ಬಂಗಾರಮಕ್ಕಿ : ರಾಜಕಾರಣಕ್ಕೆ ಏಕತೆಯ ಬದಲು ವಿಘಟಿಸಿ ಆಳುವಲ್ಲಿಯೇ ಹೆಚ್ಚು ಆಸಕ್ತಿಯಿದೆ - ಡಾ. ರಾಘವೇಂದ್ರ ಪಾಟೀಲ್

ಬಂಗಾರಮಕ್ಕಿ : ಇಂದು ರಾಜಕಾರಣ ಇಡೀ ಸಮಾಜವನ್ನು ಆಳುವ ನೆಲೆಗೆ ಬಂದು ನಿಂತಿರುವುದು ಶೋಚನೀಯ. ರಾಜಕಾರಣಕ್ಕೆ ಏಕತೆಯ ಬದಲು ವಿಘಟಿಸಿ ಆಳುವಲ್ಲಿಯೇ ಹೆಚ್ಚು ಆಸಕ್ತಿಯಿದೆ ಎಂದು ಖ್ಯಾತ ಸಾಹಿತಿ ಡಾ. ರಾಘವೇಂದ್ರ ಪಾಟೀಲ್ ವಿಷಾದಿಸಿದರು. ಸಂಸ್ಕೃತಿಕುಂಭದಲ್ಲಿ ಆಯೋಜನೆಯಾಗಿದ್ದ ವಿಶ್ವ ಮಾನವ್ಯ ಬಹುಭಾಷಾ ಕಾವ್ಯ ಸಮ್ಮೇಳನದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇಂದು ಕಾವ್ಯ ಸಾಹಿತ್ಯ ಎದುರಿಸುತ್ತಿರುವ ಬಿಕಟ್ಟನ್ನು ಅರ್ಥಮಾಡಿಕೊಳ್ಳಬೇಕು. ಇಡೀ ವಿಶ್ವವೇ ಒಂದು ಎನ್ನುವಂತಹ ಸಾಹಿತ್ಯ ಬರುವ ಬದಲು ಜಾತಿ, ಮಥ, ಭಾಷೆಯ ನೆಲೆಯಲ್ಲಿ ಸಮಾಜವನ್ನು ತುಂಡು ತುಂಡು ಮಾಡುವ, ವಿಘಟಿಸುವ ಸಾಹಿತ್ಯ ಬರುತ್ತಿದೆ. ನಮ್ಮ ದೇಶದಲ್ಲಿ ಎಷ್ಟೆಲ್ಲ ವೈರುಧ್ಯ, ಸಮಸ್ಯೆಗಳ ನಡುವೆ ಸಾವಿರಾರು ವರ್ಷಗಳಿಂದ ಎಲ್ಲರೂ ಬದುಕು ನಡೆಸಿದ್ದಾರೆ. ಹೀಗಿರುವಾಗ ನಮಗೆ ವಿಘಟನೆಯತ್ತ ಆಸಕ್ತಿ ಏಕೋ ಅರ್ಥವಾಗುತ್ತಿಲ್ಲ. ಇದರಲ್ಲಿ ರಾಜಕಾರಣದ ಹುನ್ನಾರ ದೊಡ್ಡದಿದೆ ಎಂದು ವಿಷಾದಿಸಿದರು. ಕಾವ್ಯಕ್ಕೆ ವಿಶ್ವ ಮಾನವ್ಯವನ್ನು ಧೇನಿಸುವ ಶಕ್ತಿಯಿದೆ. ನಮ್ಮ ವ್ಯಕ್ತಿತ್ವಕ್ಕೆ ಮಾತೃಪ್ರಜ್ಞೆಯ ದೀಕ್ಷೆ ಕೊಡುವ ಕಾರ್ಯವನ್ನು ಕಾವ್ಯ, ಸಾಹಿತ್ಯ ಮಾಡಲಿ ಎಂದು ಅವರು ಆಶಿಸಿದರು. ಉದ್ಘಾಟನೆ
ಕಾವ್ಯಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಸಾಹಿತಿ ಡಾ. ಗುರುಲಿಂಗ ಕಾಪ್ಸೆ , ಇಂದು ಸಮಾಜದಲ್ಲಿ ಮಾನವೀಯತೆಯೇ ಮರೆಯಾಗುತ್ತಿದೆ. ಸ್ವಾರ್ಥತೆ ಹೆಚ್ಚುತ್ತಿದೆ. ಕುವೆಂಪು, ಬೇಂದ್ರೆ ಅವರು ತಮ್ಮ ಕಾವ್ಯದಲ್ಲಿ ವಿಶ್ವ ಮಾನವ್ಯದ ಸಂದೇಶ ಸಾರಿದ್ದಾರೆ. ನಮ್ಮಲ್ಲಿ ಇಂದು ಮಾನವ ಸಂಬಂಧ ಬೆಳೆಸುವ, ಪ್ರೀತಿ ಹೆಚ್ಚಿಸುವ ಕಾವ್ಯ ಬರಬೇಕು ಎಂದರು. ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀ ಮಾರುತಿ ಗುರೂಜಿಯವರು, ಕವಿಗಳು, ಸಾಹಿತಿಗಳಿಗೆ ವಿಶ್ವಕ್ಕೆ ಮಾರ್ಗದರ್ಶನ ಮಾಡುವ ಶಕ್ತಿಯಿದೆ. ಸಂಸ್ಕೃತಿ ಪರಂಪರೆ ಉಳಿಸುವ ಕಾರ್ಯ ಆಗಲಿ ಎಂದರು.
ಕವಿಗೋಷ್ಠಿ ನಂತರ ನಡೆದ ಕವಿಗೋಷ್ಟಿಯಲ್ಲಿ ಪ್ರೊ. ರವೀಂದ್ರ ಕೊಪ್ಪದ ಗದಗ, ಚಂದ್ರಿಕ ಪಿ ಬೆಂಗಳೂರು, ರಾಜೇಶ್ವರಿ ತಮಿಳುನಾಡು, ಪಾಯಲ ಮುರುಳಿಕೃಷ್ಣ ಆಂಧ್ರಪ್ರದೇಶ, ರಾಧಾಕೃಷ್ಣನ್ ಕೇರಳ, ಡಾ. ಚೇತನಕುಮಾರ ನಾಯ್ಕ ಕಾರವಾರ, ಡಾ. ಸೈಯದ್ ಜಮಿರುಲ್ಲಾ ಶರೀಫ್ ಭಟ್ಕಳ, ಟಿ ಯಲ್ಲಪ್ಪ ನಾರಾಯಣಪುರ, ಚಿಮ್ನಳ್ಳಿ ರಮೇಶಬಾಬು ನಾರಾಯಣಪುರ, ಪ್ರೊ. ಸತ್ಯಮಂಗಲರ್ ಮಹಾದೇವ, ತುಮಕೂರು, ಚೆನ್ನಪ್ಪ ಅಂಗಡಿ ಧಾರವಾಡ, ಜಿ.ಜಿ.ಹೆಗಡೆ ಬಾಳಗೋಡ ಸಿದ್ದಾಪುರ, ಪ್ರಕಾಶ ಭಾಗವತ್ರ ಶಿರಸಿ, ಪುಟ್ಟು ಕುಲಕರ್ಣಿ ಕುಮಟಾ, ಅಕ್ಷತಾ ಕೃಷ್ಣಮೂರ್ತಿ ಅಣಶಿ, ರೇಣುಕಾ ರಮಾನಂದ ಅಂಕೋಲಾ, ವನರಾಗಶರ್ಮಾ ಯಲ್ಲಾಪುರ, ಜೆ. ಪ್ರೇಮಾನಂದ ಅಂಕೋಲಾ, ಎನ್.ವಿ.ನಾಯಕ ಭಾವಿಕೇರಿ ಅಂಕೋಲಾ, ಎನ್ ನಭಚಂದ್ರ ಮಣಿಪುರ, ಎಂ.ಎಸ್. ಹೆಗಡೆ, ಜ್ಯೋತಿ ರವೀಂದ್ರ ಶಾನಭಾಗ ಕವನ ಪ್ರಸ್ತುತಪಡಿಸಿದರು. ಇದೇ ಸಂದರ್ಭದಲ್ಲಿ ಎಚ್.ಬಿ ನಾಯಕ ವಾಸರಕುದ್ರಿಗೆ ಅವರಿಗೆ ಜಾನಪದ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಾಹಿತಿ ಎಂ.ಕೆ ನಾಯಕ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ವರದಿಗಾರ ವಿಠ್ಠಲದಾಸ ಕಾಮತ್ ವಂದಿಸಿದರು. ಕವಿತಾ ಹೆಗಡೆ , ರಾಧಿಕಾ ಕಾರ್ಯಕ್ರಮ ನಿರ್ವಹಿಸಿದರು.







