ಒಂದು ಸಲ ಅವರಿಗೆ ಒಬ್ಬ ಕಾನ್ಸ್‌ಟೇಬಲ್ ಲಾಠಿಯಲ್ಲಿ ಹೊಡೆದಿದ್ದ. ಗೋವಿಂದ ಐಎಎಸ್ ಆದ ವಿಷಯ ತಿಳಿದಾಗ ಆ ಕಾನ್ಸ್‌ಟೇಬಲ್ ಮನೆಗೆ ಬಂದು ಕ್ಷಮೆಯಾಚಿಸಿದ್ದ. ಗೋವಿಂದ ಜೈಸ್ವಾಲ್ ತನ್ನ ಪರಿಶ್ರಮ ಮತ್ತು ಸದೃಢ ಉದ್ದೇಶದೊಂದಿಗೆ ಮುಂದುವರಿದು 2007ರಲ್ಲಿ ಐಎಎಸ್ ಅಧಿಕಾರಿಯಾದರು. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಫೋಟೊ ಒಂದು ಪತ್ರಿಕೆಗಾಗಿ ತೆಗಿಸಿದ್ದು. ಗೋವಿಂದರಿಗೆ ಈಗ ಗೋವಾದಲ್ಲಿ ನೇಮಕಾತಿಯಾಗಿದೆ. ಅವರ ಪತ್ನಿಯೂ ಐಪಿಎಸ್ ಅಧಿಕಾರಿಯಾಗಿದ್ದಾರೆ ಅವರೂ ಗೋವಾದಲ್ಲಿದ್ದಾರೆ ಎಂದು ವರದಿಗಳು ತಿಳಿಸಿವೆ.







