ಹಗಲು ದರೋಡೆ..!

ಮಾನ್ಯರೆ,
ಬೆಂಗಳೂರು ವಾತಾವರಣ ಮೊದಲಿನಂತಿಲ್ಲ. ಈಗಂತೂ ಬಿಸಿಲು..ಬಿಸಿಲು.. ಇತ್ತೀಚಿನ ದಿನಗಳಲ್ಲಂತೂ ಬಿಸಿಲಿನ ತಾಪವಮಾನ 41 ಸೆಲ್ಸಿಯಸ್ ಡಿಗ್ರಿಗಿಂತ ಜಾಸ್ತಿ ಏರುತ್ತಿದೆ. ‘ಮರಗಳ ನಗರಿ’ಯೆಂದೇ ಖ್ಯಾತಿ ಗಳಿಸಿದರೂ ಬೆಂಗಳೂರಲ್ಲಿ ಬಿಸಿಲ ಧಗೆ ತಾಳಲಾಗುತ್ತಿಲ್ಲ. ಬೆಳ್ಳಂಬೆಳಗ್ಗೆಯೇ ಮೈಯಲ್ಲಿ ಬೆವರು..!
ಅತ್ತ ಬಿಸಿಲಿನ ಧಗೆ.. ಇತ್ತ ನೀರಿನ ಕೊರತೆ. ಬೆಂಗಳೂರಲ್ಲಿ ನೀರಿಗೂ ದುಡ್ಡು ಕೊಡಬೇಕು. ಅದರಲ್ಲೂ ‘ಟ್ಯಾಂಕರ್ ನೀರು’ ವ್ಯವಹಾರದ ರೂಪ ಪಡೆದಿದೆ. ಈಗಂತೂ ದುಪ್ಪಟ್ಟು ಹಣ ನೀಡಿ ನೀರು ಕೊಡಿ ಅಂದರೂ ಬೆದರಿಸುವವರೇ ಜಾಸ್ತಿ. ಬೇಸಿಗೆಯನ್ನೇ ಬಂಡವಾಳವನ್ನಾಗಿಸಿಕೊಂಡ ಕೆಲ ಖಾಸಗಿ ನೀರು ಪೂರೈಕೆದಾರರು ಜನರಿಂದ ಹಣ ಸುಲಿಗೆ ಮಾಡುತ್ತಿದ್ದಾರೆ. ಮೊದಲೆಲ್ಲಾ ಟ್ಯಾಂಕರ್ ನೀರಿಗೆ ಇಂತಿಷ್ಟು ದರ ನಿಗದಿ ಮಾಡಲಾಗುತ್ತಿತ್ತು. ಈಗಂತೂ ಬೆದರಿಸಿ, ಡಬಲ್, ತ್ರಿಬಲ್ ಹಣ ಕೊಡಬೇಕೆಂದು ಖಾಸಗಿ ನೀರು ಪೂರೈಕೆದಾರರು ಸುಲಿಗೆಗಿಳಿದಿದ್ದಾರೆ. ಶುದ್ಧವಾದ ನೀರನ್ನು ಸರಬರಾಜು ಮಾಡಬೇಕೆಂಬ ಬಿಬಿಎಂಪಿ ನಿಯಮವಿದ್ದರೂ ಇದಕ್ಕೆ ಕಿಮ್ಮತ್ತು ಬೆಲೆ ಇಲ್ಲ. ದುರಂತ ಅಂದರೆ ನಗರದ ಕೆಲ ಕಡೆ ಇರುವ ಕೆರೆಗಳಲ್ಲಿನ ಅಳಿದುಳಿದ ನೀರಿಗೆ ಮೋಟಾರ್ ಅಳವಡಿಸಿ ನೀರು ತುಂಬಿಸಿಕೊಳ್ಳಲಾಗುತ್ತಿದೆ. ಅಲ್ಲದೆ ಖಾಸಗಿ ನೀರು ಪೂರೈಕೆದಾರರು ಬಿಬಿಎಂಪಿಯಲ್ಲಿ ನೋಂದಣಿ ಮಾಡಿಸಿಕೊಳ್ಳದೆ ಟ್ಯಾಂಕರನ್ನು ಓಡಿಸುತ್ತಿದ್ದಾರೆ. ಇಂತಹವರನ್ನು ಪತ್ತೆ ಹಚ್ಚಲು ಒಂದು ತಂಡ ರಚಿಸಿ ಬಿಬಿಎಂಪಿ ಸುಲಿಗೆದಾರರಿಗೆ ಕಠಿಣ ಶಿಕ್ಷೆ ವಿಧಿಸಬೇಕಾಗಿದೆ.





