ದ್ವಿತೀಯ ಪಿಯು ವೌಲ್ಯಮಾಪನ ಇಂದು ಆರಂಭ

ಬೆಂಗಳೂರು, ಎ.19: ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಪ್ರತಿಭಟನೆಯನ್ನು ವಾಪಸ್ ತೆಗೆದುಕೊಳ್ಳುತ್ತಿದ್ದು, ನಾಳೆ ಯಿಂದಲೇ ಉಪನ್ಯಾಸಕರು ವೌಲ್ಯಮಾಪನಕ್ಕೆ ಹಾಜರಾ ಗುತ್ತಾರೆ ಎಂದು ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಹೇಳಿದ್ದಾರೆ. ಮಂಗಳವಾರ ನಗರದ ಫ್ರೀಡಂ ಪಾರ್ಕ್‌ನಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಸರಕಾರ ನಮ್ಮ ಬೇಡಿಕೆ ಗಳನ್ನು ಈಡೇರಿಸದಿದ್ದರೂ ಪೋಷಕರ ಆತಂಕವನ್ನು ದೂರ ಮಾಡಲು ಹಾಗೂ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಪ್ರತಿಭಟನೆಯನ್ನು ವಾಪಸ್ ತೆಗೆದುಕೊಳ್ಳುತ್ತಿದ್ದೇವೆ ಎಂದು ಹೇಳಿದರು. ಸರಕಾರ ಘೋಷಿಸಿದ್ದ ಒಂದು ಇನ್‌ಕ್ರಿಮೆಂಟ್ ಅನ್ನು ಸರಕಾರಕ್ಕೆ ವಾಪಸ್ ತೆಗೆದುಕೊಳ್ಳಲು ಸೂಚಿಸಲಾಗಿದ್ದು, ದ್ವಿತೀಯ ಪಿಯು ವೌಲ್ಯಮಾಪನ ಮುಗಿದ ಬಳಿಕ ಕುಮಾರ್ ನಾಯಕ್ ವರದಿ ಜಾರಿ ಸಂಬಂಧಿಸಿ ಪ್ರತಿಭಟನೆ ನಡೆಸುವುದರ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ತಿಳಿಸಿದರು.
18 ದಿನಗಳಿಂದ ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿದ್ದ ದ್ವಿತೀಯ ಪಿಯು ಉಪನ್ಯಾಸಕರ ಧರಣಿ ಮಂಗಳವಾರ ಸಂಜೆ ಅಂತ್ಯಗೊಂಡಿದ್ದು, ಉಪನ್ಯಾಸಕರು ಸರಕಾರ ನೀಡಿರುವ ಭಿಕ್ಷೆಯನ್ನು ವಾಪಸ್ ಸರಕಾರಕ್ಕೆ ನೀಡುತ್ತಿದ್ದೇವೆ ಎಂಬ ಘೋಷಣೆಗಳನ್ನು ಕೂಗಿದರು.
ನೋಟಿಸ್‌ಗೆ ಹೆದರಲ್ಲ: ಕುಮಾರ ನಾಯಕ್ ವರದಿಗೆ ಜಾರಿಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ಪಿಯು ಉಪನ್ಯಾಸಕರಿಗೆ ಸರಕಾರ ನೋಟಿಸ್ ಜಾರಿಮಾಡಿದೆ. ಇಂತಹ ಯಾವ ನೋಟಿಸ್‌ಗಳಿಗೂ ಉಪನ್ಯಾಸಕರು ಹೆದರಬೇಕಾಗಿಲ್ಲ ಎಂದು ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ತಿಳಿಸಿದ್ದಾರೆ.
ಕುಮಾರ್ ನಾಯಕ ವರದಿ ಜಾರಿ ಮಾಡದಿದ್ದರೆ ಪ್ರತಿಭಟನೆ ಮಾಡುವುದಾಗಿ ಕಳೆದ ಆರು ತಿಂಗಳ ಹಿಂದೆಯೆ ಸರಕಾರಕ್ಕೆ ಪತ್ರ ಬರೆದಿದ್ದೆವು. ನಮ್ಮ ಪತ್ರಕ್ಕೆ ಸರಕಾರದ ಕಡೆಯಿಂದ ಯಾವುದೆ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಸರಕಾರಕ್ಕೆ ಉಪನ್ಯಾಸಕರಿಗೆ ನೋಟಿಸ್ ಜಾರಿ ಮಾಡುವ ಯಾವುದೆ ನೈತಿಕತೆಯಿಲ್ಲ ಎಂದು ಅವರು ತಿಳಿಸಿದರು.
ವೇತನ ತಾರತಮ್ಯ ನಿವಾರಿಸಿಕೊಳ್ಳಬೇಕೆಂದು ಕಳೆದ 20 ವರ್ಷಗಳಿಂದ ಸರಕಾರದ ಬಳಿ ಮನವಿ ಮಾಡಲಾಗಿದೆ. ಆದಾಗ್ಯು ಸರಕಾರ ಉಪನ್ಯಾಸಕರ ಬೇಡಿಕೆಯನ್ನು ಈಡೇರಿಸುವಲ್ಲಿ ನಿರ್ಲಕ್ಷ ಎಸಗಿದೆ. ಹೀಗಾಗಿ ವೌಲ್ಯಮಾಪನವನ್ನು ಬಹಿಷ್ಕರಿಸಿ ಕಳೆದ 18ದಿನದಿಂದ ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಹೋರಾಟ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಪಿಯು ಉಪನ್ಯಾಸಕರ ಹೋರಾಟ ನ್ಯಾಯಯುತವಾಗಿದೆ. ಸರಕಾರವೆ ರಚಿಸಿದ್ದ ಕುಮಾರ ನಾಯಕ್ ವರದಿಯನ್ನು ಜಾರಿ ಮಾಡುವಂತೆ ನಾವು ಒತ್ತಾಯಿಸುತ್ತಿದ್ದೇವೆ. ನಮ್ಮ ಬೇಡಿಕೆ ಈಡೇರದ ಹೊರತು ಸ್ವಾತಂತ್ರ ಉದ್ಯಾನವನದಿಂದ ಜಗ್ಗುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದರು.







