Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಭೂಸ್ವಾಧೀನ ಪ್ರಕ್ರಿಯೆ ಮತ್ತು ನಮ್ಮ...

ಭೂಸ್ವಾಧೀನ ಪ್ರಕ್ರಿಯೆ ಮತ್ತು ನಮ್ಮ ಅಭಿವೃದ್ಧಿಯ ಪಥ!

ಕು.ಸ.ಮಧುಸೂದನರಂಗೇನಹಳ್ಳಿಕು.ಸ.ಮಧುಸೂದನರಂಗೇನಹಳ್ಳಿ19 April 2016 10:50 PM IST
share
ಭೂಸ್ವಾಧೀನ ಪ್ರಕ್ರಿಯೆ ಮತ್ತು ನಮ್ಮ ಅಭಿವೃದ್ಧಿಯ ಪಥ!

ಇಂಡಿಯಾದಲ್ಲಿ ಜನತೆಯನ್ನು ವಂಚಿಸಲು ಕಳ್ಳರು ಸುಳ್ಳರುಗಳಂತಹ ಕ್ರಿಮಿನಲ್‌ಗಳೇನು ಬೇಕಾಗಿಲ್ಲ. ಈಗಿರುವ ಕಾನೂನುಗಳ ವ್ಯಾಪ್ತಿಯಲ್ಲಿಯೇ ವೈಯಕ್ತಿಕವಾಗಿ ಮಾತ್ರವಲ್ಲ, ಒಂದು ಸಮುದಾಯವನ್ನೇ ಸತತವಾಗಿ ವಂಚಿಸುತ್ತಾ ಹೋಗಬಹುದು. ತಾವು ಜಾರಿಗೆ ತಂದ ಕಾನೂನು ಜನತೆಯ ಪರವಾಗಿದೆಯೆಂದು ನಂಬಿಸಿ ಅದರ ಮೂಲಕವೇ ಸರಕಾರಗಳು ಜನರನ್ನು ಮೂರ್ಖರನ್ನಾಗಿ, ನಿರ್ಗತಿಕರನ್ನಾಗಿ ಮಾಡಬಲ್ಲದೆಂಬುದಕ್ಕೆ ಸಾಕ್ಷಿ ನಮ್ಮ ಭೂಸುಧಾರಣೆಯ ಕಾನೂನು. ಕಾಲಕಾಲಕ್ಕೆ ತಿದ್ದುಪಡಿಗಳನ್ನು ಕಾಣುತ್ತಾ ಬಂದ ಈ ಕಾನೂನು ಜನರಿಗೆ ನೀಡಿದ್ದಕ್ಕಿಂತ ಅವರಿಂದ ಕಿತ್ತುಕೊಂಡಿದ್ದೇ ಹೆಚ್ಚು.

ಅಭಿವೃದ್ಧಿಗಾಗಿ ಭೂಸ್ವಾಧೀನವೆಂಬ ಸರಕಾರಗಳ ಘೋಷಣೆಗಳೀಗ ಸುಳ್ಳೆಂಬುದು ಸಾಬೀತಾಗಿದೆ. ಹಾಗೂ ಅಭಿವೃದ್ಧಿಯೆಂದರೆ ಯಾರು ಭೂಮಿ ಪಡೆಯುತ್ತಾರೊ ಅವರದು ಮಾತ್ರವೆಂಬುದು ಸಹ ಗೊತ್ತಾಗಿದೆ. ಮೊದಮೊದಲು ಭೂಸ್ವಾಧೀನ ಪ್ರಕ್ರಿಯೆ ದೇಶದ ಆರ್ಥಿಕ ಪ್ರಗತಿಗೆ ಅಗತ್ಯವೆಂದು ನಮ್ಮನ್ನು ನಂಬಿಸಿದ ಸರಕಾರಗಳು ಇದೀಗ ತಮ್ಮ ವರಸೆಯನ್ನು ಬದಲಾಯಿಸಿ ಬೇರೆ ಬೇರೆ ಕಾರಣಗಳನ್ನು ನೀಡುತ್ತಿವೆ. ಸ್ವಾತಂತ್ರ್ಯ ಬಂದ ಹೊಸತರಲ್ಲಿ ರಾಷ್ಟ್ರದ ಅಭಿವೃದ್ಧಿಗೆಂದು ಶುರುವಾದ ಭೂಸ್ವಾಧೀನ ಪ್ರಕ್ರಿಯೆಗಳು ಎಪ್ಪತ್ತು ವರ್ಷಗಳ ನಂತರವೂ ಒಂದಲ್ಲ ಒಂದು ರೀತಿಯಲ್ಲಿ ನಡೆಯುತ್ತಲೇ ಇವೆ. ಸ್ವಾತಂತ್ರ ನಂತರದ ಸರಕಾರಗಳು ಪಂಚವಾರ್ಷಿಕ ಯೋಜನೆಗಳನ್ನು ರೂಪಿಸಿ, ಬಾರಿ ಅಣೆಕಟ್ಟುಗಳನ್ನು, ವಿದ್ಯುತ್ ಸ್ಥಾವರಗಳನ್ನು, ಭಾರೀ ಕೈಗಾರಿಕೆಗಳನ್ನು ಕಟ್ಟಲು ಅಗತ್ಯವಾದ ಭೂಮಿ ಬೇಕೆಂಬ ಕಾರಣ ನೀಡಿ ಲಕ್ಷಾಂತರ ಎಕರೆ ಭೂಮಿಯನ್ನು ರೈತರಿಂದ ವಶಪಡಿಸಿಕೊಂಡವು. ಅವತ್ತಿನ ಅಗತ್ಯವಾಗಿದ್ದ ಆಹಾರ ಸ್ವಾವಲಂಬನೆ ಮತ್ತು ವಿದ್ಯುತ್ ಉತ್ಪಾದಿಸಲು ಅಗತ್ಯವೆಂದು ಬೃಹತ್ ಅಣೆಕಟ್ಟುಗಳನ್ನು, ವಿದ್ಯುತ್ ಉತ್ಪಾದನಾ ಕೇಂದ್ರಗಳನ್ನು ಜನರ ಭೂಮಿಯನ್ನು ವಶಪಡಿಸಿಕೊಂಡು ನಿರ್ಮಿಸಲಾಯಿತು. ಅವತ್ತಿನ ಮಟ್ಟಿಗೆ ಆಹಾರ ಉತ್ಪಾದನೆಗೆ ಅದು ನೆರವಾಗಿದ್ದೂ ನಿಜ. ಅಂದಿನ ಸರಕಾರಗಳ ಯಜಮಾನರು ದೇಶದ ಅಭಿವೃದ್ಧಿಯ ಬಗ್ಗೆ ಭಾರೀ ಕನಸುಗಳನ್ನು ಜನತೆಗೆ ನೀಡಿ, ನಮ್ಮ ಆರ್ಥಿಕ ಅಭಿವೃದ್ಧಿಗಾಗಿ ಜನ ಭೂಮಿ ತ್ಯಾಗ ಮಾಡುವುದು ಅನಿವಾರ್ಯವೆಂದು ನಮ್ಮನ್ನು ನಂಬಿಸಿದ್ದರು. ಸ್ವಾತಂತ್ರ್ಯಾ ನಂತರದಲ್ಲಿ ಆದರ್ಶವೇ ಮೈವೆತ್ತ ದಿನಗಳವು! ತಮ್ಮ ಮುಂದಿನ ಪೀಳಿಗೆಗಾಗಿ ತಾವು ಮಾಡುವ ತ್ಯಾಗ ಅಂತಹ ದೊಡ್ಡದೇನಲ್ಲವೆಂದು ಭ್ರಮಿಸಿದ ಜನತೆ ಧಾರಾಳವಾಗಿ ಅಷ್ಟೇನು ಪ್ರತಿರೋಧ ಒಡ್ಡದೆ ಭೂಮಿಯ ತ್ಯಾಗ ಮಾಡಿತು. ಹೀಗೆ ಲಕ್ಷಾಂತರ ಎಕರೆಗಳಷ್ಟು ಭೂಮಿಯನ್ನು ವಶಪಡಿಸಿಕೊಂಡ ಸರಕಾರ ಅದಕ್ಕೆ ಪರಿಹಾರ ನೀಡುವಾಗ ಮಾತ್ರ ಜನರನ್ನು ವಂಚಿಸುತ್ತಾ ಹೋಯಿತು. ಭೂಮಿ, ಮನೆಮಠ ಕಳೆದುಕೊಂಡ ನಿರಾಶ್ರಿತರಿಗೆ ಪುನರ್‌ವಸತಿ ಕಲ್ಪಿಸುವಂತಹ ಕಾರ್ಯಗಳಲ್ಲಿ ಭ್ರಷ್ಟಾಚಾರ ನಡೆಸಿ ಸಾವಿರಾರು ಮಂದಿಗೆ ಇವತ್ತಿಗೂ ಸರಿಯಾದ ನ್ಯಾಯಯುತವಾದ ಪರಿಹಾರ ದೊರೆತಿಲ್ಲವೆಂಬುದು ಕಹಿಸತ್ಯ. ದೇಶದ ಪುನರ್‌ನಿರ್ಮಾಣದ ಗುಂಗಿನಲ್ಲಿದ್ದ ಜನರಿಗೆ ತಾವು ಮೋಸ ಹೋಗಿದ್ದು ಗೊತ್ತಾದರೂ ಏನು ಮಾಡುವ ಸ್ಥಿತಿಯಲ್ಲಿ ಅವರಿರಲಿಲ್ಲ. ಪರಿಹಾರದೊರೆಯುವುದಿರಲಿ ಯಾವ ಅಭಿವೃದ್ಧಿಗಾಗಿ ಅವರು ಭೂಮಿಯನ್ನು ತ್ಯಾಗ ಮಾಡಿದ್ದರೊ ಆ ಅಭಿವೃದ್ಧಿಯ ಫಲದ ಕಿಂಚಿತ್ತು ಪಾಲೂ ಸಹ ಸದರಿ ಜನರಿಗೆ ತಲುಪಲೇ ಇಲ್ಲ. ಎಲ್ಲರಿಗೂ ಬೆಳಕುನೀಡಲೆಂದು ವಿದ್ಯುತ್ ಸ್ಥಾವರಗಳಿಗೆ ಭೂಮಿ ಬಿಟ್ಟುಕೊಟ್ಟ ಜನರು ಮಾತ್ರ ತಮಗೆ ಒದಗಿಸಿದ ಪುನರ್‌ವಸತಿ ಕೇಂದ್ರಗಳಲ್ಲಿ ಸೀಮೆಎಣ್ಣೆದೀಪ ಹಚ್ಚಿಕೊಂಡು ಬದುಕ ಬೇಕಾಯಿತು. ಎಪ್ಪತ್ತರ ದಶಕದ ಹೊತ್ತಿಗೆ ಜನರು ಸಂಪೂರ್ಣವಾಗಿ ಭ್ರಮನಿರಸನಗೊಂಡರು.

ಇಷ್ಟಲ್ಲದೆ ಸ್ವಾತಂತ್ರ ಬಂದ ಏಳು ದಶಕಗಳ ನಂತರವೂ ನಮ್ಮ ಸರಕಾರಗಳು ಅಭಿವೃದ್ಧಿಯ ಹೆಸರಿನಲ್ಲಿ ರೈತರ ಭೂಮಿಯನ್ನು ವಶಪಡಿಸಿಕೊಳ್ಳುವುದನ್ನು ನಿಲ್ಲಿಸಿಲ್ಲ. ಜನಸಾಮಾನ್ಯರಿಗೆ ಉಪಯೋಗವಾಗುವಂತಹ ಸಾರ್ವಜನಿಕ ಉದ್ದಿಮೆಗಳಿಗೆ ಮತ್ತು ಅಂತಹ ಉತ್ಪಾದಕ ಕ್ಷೇತ್ರಗಳಿಗೆ ಮಾತ್ರ ಭೂಸ್ವಾಧೀನ ಮಾಡಿಕೊಳ್ಳುತ್ತಿದ್ದ ಸರಕಾರಗಳು ಇದೀಗ ಖಾಸಗಿಯವರಿಗೆ ಭೂಮಿ ಕೊಡಿಸುವ ರಿಯಲ್ ಎಸ್ಟೇಟ್ ಏಜೆಂಟರುಗಳ ರೀತಿಯಲ್ಲಿ ವರ್ತಿಸುತ್ತಿವೆ. ಜಾಗತೀಕರಣದ ಫಲವಾಗಿ ನಮ್ಮ ದೇಶದೊಳಗೆ ಪ್ರವೇಶ ಪಡೆದ ಸ್ವದೇಶಿ ಮತ್ತು ವಿದೇಶಿ ಕಾರ್ಪೊರೇಟ್ ಕಂಪೆನಿಗಳ ಉದ್ದಿಮೆಗಳಿಗೆ ಭೂಮಿಯನ್ನು ಕಡಿಮೆ ದರದಲ್ಲಿ ಕೊಡಲು ಫಲವತ್ತಾದ ಭೂಮಿಯನ್ನು ರೈತರಿಂದ ವಶಪಡಿಸಿಕೊಳ್ಳಲು ನಮ್ಮ ಸರಕಾರಗಳು ಹಲವು ತಂತ್ರಗಳನ್ನೇ ಕಾನೂನುಗಳನ್ನಾಗಿಸಿ ಜನರ ಬದುಕಿಗೆ ಕೊಳ್ಳಿ ಇಡುವ ಕೆಲಸ ಮಾಡುತ್ತಿವೆ.

ಆದರೀಗ ಜನ ಬದಲಾಗ ತೊಡಗಿದ್ದಾರೆ: ಅಭಿವೃದ್ಧಿ ಮಂತ್ರದ ನಿಜವಾದ ಉದ್ದೇಶ ಅವರಿಗೆ ಅರ್ಥವಾಗಿದೆ ಮತ್ತು ಅಂತಹ ಅಭಿವೃದ್ಧಿಯ ಫಲ ಯಾರಿಗೆ ದೊರೆಯುತ್ತ ದೆಯೆಂಬುದನ್ನೂ ಅವರು ಅರಿತಿದ್ದಾರೆ. ಹೀಗಾಗಿ ರೈತರೀಗ ತಮ್ಮ ಭೂಮಿಯನ್ನು ಅಷ್ಟು ಸುಲಭವಾಗಿ ನೀಡಲು ನಿರಾಕರಿಸುವ ದಾರಿಹಿಡಿದಿದ್ದಾರೆ. ಭೂಮಿ ನೀಡಲು ಜನ ನಿರಾಕರಿಸುವುದರ ಹಿಂದಿರುವ ಕಾರಣಗಳನ್ನು ನಾವೀಗ ನೋಡೋಣ:

ಮೊದಲಿಗೆ ವಶಪಡಿಸಿಕೊಳ್ಳುವ ಭೂಮಿ ಖಾಸಗಿ ಕಂಪೆನಿಗಳ ಸ್ವತ್ತಾಗಿಬಿಡುತ್ತದೆಯೆಂಬ ಅರಿವೀಗ ಜನರಲ್ಲಿ ಮೂಡಿದೆ. ಎರಡನೆಯದು ಅದರ ಲಾಭ ಸರಕಾರಕ್ಕಾಗಲಿ, ತನ್ಮೂಲಕ ಜನತೆಗಾಗಲಿ ದೊರೆಯಲಾರದೆಂಬ ಸತ್ಯ ಅರ್ಥವಾಗಿದೆ. ಮೂರನೆಯದಾಗಿ ಸರಕಾರ ನೀಡುವ ಪರಿಹಾರ ಮಾರುಕಟ್ಟೆಯ ದರಕ್ಕಿಂತ ತೀರಾ ಕಡಿಮೆಯಿದ್ದು, ಅದರಿದ ತಾವು ಪುನರ್ ವಸತಿಗೊಳ್ಳಲು ಅಸಾಧ್ಯವೆಂದೂ ಅರಿವಾಗಿದೆ. ಹೀಗಾಗಿ ಹಿಂದೆಂದಿಗಿಂತಲೂ ಹೆಚ್ಚಾಗಿ ರೈತರ ಪ್ರತಿರೋಧ ಹೆಚ್ಚಾಗಿದೆ. 2014ರಲ್ಲಿ ನರೇಂದ್ರ ಮೋದಿಯವರ ಸರಕಾರ ಕೇಂದ್ರದಲ್ಲಿ ಅಧಿಕಾರ ವಹಿಸಿಕೊಂಡ ತಕ್ಷಣ ಭೂಸುಧಾರಣಾ ಕಾಯ್ದೆಯ ತಿದ್ದುಪಡಿ ಮಾಡಹೊರಟಿದ್ದು ಸಹ ನಮ್ಮ ರಾಜಕೀಯ ನಾಯಕರುಗಳಿಗೆ, ಪಕ್ಷಗಳಿಗೆ ಕಾರ್ಪೊರೇಟ್ ಕಂಪೆನಿಗಳ ಹಿತಕಾಯಲೆಂಬುದು ಜನರಿಗೆ ಅರ್ಥವಾಗಿದೆ. ಹೀಗಾಗಿಯೇ ಆ ತಿದ್ದುಪಡಿಯನ್ನು ವಿರೋಧಿಸಿಜನ ಅದನ್ನು ರದ್ದುಮಾಡಿಸುವಲ್ಲಿ ಯಶಸ್ವಿಯಾಗಿತ್ತು.

ಇಷ್ಟೆಲ್ಲ ಆದರೂ ಸರಕಾರಗಳ ಭೂಸ್ವಾಧೀನ ಪ್ರಕ್ರಿಯೆ ಮಾತ್ರ ಇನ್ನೂ ನಿಂತಿಲ್ಲ. ಬದಲಿಗೆ ಹಳೆಯ ತಂತ್ರಗಳನ್ನು ಕೈಬಿಟ್ಟುಬೇರೆ ಬೇರೆ ಆಮಿಷಗಳ ಮೂಲಕ ಭೂಸ್ವಾಧೀನತೆ ಮಾಡಲು ಪ್ರಯತ್ನಿಸುತ್ತಿದೆ. ಉದಾಹರಣೆಗೆ ನಗರಗಳ ಸಮೀಪದಲ್ಲಿ ವಿಮಾನ ನಿಲ್ದಾಣ ಬರುತ್ತದೆಯೆಂದು ಸುದ್ದಿ ಹಬ್ಬಿಸಿ, ಕಣ್ಣೊರೆಸುವ ಸರ್ವೇ ಕಾರ್ಯ ಮಾಡಿಸಿ, ಅಲ್ಲಿಯ ಭೂಮಿಯ ಬೆಲೆಯನ್ನು ಮಾರುಕಟ್ಟೆಯಲ್ಲಿ ಹೆಚ್ಚಾಗುವಂತೆ ನೋಡಿಕೊಂಡು ಅದನ್ನು ಮಧ್ಯವರ್ತಿಗಳು ಖರೀದಿಸುವಂತೆ ನೋಡಿಕೊಂಡು, ತದನಂತರ ಹೆಚ್ಚು ಬೆಲೆ ಕೊಟ್ಟು ಅದನ್ನು ವಶಪಡಿಸಿಕೊಂಡು ಕಾರ್ಪೊರೇಟ್ ಕಂಪೆನಿಗಳಿಗೆ ಮಾರುತ್ತದೆ. ಇಂತಹ ಪ್ರಕ್ರಿಯೆಯಲ್ಲಿ ರಾಜಕಾರಣಿಗಳ ಬೇನಾಮಿ ವಾರಸುದಾರರೇ ರಿಯಲ್ ಎಸ್ಟೇಟ್ ದಣಿಗಳಾಗಿರುತ್ತಾರೆ. ಮತ್ತು ರಾಜಕಾರಣಿಗಳ ಆಪ್ತೇಷ್ಟರೇ ಉದ್ಯಮಗಳ ಬೇನಾಮಿ ಪಾಲುದಾರರಾಗಿರುತ್ತಾರೆ. ಹೀಗೆ ಜನರಲ್ಲಿ ಹುಸಿ ಕನಸುಗಳನ್ನು ತುಂಬಿ ಅಗತ್ಯಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಭೂಮಿಯನ್ನು ವಶಪಡಿಸಿಕೊಳ್ಳುವ ಸರಕಾರಗಳು ನಿಜಕ್ಕೂ ರಿಯಲ್ ಎಸ್ಟೇಟ್ ಏಜೆನ್ಸಿಗಳಂತೆ ಕೆಲಸ ಮಾಡುತ್ತಿವೆ. ನೀವೇ ನೋಡಿ. ನೈಸ್ ರಸ್ತೆಗೆ ಅಗತ್ಯವಾಗಿದ್ದ ಭೂಮಿಗಿಂತ ಹೆಚ್ಚಿನ ಭೂಮಿಯನ್ನು ವಶಪಡಿಸಿಕೊಂಡ ಸರಕಾರ ಇವತ್ತು ಹೆಚ್ಚುವರಿ ಭೂಮಿಯನ್ನು ವಾಪಸು ಪಡೆದು ಜನರಿಗೆ ಹಿಂದಿರುಗಿಸಬೇಕಿತ್ತು. ಆದರೆ ಹಾಗೆ ಮಾಡದೆ ಅದರ ಮಾಲಕರ ಪದತಲದಲ್ಲಿ ಕೂತು ಬಿಟ್ಟಿದೆ. ಹೀಗೆ ದೇಶದ ಯಾವುದೇ ಭಾಗಕ್ಕೆ ಹೋದರೂ ಅಲ್ಲಿ ಒಂದಲ್ಲಾ ಒಂದು ನೆಪದಲ್ಲಿ ಭೂಸ್ವಾಧೀನ ಕ್ರಿಯೆ ನಡೆಯುತ್ತಿದೆ ಮತ್ತು ಜನರಿಗೆ ನ್ಯಾಯಯುತ ಪರಿಹಾರ ದೊರೆಯದ ಕಾರಣ ಹೋರಾಟಗಳು ನಡೆಯುತ್ತಲೇ ಇವೆ.

ನಮ್ಮ ಸಂವಿಧಾನ ರಚಿಸಿದ ಮಹನೀಯರು ಭೂಮಿಯನ್ನು ಅನುಭವಿಸುವ, ಖರೀದಿಸುವ, ಮಾರುವ ಹಕ್ಕನ್ನು ಜನರ ಮೂಲಭೂತ ಹಕ್ಕನ್ನಾಗಿ ನೀಡಿದ್ದರು. ಸಂವಿಧಾನದ 19(1) ಎಫ್ ನಿಯಮದ ಪ್ರಕಾರ ಭೂಮಿಯ ಒಡೆತನ ವ್ಯಕ್ತಿಯೊಬ್ಬನ ವೈಯಕ್ತಿಕ ಮತ್ತು ಮೂಲಭೂತ ಹಕ್ಕಾಗಿತ್ತು. ಆದರೆ ಮಾಜಿ ಪ್ರಧಾನಮಂತ್ರಿ ಇಂದಿರಾಗಾಂಧಿಯವರ ಕಾಲದಲ್ಲಿ ಜಮೀನ್ದಾರಿ ಪದ್ಧತಿಯ ನಿರ್ಮೂಲನಕ್ಕೆ, ಹಾಗೂ ವಂಶಪಾರಂಪರ್ಯವಾಗಿ ನಡೆದುಕೊಂಡು ಬರುತ್ತಿದ್ದ ಫ್ಯೂಡಲ್ ವ್ಯವಸ್ತೆಯನ್ನು ನಾಶ ಮಾಡಿ ಉಳುವವನೇ ನೆಲದೊಡೆಯನೆಂಬುದನ್ನು ಕಾರ್ಯರೂಪಕ್ಕೆ ತರಲು ಈ ಕಾಯ್ದೆಗೆ ತಿದ್ದುಪಡಿ ತರಲಾಯಿತು. ಒಂದು ಒಳ್ಳೆಯ ಉದ್ದೇಶಕ್ಕೆಂದು ತಂದ ತಿದ್ದುಪಡಿಯೇ ಮುಂದೆ ಭೂಸ್ವಾಧೀನ ಪ್ರಕ್ರಿಯೆಗಳಿಗೆ ಇಂಬು ಕೊಡಬಹುದೆಂದು ಅಂದು ಯಾರೂ ಆಲೋಚಿಸಿರಲಿಲ್ಲ. ಹಾಗಾಗಿ 19(1)ಎಫ್ ನಿಯಮವನ್ನು ಸಂವಿಧಾನದ 44ನಯ ತಿದ್ದುಪಡಿಯ ಮೂಲಕ ರದ್ದುಗೊಳಿಸಲಾಯಿತು. ಇದರಿಂದಾಗಿ ವ್ಯಕ್ತಿಯೊಬ್ಬನ ಭೂಮಿಯ ಮೇಲಿನ ಮೂಲಭೂತ ಹಕ್ಕನ್ನು ತೆಗೆದು ಹಾಕಲಾಯಿತು. ದುರಂತ ನೋಡಿ, ಯಾವ ಜಮೀನ್ದಾರಿ ಪದ್ಧತಿಯನ್ನು ನಿರ್ಮೂಲನೆ ಮಾಡಲು ಕಾಯ್ದೆಯನ್ನು ತಿದ್ದುಪಡಿ ಮಾಡಲಾಯಿತೋ ಅದೇ ಕಾಯ್ದೆಯಿಂದು ಕಾರ್ಪೊರೇಟ್ ಜಮೀನ್ದಾರಿ ಪದ್ದತಿಗೆ ಪುಷ್ಠಿ ನೀಡುತ್ತಿದೆ. ಇವತ್ತು ಕೇಂದ್ರ ಸರಕಾರವಿರಲಿ, ಪ್ರತೀ ರಾಜ್ಯ ಸರಕಾರವೂ ವರ್ಷ ವರ್ಷ ಗ್ಲೋಬಲ್ ಇನ್‌ವೆಸ್ಟರ್ಸ್‌ ಮೀಟ್ ನಡೆಸುತ್ತ ವಿದೇಶಿ ಕಂಪೆನಿಗಳನ್ನು (ಸ್ವದೇಶಿಯವರ ಜೊತೆಗೆ) ಬನ್ನಿ, ನಮ್ಮ ರಾಜ್ಯದಲ್ಲಿ ಬಂಡವಾಳ ಹೂಡಿಯೆಂದು ಬೇಡುತ್ತಿವೆ. ಹೀಗೆ ಬೇಡುವ ಕಾರ್ಯಕ್ರಮಗಳಿಗೆ ನೂರಾರು ಕೋಟಿಗಳಷ್ಟು ಹಣವನ್ನು ಖರ್ಚುಮಾಡುತ್ತಿವೆ. ಇದರಲ್ಲಿ ರಾಜ್ಯರಾಜ್ಯಗಳ ಮಧ್ಯೆ ಅನಾರೋಗ್ಯಕರ ಸ್ಪರ್ಧೆ ಬೇರೆ ಏರ್ಪಟ್ಟಿದೆ. ನಮ್ಮ ರಾಜ್ಯದ ಜೊತೆ ಸ್ಪರ್ಧಿಸುತ್ತಿರುವ ಆಂಧ್ರ ಪ್ರದೇಶ ಸರಕಾರ ತೀರ ಕಡಿಮೆ ಬೆಲೆಗೆ ಭೂಮಿ ಕೊಡುವ ಘೋಷಣೆ ಮಾಡಿದರೆ ತೆಲಂಗಾಣ ಸರಕಾರ ಉಚಿತ ನೀರು, ವಿದ್ಯುತ್ ನೀಡುವ ಮಾತಾಡುತ್ತಿದೆ. ಈಗ ಸ್ಪರ್ಧೆಗಿಳಿದಿರುವ ಸರಕಾರಗಳು ನಾಚಿಕೆಗೆಟ್ಟ ರೀತಿಯಲ್ಲಿ ವರ್ತಿಸುತ್ತಿವೆ. ಇವೆಲ್ಲದರ ನಡುವೆ ಇನ್‌ಫೋಸಿಸ್ ಕಂಪೆನಿಯ ನಾರಾಯಣ ಮೂರ್ತಿಯಂತವರು ತಮ್ಮ ಬೇಡಿಕೆಗಳಿಗೆ ಸ್ಪಂದಿಸದೇ ಇದ್ದರೆ ತಾವು ಬೇರೆ ರಾಜ್ಯಕ್ಕೆ ಹೋಗುವ ಬೆದರಿಕೆ ಹಾಕುವ ಮಟ್ಟಕ್ಕೆ ನಮ್ಮ ಸರಕಾರಗಳು ಬಹುರಾಷ್ಟ್ರೀಯ ಕಂಪೆನಿಗಳ ಗುಲಾಮರಂತಾಗಿವೆ.

ಸಂವಿಧಾನವನ್ನು ಬಿಟ್ಟು ನೋಡುವುದೇ ಆದರೆ ಭೂಮಿಯೆನ್ನುವುದು ಭಾರತೀಯ ರೈತನ ಮಟ್ಟಿಗೆ ಒಂದು ಭಾವನಾತ್ಮಕ ವಿಷಯ! ಯಾಕೆಂದರೆ ಭೂಮಿ ರೈತನಿಗೊಂದು ಐಡೆಂಟಿಟಿಯನ್ನು ನೀಡುತ್ತದೆ ಮತ್ತು ಸಮಾಜದಲ್ಲೊಂದು ಸ್ಥಾನಮಾನ ನೀಡುತ್ತದೆ.ಅದು ಆತನ ಸಾಮಾಜಿಕ ಮತ್ತು ಆರ್ಥಿಕ ಅಸ್ತಿತ್ವದ ಭಾಗವಾಗಿದೆ ಭೂಮಿಯೆನ್ನುವುದು ಮನುಷ್ಯನ ಅಸ್ಮಿತೆಯ ಪ್ರಶ್ನೆಯಾಗಿದೆ. ಭೂಮಿಯೆನ್ನುವುದು ನಮ್ಮ ಬದುಕಿನ ರೀತಿಯಾಗಿದೆ. ಅದು ನಮ್ಮ ಭಾಷೆ, ಉಡುಪು, ಪರಂಪರೆ ಮತು ಬದುಕಿನ ಶೈಲಿಯನ್ನು ರೂಪಿಸುತ್ತದೆ. ಅಷ್ಟಲ್ಲದೆ, ಭೂಮಿ ನಮ್ಮ ತಲೆತಲಾಂತರಗಳ ನೆನಪಿನ ಒಂದು ಭಾಗವೂ ಹೌದಾಗಿದೆ. ನಮ್ಮ ಭೂತವನ್ನು ವರ್ತಮಾನದ ಜೊತೆ ಬೆಸೆಯುವ ಕೊಂಡಿಯಾಗಿದೆ. ಸಾವಿರಾರು ವರ್ಷಗಳಿಂದ ವ್ಯವಸಾಯ ಮಾಡುತ್ತ ಬಂದ ನಮ್ಮ ರೈತನಿಗದು ಅಷ್ಟಿಷ್ಟಕ್ಕೆ ಮಾರಿಬಿಡುವ ಒಂದು ಸರಕಲ್ಲ. ರೈತನೊಬ್ಬನ ಭೂಮಿಯಲ್ಲಿ ಆತ ಪೂಜಿಸುವ ಮನೆ ದೇವರಿದ್ದಾನೆ, ಅವನ ತಾತ ಮುತ್ತಾತಂದಿರ ಸಮಾಧಿಗಳಿವೆ. ಸತ್ತು ಹೋದ ಆತನ ಜಾನುವಾರುಗಳ ದೇಹಗಳನ್ನು ಹೂಳಲಾಗಿದೆ. ಅದು ಭಾವನಾತ್ಮಕವಾಗಿ ಆತನ ಬದುಕಲ್ಲಿ ತಳುಕು ಹಾಕಿಕೊಂಡಿದೆ. ಇಂತಿರುವ ಭೂಮಿಯನ್ನು ರೈತನೊಬ್ಬನ ಕೈಗೆ ಒಂದಷ್ಟು ಸಾವಿರಗಳನ್ನು ತುರುಕಿ ‘ನಿನ್ನ ಬದುಕನ್ನು, ನಿನ್ನ ನೆನಪನ್ನು ಕೊಟ್ಟು ಬಿಡು’ ಎಂದು ಕೇಳುವ ಸರಕಾರದ ಕ್ರಮವನ್ನು ಮಾನವೀಯ ನೆಲೆಯಲ್ಲಿ ಯೋಚಿಸುವ ಯಾವನೂ ಒಪ್ಪಲಾರ. ಹೀಗೆ ನಮ್ಮ ಸರಕಾರಗಳು ರೈತರ ಭಾವನೆಗಳ ಜೊತೆ ವ್ಯವಹಾರ ಮಾಡುತ್ತಿವೆ.

ಹಾಗಾದರೆ ಇಂತಹ ಭೂಸ್ವಾಧೀನತೆಯ ಪಿಡುಗಿಗೆ ಇರುವ ಪರಿಹಾರಗಳೇನು? ಎಂದು ನೋಡಿದರೆ ನಿರಾಸೆಯೇ ಎದುರಾಗುತ್ತದೆ. ಯಾಕೆಂದರೆ ಇವತ್ತು ನಾವ್ಯಾವುದನ್ನು ಅಭಿವೃದ್ಧಿಯ ಮುಖ್ಯಪಥವೆಂದು ಒಪ್ಪಿಕೊಂಡಿದ್ದೇವೋ ಆ ಪಥದಲ್ಲೇ ದೋಷವಿದೆ. ಆದ್ದರಿಂದ ನಮ್ಮ ಆರ್ಥಿಕ ನೀತಿಯನ್ನು, ಚಿಂತನಾ ಕ್ರಮವನ್ನೇ ಬದಲಿಸಿಕೊಳ್ಳಬೇಕಾದ ಅನಿವಾರ್ಯತೆಯಿದೆ. ಅದರಲ್ಲೂ ಜಾಗತೀಕರಣದ ಭೂತದೊಂದಿಗೆ ಸಖ್ಯ ಬೆಳೆಸಿಕೊಂಡಿರುವ ನಮಗೆ ಅದರಿಂದ ಬಿಡುಗಡೆ ದೊರೆಯದ ಹೊರತು ಈ ಪಿಡುಗನ್ನು ನಿವಾರಿಸಲು ಸಾಧ್ಯವಿಲ್ಲ. ಪಶ್ಚಿಮ ಕೇಂದ್ರಿತ ಮಾದರಿಯ ಆರ್ಥಿಕ ನೀತಿಯ ಫಲವಾದ ಮುಕ್ತ ಆರ್ಥಿಕ ನೀತಿಯ ಸುಳಿಯಿಂದ ಹೊರಬರದ ಹೊರತು ಭೂಸ್ವಾಧೀನ ಪಕ್ರಿಯೆಗಳು ನಿಲ್ಲುವಂತೆ ಕಾಣುತ್ತಿಲ್ಲ. ಜೊತೆಗೆ ಎಲ್ಲಿಯವರೆಗೂ ನಾವು ಕೃಷಿಯನ್ನು ಒಂದು ಕೈಗಾರಿಕೆಯನ್ನಾಗಿ ನೋಡುವುದಿಲ್ಲವೊ ಅಲ್ಲಿಯವರೆಗೂ ಇದು ಮುಂದುವರಿಯುತ್ತದೆ. ಹೀಗೆ ಕೃಷಿಗೆ ಕೈಗಾರಿಕೆಯ ಸ್ಥಾನಮಾನ ನೀಡಿ ನಮ್ಮ ಬಂಡವಾಳ, ಶ್ರಮ, ತಂತ್ರಜ್ಞಾನಗಳನ್ನು ಅದರಲ್ಲಿ ಹೂಡಿಯೇ ಯಶಸ್ಸು ಸಾಧಿಸಬೇಕಿದೆ. ಅದಕ್ಕಾಗಿ ಕೈಗಾರಿಕೆಗಳ ಮೂಲಸೂತ್ರಗಳಾದ ಹೂಡಿಕೆ, ಉತ್ಪಾದನೆ, ವಿತರಣೆಯ ವಿಧಾನಗಳನ್ನು ಕೃಷಿಗೂ ಅನ್ವಯಿಸಿಕೊಳ್ಳಬೇಕಾಗಿದೆ. ಒಟ್ಟಿನಲ್ಲಿ ಅಭಿವೃದ್ಧಿಯ ಕುರಿತಾದ ನಮ್ಮ ಪೂರ್ವಾಗ್ರಹಗಳನ್ನು ತೊರೆದು ನಮ್ಮ ಸಾಮಾಜಿಕ ಪರಿಸರಕ್ಕನುಗುಣವಾದ ಸ್ವದೇಶಿ ಆರ್ಥಿಕ ನೀತಿಯೊಂದನ್ನು ಅಳವಡಿಸಿಕೊಳ್ಳಬೇಕಾಗಿದೆ.
ಇದೆಲ್ಲ ಅಷ್ಟು ಸುಲಭವಾಗಿ ನಡೆಯುವ ವಿಚಾರವೇನಲ್ಲ. ಯಾಕೆಂದರೆ ಬಂಡವಾಳಶಾಹಿಗಳ ಹಿಡಿತದಲ್ಲಿರುವ ನಮ್ಮ ವ್ಯವಸ್ಥೆಯಲ್ಲಿಯೇ ಒಂದು ಅಮೂಗ್ರವಾದ ಬದಲಾವಣೆಯಾಗಬೇಕಾದ ಅನಿವಾರ್ಯತೆಯಿದೆ. ಆದರೆ ಇಂತಹ ಬದಲಾವಣೆ ಹೇಗೆ ಸಾಧ್ಯ ಮತ್ತು ಎಲ್ಲಿಂದ ಶುರುವಾಗಬೇಕೆಂಬುದೇ ಇವತ್ತು ಚಿಂತಿಸಬೇಕಾದ ವಿಷಯವಾಗಿದೆ.

share
ಕು.ಸ.ಮಧುಸೂದನರಂಗೇನಹಳ್ಳಿ
ಕು.ಸ.ಮಧುಸೂದನರಂಗೇನಹಳ್ಳಿ
Next Story
X