21ನೆ ಶತಮಾನಕ್ಕೆ ಭಾರತದ ಆಧಿಪತ್ಯ-ಕಾಶ್ಮೀರದಲ್ಲಿ ಮೋದಿ
ಶ್ರೀನಗರ, ಎ.19: ದೇಶದಲ್ಲಿ 80 ಕೋಟಿಗೂ ಅಧಿಕ ಯುವಕರಿದ್ದು ಜ್ಞಾನಶಖೆ ಎನಿಸಿದ 21ನೆ ಶತಮಾನವನ್ನು ಭಾರತ ಆಳ್ವಿಕೆ ಮಾಡಲಿದೆ. ಪ್ರತಿ ಯುವಕರ ಕನಸು ಈ ದೇಶದ ಪ್ರಗತಿಯ ಯಶೋಗಾಥೆಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದರು.
ಮಂಗಳವಾರ ಶ್ರೀಮಾತಾ ವೈಷ್ಣೋದೇವಿ ವಿಶ್ವವಿದ್ಯಾನಿಲಯದ ಐದನೆ ಘಟಿಕೋತ್ಸವ ಭಾಷಣ ಮಾಡಿದ ಮೋದಿ, ಇದು ಜ್ಞಾನದ ಶತಮಾನ. ಯಾವಾಗ ಜ್ಞಾನಶಖೆ ಇತ್ತೋ ಆ ಎಲ್ಲ ಸಂದರ್ಭದಲ್ಲೂ ಭಾರತ ಪ್ರಭುತ್ವ ಮೆರೆದಿದೆ ಎಂದು ಹೇಳಿದರು.
ಇಪ್ಪತ್ತೊಂದನೆ ಶತಮಾನಕ್ಕೆ ಬೇಕಾಗಿರುವ ಶಕ್ತಿಯ ಕಾರಣದಿಂದ ಭಾರತ ಈ ಶತಮಾನದ ಅಗ್ರಗಣ್ಯ ದೇಶವಾಗಲಿದೆ. 35 ವರ್ಷಕ್ಕಿಂತ ಕೆಳ ವಯಸ್ಸಿನ 80 ಕೋಟಿ ಯುವಕರು ಭಾರತದಲ್ಲಿದ್ದಾರೆ. ಇದು ಭಾರತದ ಶಕ್ತಿ ಎಂದರು.
ಮುಂದೇನು ಎಂಬ ಪ್ರಶ್ನೆ ವಿದ್ಯಾರ್ಥಿಗಳಲ್ಲಿ ಕಾಡುತ್ತಿರಬಹುದು. ಆದರೆ ಭವಿಷ್ಯದಲ್ಲಿ ಏನು ಕಾದಿದೆ ಎನ್ನುವುದನ್ನು ತಿಳಿದಿರುವರು ಇತರರನ್ನು ಅವಲಂಬಿಸಬೇಕಾಗಿಲ್ಲ. ನಿಮ್ಮ ಪೋಷಕರು ನಿಮಗಾಗಿ ಏನು ಮಾಡಿದ್ದಾರೆ ಎನ್ನುವುದನ್ನು ನೆನಪಿಸಿಕೊಳ್ಳಿ. ನಿಮ್ಮ ಸಂತೋಷಕ್ಕಾಗಿ ಅವರು ಸ್ವಂತ ಸಂತೋಷವನ್ನು ತ್ಯಾಗ ಮಾಡಿದ್ದಾರೆ. ನೀವು ಬಾಲ್ಯದಲ್ಲಿ ಕನಸು ಕಂಡ ಬಹಳಷ್ಟು ಅಂಶಗಳು ಕಾರ್ಯಗತಗೊಳ್ಳದಿರಬಹುದು. ಅದನ್ನು ಮರೆತು, ಏನನ್ನು ಸಾಧಿಸಿದ್ದೀರಿ ಎನ್ನುವುದನ್ನಷ್ಟೇ ಚಿಂತಿಸಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ವೈಷ್ಣೋದೇವಿ ದೇಗುಲಕ್ಕೆ ದೇಶದ ಮೂಲೆಮೂಲೆಗಳಿಂದ ಬರುವ ಭಕ್ತರ ದೇಣಿಗೆಯಿಂದ ವಿಶ್ವವಿದ್ಯಾನಿಲಯ ಸ್ಥಾಪಿಸಲಾಗಿದೆ. ಆದ್ದರಿಂದ ಬಡವರಿಗಾಗಿ ಏನಾದರೂ ಕೊಡುತ್ತೇವೆ ಎಂಬ ಪ್ರತಿಜ್ಞೆ ಮಾಡಿ. ಆ ಬಡ ಭಕ್ತರಿಂದಲೇ ಈ ವಿಶ್ವವಿದ್ಯಾನಿಲಯ ನಿರ್ಮಾಣವಾಗಿರುವುದು ಎಂದರು.





