ಕಾರ್ಮಿಕರೇ ಪ್ರತಿಭಟನೆ ಕೈಬಿಡಿ: ಸಚಿವ ಪರಮೇಶ್ವರ್

ಬೆಂಗಳೂರು, ಎ. 19: ಪ್ರತಿಭಟನೆ ನೆಪದಲ್ಲಿ ಸಿದ್ಧ ಉಡುಪು ಕಾರ್ಮಿಕರು ಪೊಲೀಸರ ತಾಳ್ಮೆ ಪರೀಕ್ಷೆ ಮಾಡುವುದು ಸರಿಯಲ್ಲ. ಪೊಲೀಸರು ಕಲ್ಲೇಟು ಬಿದ್ದರೂ ಕಾರ್ಮಿಕರ ಜತೆ ಅತ್ಯಂತ ಸಂಯಮದಿಂದ ವರ್ತಿಸಿದ್ದಾರೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಪೊಲೀಸ್ ಇಲಾಖೆ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.
ಮಂಗಳವಾರ ಇಲ್ಲಿನ ನೃಪತುಂಗ ರಸ್ತೆಯಲ್ಲಿನ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ದಿಢೀರ್ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಕಾರ್ಮಿಕರು ತಮ್ಮ ಪ್ರತಿಭಟನೆಯನ್ನು ಕೂಡಲೇ ಹಿಂಪಡೆಯಬೇಕು ಎಂದು ಮನವಿ ಮಾಡಿದರು.
ಕೇಂದ್ರ ಸರಕಾರ ನೂತನ ಭವಿಷ್ಯ ನಿಧಿ(ಪಿಎಫ್) ನೀತಿ ರೂಪಿಸಿದ್ದು, 2016ರ ಆಗಸ್ಟ್‌ನಿಂದ ಜಾರಿಗೊಳಿಸುವುದಾಗಿ ಪ್ರಕಟಿಸಿದೆ. ಇದರಲ್ಲಿ ರಾಜ್ಯ ಸರಕಾರದ ಯಾವುದೇ ಪಾತ್ರ ಇಲ್ಲ. ಪ್ರತಿಭಟನೆ ನೆಪದಲ್ಲಿ ಸಾರ್ವಜನಿಕ ಆಸ್ತಿ-ಪಾಸ್ತಿಗೆ ಹಾನಿಯುಂಟು ಮಾಡುವುದನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
52 ತುಕಡಿ ನಿಯೋಜನೆ: ಇಲ್ಲಿನ ಹೊಸೂರು ರಸ್ತೆ, ಬನ್ನೇರುಘಟ್ಟ ರಸ್ತೆ, ಮೈಸೂರು ರಸ್ತೆ ಹಾಗೂ ತುಮಕೂರು ರಸ್ತೆ ವಿವಿಧೆಡೆಗಳಲ್ಲಿ ಕಾರ್ಮಿಕರ ಪ್ರತಿಭಟನೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಯಂತ್ರಿಸಲು 52 ಕೆಎರ್ಸ್ಸಾಪಿ, ಸಿಎಆರ್ ತುಕಡಿಗಳನ್ನು ನಿಯೋಜಿಸಲಾಗಿದೆ ಎಂದು ಡಾ.ಜಿ.ಪರಮೇಶ್ವರ್ ಹೇಳಿದರು.
ಪೊಲೀಸರಿಗೆ ಕಲ್ಲೇಟು ಬಿದ್ದರೂ ಅತ್ಯಂತ ಸಂಯಮದಿಂದ ವರ್ತಿಸಿದ್ದಾರೆ. ಪೊಲೀಸ್ ಸಿಬ್ಬಂದಿ ಕಠಿಣ ಕ್ರಮಕ್ಕೆ ಮುಂದಾಗಿದ್ದರೆ ಪ್ರತಿಭಟನೆಯಲ್ಲಿದ್ದ ದೊಡ್ಡ ಸಂಖ್ಯೆಯ ಮಹಿಳೆಯರಿಗೆ ತೊಂದರೆ ಆಗುತ್ತಿತ್ತು ಎಂದ ಅವರು, ಸಾರ್ವಜನಿಕ ಆಸ್ತಿಗೆ ನಷ್ಟವನ್ನುಂಟು ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ ಎಂದರು.
ಕಾರ್ಮಿಕರು ಪೊಲೀಸರ ತಾಳ್ಮೆ ಪರೀಕ್ಷಿಸದೆ, ಸಾರ್ವಜನಿಕರ ಜನಜೀವನಕ್ಕೆ ಯಾವುದೇ ರೀತಿಯಲ್ಲಿ ಅಡ್ಡಿಪಡಿಸದೆ ಪ್ರತಿಭಟನೆ ನಡೆಸಬೇಕು. ಅದನ್ನು ಬಿಟ್ಟು ಗಂಟೆಗಟ್ಟಲೆ ರಸ್ತೆ ತಡೆ, ಪ್ರತಿಭಟನೆ ಸರಿಯಲ್ಲ. ಕಾರ್ಮಿಕರ ಹೋರಾಟಕ್ಕೆ ರಾಜ್ಯ ಸರಕಾರ ಅಗತ್ಯ ನೆರವು ನೀಡಲಿದೆ ಎಂದು ಹೇಳಿದರು.
ಕಾರ್ಮಿಕರ ಪ್ರತಿನಿಧಿಗಳು ಸಿಎಂ ಸಿದ್ಧರಾಮಯ್ಯ ಹಾಗೂ ರಾಜ್ಯ ಸರಕಾರದ ಜೊತೆ ಸಮಾಲೋಚನೆ ನಡೆಸಬಹುದು. ಮುಖ್ಯಮಂತ್ರಿ ಸಿದ್ಧರಾಮಯ್ಯ, ಈಗಾಗಲೇ ಕೇಂದ್ರ ಕಾನೂನು ಸಚಿವರು ಹಾಗೂ ಕಾರ್ಮಿಕರ ಸಚಿವರೊಂದಿಗೆ ಚರ್ಚಿಸಿದ್ದಾರೆ. ಹೀಗಾಗಿ ಕಾರ್ಮಿಕರು ತಮ್ಮ ಪ್ರತಿಭಟನೆ ಕೈಬಿಡಬೇಕು ಎಂದು ಪರಮೇಶ್ವರ್ ಕೋರಿದರು.





