ಸಿಡಿಮದ್ದು ಪುರಾತನ ಸಂಪ್ರದಾಯವಲ್ಲ

ಮಾನ್ಯರೆ,
ತಮ್ಮ ದೇವಸ್ಥಾನದ ಜಾತ್ರೆಯಲ್ಲಿ ಸಿಡಿಮದ್ದು ಪ್ರದರ್ಶನ ನೂರಾರು ವರ್ಷಗಳಿಂದ ನಡೆದು ಬಂದ ಸಂಪ್ರದಾಯ. ಹಾಗಾಗಿ ಅದನ್ನು ನಿಲ್ಲಿಸುವುದು ಸಾಧ್ಯವಿಲ್ಲ ಎಂಬ ದುರಗ್ರಹದಿಂದ ಪುಟ್ಟಿಂಗಲ್ ದೇವಸ್ಥಾನದ ಆಡಳಿತ ಮಂಡಳಿ ಕೊಲ್ಲಂ ಜಿಲ್ಲಾಧಿಕಾರಿಯ ಆದೇಶ ಧಿಕ್ಕರಿಸಿತು. ಸ್ಫೋಟಕಗಳ ಇತಿಹಾಸ ನೋಡಿದರೆ ಹಿಂದೂ ಜಾತ್ರೆಯಲ್ಲಿ ಪಟಾಕಿ ಸುಡುವುದು ಹಿಂದೂ ಸಂಪ್ರದಾಯ-ಪರಂಪರೆ ಆಗಲು ಸಾಧ್ಯವೇ ಇಲ್ಲ. ಯಾಕೆಂದರೆ ಪಟಾಕಿ-ಸ್ಫೋಟಕಗಳ ಮೂಲ ಚೀನಾ ದೇಶ. ಅಲ್ಲಿಂದ ಅದು ಮಧ್ಯ ಏಶಿಯಾ ಹಾಗೂ ಯುರೋಪಿಗೆ ಹೋಗಿ ನಂತರ ಬ್ರಿಟಿಷರ ಕಾಲದಲ್ಲಿ ಅದು ಭಾರತಕ್ಕೆ ಬಂದದ್ದು, ಅಂದರೆ ಭಾರತದಲ್ಲಿ ಪಟಾಕಿಗಳು ಹೆಚ್ಚೆಂದರೆ 250 ವರ್ಷ ಹಳೆಯವು. ಮೊಗಲರು ತಂದಿದ್ದ ಸ್ಫೋಟಕಗಳು ಕೇವಲ ಯುದ್ಧದ ತೋಪುಗಳಲ್ಲಿ ಮಾತ್ರ ಬಳಕೆಯಾಗುತ್ತಿತ್ತು. ಟಿಪ್ಪು ಸುಲ್ತಾನನೂ ಅದನ್ನು ಯುದ್ಧದಲ್ಲಿ ಮಾತ್ರ ಬಳಸಿದ್ದ. ಆದರೆ ಈ ಸ್ಫೋಟಕಗಳನ್ನು ಸಣ್ಣ ಗಾತ್ರದಲ್ಲಿ ಕಾಗದದಲ್ಲಿ ಸುತ್ತಿ ಜನರ ಮನರಂಜನೆಗಾಗಿ ಸುಡುವ ವಿಧಾನ ಮೊಗಲರಿಗೆ ಅಥವಾ ಟಿಪ್ಪು ಸುಲ್ತಾನನಿಗೂ ಗೊತ್ತಿರಲಿಲ್ಲ. ಕಾಗದ ತಯಾರಿಸುವುದನ್ನೂ ನಮಗೆ ಬ್ರಿಟಿಷರು ಕಲಿಸಿದ್ದು, ಹಾಗೂ ಕಾಗದದಲ್ಲಿ ಸ್ಫೋಟಕ ಮದ್ದು ಸುತ್ತಿ ಸಣ್ಣ ಸಣ್ಣ ಪಟಾಕಿ ತಯಾರಿಸುವುದನ್ನೂ ಬ್ರಿಟಿಷರೇ ನಮಗೆ ಕಲಿಸಿದ್ದು. ಬ್ರಿಟಿಷರಿಂದಾಗಿ ಜನಸಾಮಾನ್ಯರು ಮನರಂಜನೆಗಾಗಿ ಸಣ್ಣ ಸಣ್ಣ ಪಟಾಕಿ ಸುಡುವ ಪದ್ಧತಿ ಶುರುವಾಯಿತು. ಪಟಾಕಿ ಅಥವಾ ಇತರ ಮನರಂಜಕ ಸಿಡಿಮದ್ದುಗಳನ್ನು ತಯಾರಿಸುವ ವಿಧಾನ ಹಿಂದೂಗಳಿಗೆ ಗೊತ್ತೇ ಇರದಿದ್ದಾಗ ಅದು ಹಿಂದೂಗಳ ಪುರಾತನ ಸಂಪ್ರದಾಯ ಹೇಗಾಗಬಲ್ಲದು? ಕುರುಕ್ಷೇತ್ರ ಯುದ್ಧದಲ್ಲಿ ಕ್ಷಿಪಣಿ ಮತ್ತು ಅಣುಬಾಂಬ್ ಪ್ರಯೋಗಿಸಲಾಗಿತ್ತು ಎಂಬುದೆಲ್ಲಾ ನವ-ವೈದಿಕರ ಕಲ್ಪನೆ (ಕುಜ್ನಾನ) ಅಷ್ಟೇ. ಹಾಗಾಗಿ ಪುರಾತನ ಹಿಂದೂ ಸಂಪ್ರದಾಯದ ಹೆಸರಲ್ಲಿ ಭಾರತದ ದೇವಸ್ಥಾನಗಳ ಜಾತ್ರೆಗಳಲ್ಲಿ ಪಟಾಕಿ ಸುಡುವುದಕ್ಕೆ ಅನುಮತಿ ಕೊಡದಿರುವುದೇ ಲೇಸು.





