ತಿರುಪತಿ ತಿಮ್ಮಪ್ಪ ಬ್ಯಾಂಕಿನಲ್ಲಿಟ್ಟ ಚಿನ್ನ 1,311ಕೆಜಿ !
ಇನ್ನೂ ಇದೆ ಕೈಯಲ್ಲಿ

ಚೆನ್ನೈ, ಎ. 19 : ಚಿನ್ನ ನಗದೀಕರಣ ಯೋಜನೆ (Gold Monetisation Scheme) ಯಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ 1,311 ಕೆಜಿ ಚಿನ್ನವನ್ನು ಇಟ್ಟಿರುವುದಾಗಿ ತಿರುಪತಿ ಬಾಲಾಜಿ ದೇವಸ್ಥಾನದ ಆಡಳಿತ ಮಂಡಳಿ ತಿರುಮಲ ತಿರುಪತಿ ದೇವಸ್ಥಾನಮ್ಸ್ ತಿಳಿಸಿದೆ.
ಬ್ಯಾಂಕಿನೊಂದಿಗೆ ಮಾತುಕತೆ ನಡೆಸುತ್ತಿದ್ದು ಇನ್ನಷ್ಟು ಚಿನ್ನ ಇಡುವುದಾಗಿ ಅದು ತಿಳಿಸಿದೆ. ಆಂಧ್ರ ಪ್ರದೇಶದ ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮೀ ದೇವಸ್ಥಾನ ತನ್ನ ಭಕ್ತರಿಂದ ನೂರಾರು ಕೋಟಿ ಕಾಣಿಕೆ ಪಡೆಯುವ ಮೂಲಕ ವಿಶ್ವದಲ್ಲೇ ಅತ್ಯಂತ ಶ್ರೀಮಂತ ದೇವಸ್ಥಾನ ಎಂಬ ಕೀರ್ತಿಗೆ ಪಾತ್ರವಾಗಿದೆ.
ತನ್ನ ಭಕ್ತರಿಂದ ನಗದು , ಚಿನ್ನ, ಬೆಳ್ಳಿ , ಆಸ್ತಿ ಪತ್ರ ಹಾಗು ಡಿಮ್ಯಾಟ್ ಶೇರು ವರ್ಗಾವಣೆಗಳ ರೂಪದಲ್ಲಿ ತಿರುಪತಿ ದೇವಸ್ಥಾನ ಕಾಣಿಕೆ ಪಡೆಯುತ್ತದೆ. " ಚಿನ್ನದ ಕಾಣಿಕೆ ವರ್ಷಕ್ಕೆ ಸುಮಾರು ಒಂದು ಟನ್ ಇರುತ್ತದೆ. ಆಸ್ತಿ ಪತ್ರಗಳು ಬಂದಾಗ ಅವುಗಳನ್ನು ಸಂಬಂಧಿತ ಇಲಾಖೆಯ ಮೂಲಕ ನಿಯಮಗಳ ಪ್ರಕಾರ ವರ್ಗಾವಣೆ ಮಾಡಲಾಗುತ್ತದೆ. " ಎಂದು ದೇವಸ್ಥಾನದ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.





