ಆ್ಯಪಲ್, ಗೂಗಲ್, ಅಮೆಝಾನ್, ಫೇಸ್‌ಬುಕ್‌ಗಳ ಕೋಚ್ ನಿಧನ

ವಾಶಿಂಗ್ಟನ್, ಎ. 19: ಆ್ಯಪಲ್ ಮತ್ತು ಗೂಗಲ್ ಎರಡೂ ಕಂಪೆನಿಗಳಲ್ಲಿ ಅಮೂಲ್ಯ ಸೇವೆ ಸಲ್ಲಿಸಿರುವ ಬಿಲ್ ಕ್ಯಾಂಬೆಲ್ (ಅವರನ್ನು ಜನರು ಪ್ರೀತಿಯಿಂದ ಕರೆಯುವುದು ‘ದ ಕೋಚ್’ ಎಂದು) ಸೋಮವಾರ ನಿಧನರಾಗಿದ್ದಾರೆ. ಅವರಿಗೆ 75 ವರ್ಷವಾಗಿತ್ತು.
ಈ ಸಿಲಿಕಾನ್ ವ್ಯಾಲಿ ಗುರು ಏಕ ಕಾಲದಲ್ಲಿ ಆ್ಯಪಲ್ ಮತ್ತು ಗೂಗಲ್ ಆಡಳಿತ ಮಂಡಳಿಗಳ ಸದಸ್ಯರಾಗಿದ್ದರು. ಆ್ಯಪಲ್‌ನಲ್ಲಿ ಸ್ಟೀವ್ ಜಾಬ್ಸ್‌ಗೆ ಸಲಹಾಗಾರರಾಗಿದ್ದ ಅವಧಿಯಲ್ಲೆ ಗೂಗಲ್ ಸ್ಥಾಪಕ ಲ್ಯಾರಿ ಪೇಜ್ ಮತ್ತು ಸರ್ಗಿ ಬ್ರಿನ್‌ರನ್ನೂ ಕೆಲಸಕ್ಕೆ ಹಚ್ಚಿದ್ದರು. ಅಮೆಝಾನ್‌ನ ಜೆಫ್ ಬೆರೆಸ್ ಮತ್ತು ಮಾರ್ಕ್ ಝುಕರ್‌ಬರ್ಗ್ ಕೂಡ ಕ್ಯಾಂಬೆಲ್‌ರ ಪರಿಣತಿಯ ಪ್ರಯೋಜನವನ್ನು ಪಡೆಯಲು ಬಯಸಿದರು.
ಸಿಲಿಕಾನ್ ವ್ಯಾಲಿಯ ಹೊರಗೆ ಹೆಚ್ಚಾಗಿ ಪ್ರಚಾರದಲ್ಲಿಲ್ಲದಿದ್ದರೂ, ಜಗತ್ತಿನ ಅತ್ಯಂತ ಪ್ರಭಾವಿ ಕಂಪೆನಿಗಳ ಪಟ್ಟಿಯಲ್ಲಿರುವ ಆ್ಯಪಲ್ ಮತ್ತು ಗೂಗಲ್‌ನ ದಿಕ್ಕನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಇತರ ತಂತ್ರಜ್ಞಾನ ಕಂಪೆನಿಗಳು ಮತ್ತು ಉದ್ಯಮಿಗಳೂ ಅವರ ಸಲಹೆ ಕೋರಿದವು.
ಕ್ಯಾಂಬೆಲ್ ಆ್ಯಪಲ್ ಕಂಪೆನಿಯ ಮಾರ್ಕೆಟಿಂಗ್ ಮತ್ತು ಸಾಫ್ಟ್‌ವೇರ್ ಡೆವಲಪ್‌ಮೆಂಟ್ ವಿಭಾಗಗಳ ಮುಖ್ಯಸ್ಥರಾಗಿದ್ದರು. ಇನೂಯಿಟ್ ಆ್ಯಪಲ್‌ನಿಂದ ಬೇರ್ಪಟ್ಟಾಗ ಅದಕ್ಕೆ ಹೋದರು.
1980ರ ದಶಕದಲ್ಲಿ ಸಿಲಿಕಾನ್ ವ್ಯಾಲಿಗೆ ಹೋಗುವ ಮೊದಲು ಕ್ಯಾಂಬೆಲ್ ಆರು ಋತುಗಳಲ್ಲಿ ಕೊಲಂಬಿಯ ವಿಶ್ವವಿದ್ಯಾನಿಲಯ ಫುಟ್ಬಾಲ್ ತಂಡದ ಪ್ರಧಾನ ಕೋಚ್ ಆಗಿದ್ದರು.







