ಮುಂದುವರಿದ ರಣ ಬಿಸಿಲ ಆರ್ಭಟ
41.25 ಡಿಗ್ರಿ ಸೆಲ್ಸಿಯಸ್ ದಾಟುತ್ತಿರುವ ಉಷ್ಣಾಂಶ
ಶಿವಮೊಗ್ಗ,ಎ.19: ಶಿವಮೊಗ್ಗ ನಗರದಲ್ಲಿ ರಣ ಬಿಸಿಲಿನ ಆಭರ್ಟ ಮುಂದುವರಿದಿದೆ. ಸೂರ್ಯನ ಪ್ರಖರತೆಗೆ ರಸ್ತೆಗಳು ಅಕ್ಷರಶಃ ಕಾದ ಕಾವಲಿಯಂತಾಗಿ ಪರಿಣಮಿಸಿವೆ. ಮತ್ತೊಂದೆಡೆ ದಿನದಿಂದ ದಿನಕ್ಕೆ ತಾಪಮಾನದ ಪ್ರಮಾಣವು ಏರುಗತಿಯಲ್ಲಿ ಸಾಗುತ್ತಿದ್ದು, ಇದು ನಗರದ ನಾಗರಿಕರಲ್ಲಿ ಆತಂಕ ಮೂಡಿಸಿರುವುದರ ಜೊತೆಗೆ ಏದುಸಿರು ಬಿಡುವಂತೆ ಮಾಡಿದೆ. ನಗರದಲ್ಲಿ ಕಳೆದ ಹಲವು ದಿನಗಳಿಂದ ಸತತವಾಗಿ 40 ಡಿಗ್ರಿ ಸೆಲ್ಸಿಯಸ್ ಮೇಲ್ಪಟ್ಟು ತಾಪಮಾನ ದಾಖಲಾಗುತ್ತಿದೆ. ಹವಾಮಾನ ಇಲಾಖೆಯ ಮೂಲಗಳ ಮಾಹಿತಿಯ ಪ್ರಕಾರ, ಮಂಗಳವಾರ ನಗರದಲ್ಲಿ ದಾಖಲಾದ ಉಷ್ಣಾಂಶದ ಪ್ರಮಾಣ 41.25 ಡಿಗ್ರಿ ಸೆಲ್ಸಿಯಸ್ ಆಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಒಂದೆರಡು ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಬರಿದಾದ ಜೋಗ: ಶಿವಮೊಗ್ಗ ನಗರ ಮಾತ್ರವಲ್ಲದೆ, ಜಿಲ್ಲೆಯಾದ್ಯಂತ ಬಿಸಿಲ ಬೇಗೆ ತೀವ್ರವಾಗಿದೆ. ಜಿಲ್ಲೆಯ ಹಲವೆಡೆ ನದಿ, ಕೆರೆ-ಹಳ್ಳಕೊಳ್ಳಗಳು ನೀರಿಲ್ಲದೆ ಬರಿದಾಗುತ್ತಿವೆ. ಕುಡಿಯುವ ನೀರಿಗೆ ತೀವ್ರ ಸ್ವರೂಪದ ಹಾಹಾಕಾರ ಕಂಡುಬರುತ್ತಿದೆ. ಮತ್ತೊಂದೆಡೆ ವಿಶ್ವವಿಖ್ಯಾತ ಜೋಗ ಜಲಪಾತವು ನೀರಿಲ್ಲದೆ ಕಲ್ಲುಬಂಡೆಗಳು ಗೋಚರವಾಗುತ್ತಿವೆ.





