‘ದೇಶದಲ್ಲಿ ಕೌಶಲ್ಯಯುಕ್ತ ಯುವ ಜನತೆಯ ಕೊರತೆ:ಡಾ.ಸಿ.ಎಂ.ತ್ಯಾಗರಾಜ್

ತೀರ್ಥಹಳ್ಳಿ,ಎ.19: ವಿದ್ಯಾರ್ಥಿಗಳಿಂದು ಶಿಕ್ಷಣ ಕ್ಷೇತ್ರಗಳಲ್ಲಿ ತಮ್ಮ ವಿಷಯ ಆಯ್ಕೆಯ ವಿಚಾರದಲ್ಲಿ ಎಡವುತ್ತಿದ್ದಾರೆ. ದೇಶದಲ್ಲಿ ಕೌಶಲ್ಯಯುಕ್ತ ಯುವ ಜನತೆಯ ಕೊರತೆ ಕಾಡುತ್ತಿದೆ. ವಿದ್ಯಾರ್ಥಿಗಳಾಗಿದ್ದಾಗ ಕಲಿಯುವ ವಿಧಾನ ಕೇವಲ ಅಂಕಪಟ್ಟಿ ಗಳಿಕೆಗೆ ಮಾತ್ರ ಸೀಮಿತವಾಗಿರದೆ ಭವಿಷ್ಯದ ಜೀವನ ನಿರ್ವಹಣೆಯ ಸಾಧನ ಕಲಿಕೆಗಳತ್ತ ವಿಶೇಷ ಆಸಕ್ತಿ ವಹಿಸಬೇಕು ಎಂದು ಕುವೆಂಪು ವಿ.ವಿ. ಕುಲಸಚಿವ ಡಾ.ಸಿ.ಎಂ.ತ್ಯಾಗರಾಜ್ ಹೇಳಿದ್ದಾರೆ.
ತೀರ್ಥಹಳ್ಳಿಯ ಗೋಪಾಲಗೌಡ ರಂಗ ಮಂದಿರದಲ್ಲಿ ನಡೆದ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ 2015-16ನೆ ಸಾಲಿನ ವಿದ್ಯಾರ್ಥಿಗಳ ಸಾಂಸ್ಕೃತಿಕ ಮತ್ತು ವಿವಿಧ ವೇದಿಕೆಗಳ ಮುಕ್ತಾಯ ಸಮಾರಂಭದ ಸಮಾರೋಪ ಭಾಷಣದಲ್ಲಿ ಮಾತನಾಡಿದರು.
ಸಾವಿರಾರು ಉದ್ಯೋಗಾವಕಾಶಗಳು ಇಂದು ತಾಂತ್ರಿಕೇತರ ಅಥವಾ ಸಾಮಾನ್ಯ ವಿದ್ಯಾಭ್ಯಾಸ ಹೊಂದಿರುವ ಯುವ ಸಮೂಹಕ್ಕೆ ಕಾದು ಕುಳಿತಿದೆ. ಆದರೆ, ಗುಣಮಟ್ಟದ ಕಲಿಕೆಯ ಸಮೂಹದ ಕೊರತೆ ಕಾಡುತ್ತಿದೆ. ವಿದ್ಯಾರ್ಥಿಗಳು ತಮ್ಮ ಕಾಲೇಜು ದಿನಗಳಲ್ಲಿ ಆತ್ಮವಿಶ್ವಾಸ ಬೆಳೆಸಿಕೊಳ್ಳುವುದರೊಂದಿಗೆ ನಾಯಕತ್ವದಂತಹ ಗುಣ, ಬದ್ಧತೆ, ನಿರಂತರ ಅಧ್ಯಯನವನ್ನು ಯುವ ಸಮೂಹ ಮಾಡಬೇಕಾಗಿದೆ ಎಂದರು.
ತೀರ್ಥಹಳ್ಳಿ ಪಪಂ ಮುಖ್ಯಾಧಿಕಾರಿ ಡಿ.ನಾಗೇಂದ್ರ ಮುಖ್ಯ ಅತಿಥಿಯಾಗಿ ಮಾತನಾಡಿ, ಇಂದಿನ ವಿದ್ಯಾರ್ಥಿ ಹಾಗೂ ಯುವ ಸಮೂಹದ ಪ್ರಮುಖ ದೌರ್ಬಲ್ಯವೆಂದರೆ ನೈತಿಕ ಅಧಃಪತನ, ಮಿತಿಮೀರಿದ ವ್ಯವಹಾರಿಕ ಪ್ರಜ್ಞೆ ಹಾಗೂ ಅಧಿಕ ಆಧುನಿಕ ಸೌಲಭ್ಯಗಳ ಬಳಕೆಯಾಗಿದೆ. ಆದರೆ, ಯುವ ಸಮೂಹ ಅವುಗಳ ದಾಸರಾಗದೆ ನೈತಿಕ ಕಾಳಜಿಯನ್ನು ಹೆಚ್ಚು ಬೆಳೆಸಿಕೊಳ್ಳಬೇಕು ಎಂದರು.
ಕಾಲೇಜು ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಕೂಳೂರು ಸತ್ಯನಾರಾಯಣರಾವ್ ಮಾತನಾಡಿ, ವಿದ್ಯಾರ್ಥಿಗಳು ಭಾರತೀಯ ವೌಲ್ಯಗಳ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಬೇಕಾದ ಅಗತ್ಯವಿದೆ. ಸಂಸ್ಕೃತಿ, ಸಂಸ್ಕಾರದ ಬಗ್ಗೆ ಹೆಚ್ಚು ಆಸಕ್ತಿ ವಹಿಸದ ಯುವ ಸಮೂಹ ಮಾಧ್ಯಮಗಳ ಅನಗತ್ಯ ವಿಚಾರಗಳ ಬಗ್ಗೆ ಹೆಚ್ಚು ಆಸಕ್ತಿ ತೋರಿಸುತ್ತಿರುವುದು ಖಂಡನೀಯ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜು ಪ್ರಾಂಶುಪಾಲ ಡಾ.ಪಿ.ದೇವರಾಜ್ ವಹಿಸಿದ್ದರು. ಡಾ.ಎ.ಸಿ.ನಾಗೇಶ್ ಸ್ವಾಗತಿಸಿ, ಎಚ್.ಡಿ.ಧರ್ಮಣ್ಣ ಕಾರ್ಯಕ್ರಮ ನಿರ್ವಹಿಸಿದರು.







