ದ್ವಿತೀಯ ಪಿಯು: ಶಿಕ್ಷಣ ಸಚಿವರ ತವರೂರಲ್ಲಿ ಶುರುವಾಗದ ವೌಲ್ಯಮಾಪನ!
ಶಿವಮೊಗ್ಗ, ಎ. 19: ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ವೌಲ್ಯಮಾಪನ ಬಹಿಷ್ಕರಿಸಿ ಉಪನ್ಯಾಸಕರು ನಡೆಸುತ್ತಿರುವ ಪ್ರತಿಭಟನೆ ಮುಂದುವರಿದಿದೆ. ಮತ್ತೊಂದೆಡೆ ಸರಕಾರ ವೌಲ್ಯಮಾಪನ ಕಾರ್ಯಕ್ಕೆ ಬದಲಿ ವ್ಯವಸ್ಥೆ ಮಾಡುವ ನಿರ್ಧಾರ ಪ್ರಕಟಿಸಿದೆ. ಆದರೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್‌ರವರ ತವರೂರು ಶಿವಮೊಗ್ಗದಲ್ಲಿ ಮಂಗಳವಾರ ಕೂಡ ವೌಲ್ಯಮಾಪನ ಕಾರ್ಯ ಟೇಕಾಪ್ ಆಗಿಲ್ಲ. ನಗರದ ಡಿವಿಎಸ್ ಪದವಿ ಪೂರ್ವ ಕಾಲೇಜು ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ವೌಲ್ಯಮಾಪನ ಕೇಂದ್ರ ತೆರೆಯಲಾಗಿದೆ. ಡಿವಿಎಸ್ ಕಾಲೇಜ್‌ನಲ್ಲಿ ರಾಜ್ಯಶಾಸ್ತ್ರ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜ್‌ನಲ್ಲಿ ಅರ್ಥಶಾಸ್ತ್ರ ವಿಷಯದ ವೌಲ್ಯಮಾಪನಕ್ಕೆ ವ್ಯವಸ್ಥೆ ಮಾಡಲಾಗಿದೆ. ವೌಲ್ಯಮಾಪನ ಕಾರ್ಯಕ್ಕಾಗಿ ಸುಮಾರು 700 ಉಪನ್ಯಾಸಕರ ನಿಯೋಜನೆ ಮಾಡಲಾಗಿದೆ. ಆದರೆ ವೇತನ ಪರಿಷ್ಕರಣೆಗೆ ಆಗ್ರಹಿಸಿ ರಾಜ್ಯಾದ್ಯಂತ ಪಿಯು ಉಪನ್ಯಾಸಕರು ನಡೆಸುತ್ತಿರುವ ವೌಲ್ಯಮಾಪನ ಬಹಿಷ್ಕಾರಕ್ಕೆ ಸ್ಥಳೀಯ ಉಪನ್ಯಾಸಕರು ಕೂಡ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ಇಲ್ಲಿಯವರೆಗೂ ವೌಲ್ಯಮಾಪನ ಕಾರ್ಯಕ್ಕೆ ಹಾಜರಾಗಿಲ್ಲ. ಮತ್ತೊಂದೆಡೆ ಖಾಸಗಿ ಕಾಲೇಜು, ನಿವೃತ್ತ ಉಪನ್ಯಾಸಕರು ವೌಲ್ಯಮಾಪನ ಕಾರ್ಯದಲ್ಲಿ ಭಾಗಿಯಾಗಲು ಹಿಂದೇಟು ಹಾಕುತ್ತಿದ್ದಾರೆ. ಈ ನಡುವೆ ಸೋಮವಾರ ನಗರದ ಎರಡು ವೌಲ್ಯಮಾಪನ ಕೇಂದ್ರಗಳಲ್ಲಿ ಉತ್ತರ ಪತ್ರಿಕೆಗಳ ಕೋಡಿಂಗ್ - ಡಿಕೋಡಿಂಗ್ ಕೆಲಸಗಳು ನಡೆದಿವೆ. ಈ ಕಾರ್ಯಕ್ಕೆ ಹಾವೇರಿ ಹಾಗೂ ಬಳ್ಳಾರಿಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಯ ಸಿಬ್ಬಂದಿ ಬಳಕೆ ಮಾಡಲಾಗಿತ್ತು ಎಂದು ಸ್ಥಳೀಯ ಪದವಿ ಪೂರ್ವ ಶಿಕ್ಷಣ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.
ಎಸೆಸೆಲ್ಸಿ ವೌಲ್ಯಮಾಪನ: ಶಿವಮೊಗ್ಗ ನಗರದಲ್ಲಿ ಎಸೆಸೆಲ್ಸಿ ಉತ್ತರ ಪತ್ರಿಕೆಗಳ ವೌಲ್ಯಮಾಪನ ಕೇಂದ್ರಗಳನ್ನು ತೆರೆಯಲಾಗಿದ್ದು, ಸೋಮವಾರದಿಂದ ವೌಲ್ಯಮಾಪನ ಪ್ರಕ್ರಿಯೆ ಆರಂಭವಾಗಿದೆ. ಸರಕಾರ ನಿಗದಿ ಮಾಡಿರುವ ಕಾಲಮಿತಿಯಲ್ಲಿಯೇ ವೌಲ್ಯಮಾಪನ ಪ್ರಕ್ರಿಯೆ ನಡೆಯಲಿದೆ ಎಂದು ಸ್ಥಳೀಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.





