ರಸ್ತೆ, ಫುಟ್‌ಪಾತ್‌ಗಳಲ್ಲಿ ಧಾರ್ಮಿಕ ಕಟ್ಟಡಗಳಿಂದ ದೇವರಿಗೇ ಅವಮಾನ ರಾಜ್ಯಗಳಿಗೆ ಸುಪ್ರೀಂ ತರಾಟೆ
ಹೊಸದಿಲ್ಲಿ, ಎ.19: ಸಾರ್ವಜನಿಕ ರಸ್ತೆ ಹಾಗೂ ಫುಟ್‌ಪಾತ್‌ಗಳಲ್ಲಿ ನಿರ್ಮಾಣಗೊಂಡಿರುವ ಧಾರ್ಮಿಕ ಕೇಂದ್ರಗಳು ''ದೇವರಿಗೇ ಅವಮಾನ'' ಎಂದು ಹೇಳಿರುವ ಸುಪ್ರೀಂಕೋರ್ಟ್ ಇಂತಹ ಕಟ್ಟಡಗಳನ್ನು ತೆರವುಗೊಳಿಸಲು ಕೈಗೊಂಡ ಕ್ರಮದ ಬಗ್ಗೆ ಅಫಿದಾವಿತ್ ಸಲ್ಲಿಸದ ರಾಜ್ಯ ಸರಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳನ್ನು ತರಾಟೆಗೆ ತೆಗದುಕೊಂಡಿದೆ.
2006ರಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಕೆಯಾದ ಅರ್ಜಿ ವಿಚಾರಣೆ ನಡೆಸುವ ವೇಳೆ, ಸುಪ್ರೀಂಕೋರ್ಟ್ ಎಲ್ಲ ರಾಜ್ಯ ಸರಕಾರಗಳಿಗೆ ಸೂಚನೆ ನೀಡಿ, ರಸ್ತೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಇರುವ ಪ್ರಾರ್ಥನೆ ಮತ್ತು ಪೂಜಾಮಂದಿರಗಳು ಸೇರಿದಂತೆ ಎಲ್ಲ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸುವಂತೆ ಆದೇಶಿಸಿತ್ತು.
ಈ ಸಂಬಂಧ ಕೈಗೊಂಡ ಕ್ರಮದ ಬಗ್ಗೆ ಅಫಿದಾವಿತ್ ಸಲ್ಲಿಸಲು ವಿಫಲವಾಗಿರುವ ಹಿನ್ನೆಲೆಯಲ್ಲಿ, ನ್ಯಾಯಮೂರ್ತಿ ವಿ.ಗೋಪಾಲಗೌಡ ಹಾಗೂ ಅರುಣ್ ಮಿಶ್ರಾ ಅವರನ್ನೊಳಗೊಂಡ ನ್ಯಾಯಪೀಠ, ಇಂಥ ಮನೋಭಾವವನ್ನು ನಾವು ಸಹಿಸುವುದಿಲ್ಲ ಎಂದು ಕಟುವಾಗಿ ಹೇಳಿದೆ. ಅರ್ಜಿಯ ವಿಚಾರಣೆಯನ್ನು ಮೇ 2ನೆ ವಾರಕ್ಕೆ ಮುಂದೂಡಲಾಗಿದೆ.
ಸುಪ್ರೀಂಕೋರ್ಟ್ ಕಾಲ ಕಾಲಕ್ಕೆ ನೀಡಿದ ನಿರ್ದೇಶನಗಳನ್ನು ಪಾಲಿಸುವಲ್ಲಿ ವಿಫಲವಾದ ಎಲ್ಲ ರಾಜ್ಯ ಸರಕಾರಗಳ ಮುಖ್ಯ ಕಾರ್ಯದರ್ಶಿಗಳಿಗೆ ಸಮನ್ಸ್ ನೀಡಿ, ಅಫಿದಾವಿತ್ ಸಲ್ಲಿಸಲು ಸೂಚಿಸಲಾಗುವುದು ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಹೇಳಿಕೆ ನೀಡಿದ ಬಳಿಕ, ಕೊನೆಯದಾಗಿ ಎರಡು ವಾರಗಳ ಅವಕಾಶವನ್ನು ಸುಪ್ರೀಂಕೋರ್ಟ್ ನೀಡಿತ್ತು.
ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಸಮನ್ಸ್ ನೀಡಲು ಮುಂದಾಗಿದ್ದ ಕೋರ್ಟ್, ಕೆಲ ರಾಜ್ಯಗಳ ಪರವಾಗಿ ಹಾಜರಾದ ವಕೀಲರ ವಾದವನ್ನು ಮನ್ನಿಸಿ ತನ್ನ ನಿರ್ಧಾರ ಪರಿಷ್ಕರಿಸಿತ್ತು.
ಮಾರ್ಚ್ 8ರಂದು ಸುಪ್ರೀಂಕೋರ್ಟ್‌ನಲ್ಲಿ ಛತ್ತೀಸ್‌ಗಡ ಸರಕಾರದ ವಿರುದ್ಧ ನ್ಯಾಯಾಲಯ ನಿಂದನೆ ಅರ್ಜಿ ಸಲ್ಲಿಸಲಾಗಿದೆ. ಬಳಿಕ ಈ ಅರ್ಜಿಯಲ್ಲಿ ವಾದಿಸಿರುವ ಅಂಶಗಳ ಬಗ್ಗೆ ವಾಸ್ತವಾಂಶದ ವರದಿ ನೀಡುವಂತೆ ಸರಕಾರಕ್ಕೆ ಸೂಚಿಸಿತ್ತು. ಈ ಸಂಬಂಧ ಕಾಲಕಾಲಕ್ಕೆ ಹೊರಡಿಸಿರುವ ಆದೇಶಗಳಿಗೆ ಬದ್ಧವಾಗಿರುವಂತೆ ಎಲ್ಲ ರಾಜ್ಯಗಳಿಗೆ ಸೂಚನೆಯನ್ನೂ ನೀಡಲಾಗಿತ್ತು.





