ಕಾಂತಪುರಂ ಉಸ್ತಾದ್‌ರನ್ನು ಭೇಟಿಯಾದ ಕೇರಳ ಮುಖ್ಯಮಂತ್ರಿ

ಕೋಝಿಕ್ಕೋಡ್, ಎಪ್ರಿಲ್ 19: ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಕಾಂತಪುರಂ ಅಬೂಬಕರ್ ಮುಸ್ಲಿಯಾರ್ ಅವರನ್ನು ಭೇಟಿಯಾಗಿದ್ದಾರೆಂದು ವರದಿಗಳು ತಿಳಿಸಿವೆ. ಕಾರಂದೂರು ಮರ್ಕಝ್ ನಲ್ಲಿ ಈ ಭೇಟಿ ನಡೆದಿದ್ದು ಮುಖ್ಯಮಂತ್ರಿಯ ನಂಬಿಕಸ್ಥ ಟಿ. ಸಿದ್ದೀಕ್ ಚುನಾವಣೆಗೆ ನಿಂತಿರುವ ಕುಂದಮಂಗಲಂ ಕ್ಷೇತ್ರದ ವೋಟುಗಳನ್ನು ಖಚಿತಗೊಳಿಸುವುದು ಭೇಟಿಯ ಉದ್ದೇಶವಾಗಿತ್ತು ಎನ್ನಲಾಗಿದೆ. ಜೊತೆಗೆ ಇತರ ವಿಧಾನಸಭಾ ಕ್ಷೇತ್ರಗಳಲ್ಲಿಯೂ ವೋಟು ಖಚಿತಗೊಳಿಸಲು ಉಮ್ಮನ್ ಚಾಂಡಿಯ ಈ ಭೇಟಿಯ ಉದ್ದೇಶವಾಗಿತ್ತು ಎಂದೂ ಹೇಳಲಾಗಿದೆ.
ಆದರೆ ಸಂದರ್ಶನದಲ್ಲಿ ರಾಜಕೀಯ ಇಲ್ಲ ಎಂದು ಉಮ್ಮನ್ ಚಾಂಡಿ ಹೇಳಿಕೊಂಡಿದ್ದಾರೆ. ಸೌಹಾರ್ದ ಭೇಟಿ ಮಾತ್ರ ಇದೆಂದು ಅವರ ಪ್ರತಿಕ್ರಿಯೆಯಾಗಿತ್ತು. ಕೋಝಿಕ್ಕೋಡ್‌ಗೆ ಬಂದಾಗ ಮರ್ಕಝ್ ಗೆ ಬರುವುದು ತನ್ನ ರೂಢಿಯಾಗಿದೆ ಎಂದ ಮುಖ್ಯಮಂತ್ರಿ ಸರಕಾರದ ಮದ್ಯ ನಿರೋಧ ನೀತಿಯಲ್ಲಿ ಬದಲಾವಣೆ ಇಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಮುಖ್ಯಮಂತ್ರಿಯ ಸಂದರ್ಶನದಲ್ಲಿ ರಾಜಕೀಯ ಚರ್ಚೆಯೂ ನಡೆದಿಲ್ಲ ಎಂದು ಎ.ಪಿ.ಅಬೂಬಕರ್ ಮುಸ್ಲಿಯಾರ್ ಕೂಡಾ ತಿಳಿಸಿದ್ದಾರೆ. ಟಿ ಸಿದ್ದೀಕ್ ಕೂಡಾ ಅವರ ಜೊತೆಗಿದ್ದರು ಎಂದು ವರದಿಗಳು ತಿಳಿಸಿವೆ.







