ಕಷ್ಟ ಕೋಟಲೆಗಳಲ್ಲಿ ಅರಳಿದ ಅರಸ-ಎಂ.ರಘುಪತಿ
ಬೆಂಗಳೂರು ನಗರದಲ್ಲಿ ಹುಟ್ಟಿ ಬೆಳೆದ ಎಂ.ರಘುಪತಿ(83) ವಿದ್ಯಾರ್ಥಿ ಸಂಘಟನೆ, ಪ್ರತಿಭಟನೆ, ಹೋರಾಟಗಳ ಮೂಲಕ ನಾಯಕನಾಗಿ ರೂಪುಗೊಂಡವರು. 60 ಮತ್ತು 70ರ ದಶಕದಲ್ಲಿ ಬೆಂಗಳೂರಿನ ಶಾಲಾ ಕಾಲೇಜುಗಳ ವಿದ್ಯಾರ್ಥಿ ಸಂಘ, ಚುನಾವಣೆ, ಪದಾಧಿಕಾರಿಗಳ ಆಯ್ಕೆಗೆ ರಘುಪತಿಯವರದೇ ಮುಂದಾಳತ್ವ. ಆ ಕಾಲಕ್ಕೆ ವಿದ್ಯಾರ್ಥಿ ಸಂಘಟನೆ ನ್ಯಾಯದ ಪರವಾಗಿತ್ತು, ಪ್ರಬಲವಾಗಿತ್ತು, ಸರಕಾರವನ್ನು, ಅಧಿಕಾರಸ್ಥರನ್ನು ಅಂಕೆಯಲ್ಲಿಟ್ಟಿತ್ತು.
ಎಕ್ಸ್‌ಪೋ-70, ಅಂತಹ ಪ್ರಬಲ ಹೋರಾಟಗಳಲ್ಲೊಂದು. ಕರ್ನಾಟಕದ ಆಯ್ದ ಯುವಕರನ್ನು ಜಪಾನ್‌ನ ಎಕ್ಸ್‌ಪೋ-70 ಕಾರ್ಯಕ್ರಮಕ್ಕೆ ಕಳುಹಿಸುವಾಗ, ಅಂದಿನ ಸರಕಾರ ರಾಜಕಾರಣಿಗಳ ಮತ್ತು ಅಧಿಕಾರಿಗಳ ಮಕ್ಕಳನ್ನು ಆಯ್ಕೆ ಮಾಡಿತ್ತು. ಆಯ್ಕೆಯಲ್ಲಿ ಸ್ವಜನಪಕ್ಷಪಾತವಾಗಿದೆ, ಅಧಿಕಾರ ದುರುಪಯೋಗವಾಗಿದೆ ಎಂದು ವಿದ್ಯಾರ್ಥಿ ಸಂಘಟನೆ ರಘುಪತಿ ನೇತೃತ್ವದಲ್ಲಿ ಹೋರಾಟ ಕೈಗೊಂಡಿತ್ತು. ರಘುಪತಿ ಉಪವಾಸ ಸತ್ಯಾಗ್ರಹಕ್ಕೆ ಕುಳಿತು ಹೋರಾಟ ವಿಕೋಪಕ್ಕೆ ತಿರುಗಿ, ಪೊಲೀಸರಿಂದ ಲಾಠಿಚಾರ್ಜ್ ಕೂಡ ನಡೆದಿತ್ತು. ಆ ಹೋರಾಟದ ನಂತರ ಉಭಯ ಸದನಗಳಲ್ಲಿ ಚರ್ಚೆಯಾಗಿ ದೊಡ್ಡ ಸುದ್ದಿಯಾಗಿತ್ತು. ಇದು ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲರ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ಅದು ಪರೋಕ್ಷವಾಗಿ ವಿರೋಧಿ ಪಾಳೆಯದಲ್ಲಿದ್ದ ದೇವರಾಜ ಅರಸು ಅವರಿಗೆ ಅನುಕೂಲಕರ ವಾತಾವರಣ ಸೃಷ್ಟಿಸಿತ್ತು. ರಘುಪತಿ ಮತ್ತು ಅರಸು ಅವರ ಬಾಂಧವ್ಯಕ್ಕೆ ಬೆಸುಗೆಯಾಗಿತ್ತು. ರಘುಪತಿ ರಾಜಕಾರಣಕ್ಕೆ ಧುಮುಕಲು ದಾರಿ ಮಾಡಿಕೊಟ್ಟಿತ್ತು.
ದೇವರಾಜ ಅರಸು ಅವರ ಸಂಪರ್ಕಕ್ಕೆ ಬರುವ ಮೊದಲೇ ರಘುಪತಿಯವರಿಗೆ ರಾಷ್ಟ್ರೀಯ ಮಟ್ಟದ ನಾಯಕರಾದ ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾ ಗಾಂಧಿಯವರ ಪರಿಚಯವಿತ್ತು. ರಾಮಮನೋಹರ ಲೋಹಿಯಾರ 'ಮ್ಯಾನ್ ಕೈಂಡ್' ಪತ್ರಿಕೆಯ ಸಂಪಾದಕೀಯ ಬಳಗದಲ್ಲೊಬ್ಬರಾಗಿ, ವಿದ್ಯಾರ್ಥಿ ಸಂಘಟನೆಯ ಸಮಾರಂಭಕ್ಕೆ ಲೋಹಿಯಾರನ್ನು ಬೆಂಗಳೂರಿಗೆ ಕರೆಸಿದ ಕೀರ್ತಿಯೂ ರಘುಪತಿಯವರದಾಗಿತ್ತು. ಅರಸು ಜೊತೆಗಿನ ಒಡನಾಟದ ನಂತರ, ಆಲ್ ಇಂಡಿಯಾ ಸ್ಟೂಡೆಂಟ್ಸ್ ಕಾಂಗ್ರೆಸ್‌ನ ಅಧ್ಯಕ್ಷರಾದರು. ಯೂತ್ ಕಾಂಗ್ರೆಸ್ ಜನರಲ್ ಸೆಕ್ರೆಟರಿಯಾದ ಮೇಲೆ ಸಂಜಯಗಾಂಧಿಗೆ ಹತ್ತಿರವಾಗಿದ್ದರು. ಅರಸರು ಮುಖ್ಯಮಂತ್ರಿಗಳಾಗಿದ್ದಾಗ ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ನಂತರ ರಾಮಕೃಷ್ಣ ಹೆಗಡೆ, ದೇವೇಗೌಡ, ಜೆ.ಎಚ್.ಪಟೇಲ್‌ರಿಗೆ ಆಪ್ತರಾಗುವ ವೇಳೆಗೆ ಆಂಧ್ರದ ಮೇರುನಟ, ತೆಲುಗುದೇಶಂ ನಾಯಕ ಎನ್.ಟಿ. ರಾಮರಾವ್‌ರಿಗೆ ಮತ್ತು ತಮಿಳುನಾಡಿನ ಎಂಜಿಆರ್‌ರೊಂದಿಗೆ ಸ್ನೇಹ ಬೆಳೆಸಿದ್ದರು.
ದಲ್ಲದೆ ದಿಲ್ಲಿ ಮಟ್ಟದಲ್ಲಿ ಚಂದ್ರಶೇಖರ್, ವಿ.ಪಿ.ಸಿಂಗ್, ರಾಜೀವ್ ಗಾಂಧಿ, ಜಾರ್ಜ್ ಫೆರ್ನಾಂಡಿಸ್‌ರೊಂದಿಗೂ ಒಡನಾಟವಿಟ್ಟುಕೊಂಡಿದ್ದ ರಘುಪತಿ, ಎಲ್ಲಾ ಕಾಲಕ್ಕೂ ಎಲ್ಲರಿಗೂ ಸಲ್ಲುವ ಸ್ನೇಹಜೀವಿ ಎಂದೇ ಹೆಸರಾದವರು. ದೇವರಾಜ ಅರಸು ಅವರಿಂದ ಎರಡು ಬಾರಿ ಎಂಎಲ್‌ಸಿಯಾಗಿ ನೇಮಕಗೊಂಡ ರಘುಪತಿ; ಮೂರು ಬಾರಿ ಚುನಾಯಿತ ಶಾಸಕರಾಗಿ; ಪ್ರವಾಸೋದ್ಯಮ, ಕಾರ್ಮಿಕ ಮತ್ತು ಶಿಕ್ಷಣ ಸಚಿವರಾಗಿ ಕಾರ್ಯ ನಿರ್ವಹಿಸಿದವರು. ಈಗ, ಕಳೆದ ನಾಲ್ಕು ವರ್ಷಗಳಿಂದ ಯಾವ ರಾಜಕೀಯ ಪಕ್ಷಗಳೊಂದಿಗೂ ಗುರುತಿಸಿಕೊಳ್ಳದೆ, ವಿಶ್ರಾಂತ ಜೀವನ ಸಾಗಿಸುತ್ತಿದ್ದಾರೆ. ನಿಜಲಿಂಗಪ್ಪನವರ ಕ್ಯಾಬಿನೆಟ್‌ನಲ್ಲಿ ಸಾರಿಗೆ ಸಚಿವರಾಗಿದ್ದ ದೇವರಾಜ ಅರಸು, ಬಸ್ ಪ್ರಯಾಣ ದರ ಹೆಚ್ಚು ಮಾಡಿದ್ದರು. ಇದನ್ನು ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟಿಸಿದಾಗ, ಅರಸು ವಿದ್ಯಾರ್ಥಿ ಮುಖಂಡರನ್ನು ಕರೆಸಿ ಮಾತನಾಡಿದ್ದರು. ಆ ವಿದ್ಯಾರ್ಥಿ ಮುಖಂಡ ರಘುಪತಿಯಾಗಿದ್ದರು. ಅಂದಿನಿಂದಲೇ ಅರಸು ಅವರ ಸಂಪರ್ಕಕ್ಕೆ ಬಂದರು.
ಅರಸು ಹಸು ಕಟ್ಟಿದ್ದರು, ಬದುಕಿಗಾಗಿ
ನಿಜಲಿಂಗಪ್ಪನವರ ಸಚಿವ ಸಂಪುಟದಲ್ಲಿ ಸಾರಿಗೆ ಸಚಿವರಾಗಿದ್ದ ದೇವರಾಜ ಅರಸು ಅವರು, ನಿಜಲಿಂಗಪ್ಪ-ಇಂದಿರಾ ಗಾಂಧಿಯವರ ನಡುವೆ ಭಿನ್ನಾಭಿಪ್ರಾಯ ಬಂದು ಕಾಂಗ್ರೆಸ್ ಇಬ್ಭಾಗವಾದಾಗ ಮಂತ್ರಿಗಿರಿಯಿಂದ ಕೆಳಗಿಳಿದರು. ವೀರೇಂದ್ರ ಪಾಟೀಲ್ ಮುಖ್ಯಮಂತ್ರಿಯಾದರು. ಆಗ ದೇವರಾಜ ಅರಸು, ಹೆಂಡತಿ-ಮಕ್ಕಳನ್ನು ಕರೆತಂದು ಮಲ್ಲೇಶ್ವರಂನ 11ನೇ ಕ್ರಾಸ್‌ನಲ್ಲಿ, ಮಾರ್ಗೋಸಾ ರಸ್ತೆಯಲ್ಲಿ ಬಾಡಿಗೆ ಮನೆ ಮಾಡಿದ್ದರು. ಮೈಸೂರು ರಾಜರ ವಂಶಸ್ಥರಾಗಿದ್ದರೂ, ಹುಣಸೂರಿನ ಕಲ್ಲಳ್ಳಿಯಲ್ಲಿ ಜಮೀನು -ಮನೆಯಿದ್ದರೂ, ನಿಶ್ಚಿತ ಆದಾಯವೇ ಇರಲಿಲ್ಲ. ಮಾಜಿ ಮಂತ್ರಿಯಾದರೂ ಬೆಂಗಳೂರಿನಲ್ಲಿ ಮನೆ ಇರಲಿಲ್ಲ, ಖರ್ಚಿಗೆ ಕಾಸಿರಲಿಲ್ಲ. ಆಗ ಅರಸು ವಾಸವಿದ್ದ ಮನೆಯಲ್ಲಿಯೇ ಹಸುಗಳನ್ನು ಕಟ್ಟಿದ್ದರು. ಅರಸು ಹಸು ಕಟ್ಟಿದ್ದು ಶೋಕಿಗಲ್ಲ, ಹಾಲು ಕರೆದು ಜೀವನ ನಡೆಸಲು. ಇದು ತುಂಬಾ ಜನರಿಗೆ ಗೊತ್ತಿಲ್ಲ.
ನನ್ನ ಮನೆಯೂ ಮಲ್ಲೇಶ್ವರಂನಲ್ಲಿತ್ತು. ನನ್ನ ಸ್ನೇಹಿತ ಬಿ.ವಿ.ರೆಡ್ಡಿಯವರ ಐಡಿಯಲ್ ಬುಕ್ ಶಾಪ್, 8ನೆ ಕ್ರಾಸ್‌ನಲ್ಲಿತ್ತು. ನಾವೊಂದಿಷ್ಟು ಸೋಷಲಿಸ್ಟ್ ಮೈಂಡ್‌ಸೆಟ್‌ನ ಸ್ನೇಹಿತರು ಪ್ರತಿದಿನ ಅಲ್ಲಿ ಸೇರುವುದು ರೂಢಿಯಾಗಿತ್ತು. ಅಲ್ಲಿಗೆ ಅರಸು ಕೂಡ ಬರುತ್ತಿದ್ದರು. ಅವರಿಗೆ ಪುಸ್ತಕ ಓದುವ ಹವ್ಯಾಸವಿತ್ತು. ಮೊದಲೇ ನನ್ನ ಪರಿಚಯವಿದ್ದ ಕಾರಣ, ಅವರೊಂದಿಗೆ ಸಮಾಜವಾದ, ರಾಜಕಾರಣ, ದೇಶದ ಆಗು ಹೋಗುಗಳನ್ನೆಲ್ಲ ಚರ್ಚಿಸುತ್ತಿದ್ದೆವು. ಅರಸುಗೆ ಯುವಕರೊಂದಿಗೆ ಬೆರೆತು, ಅವರ ಜಗತ್ತನ್ನು ಜಾಲಾಡುವುದು ತೀರಾ ಆಸಕ್ತಿದಾಯಕ ವಿಷಯವಾಗಿತ್ತು. ಹಾಗಾಗಿಯೇ ನಮ್ಮ ಜೊತೆ ಬೆರೆಯುತ್ತಿದ್ದರು, ಗಂಟೆಗಟ್ಟಲೆ ಮಾತನಾಡುತ್ತಿದ್ದರು.
ಲೋಹಿಯಾ ಸಂಪಾದಿಸುತ್ತಿದ್ದ 'ಮ್ಯಾನ್ ಕೈಂಡ್' ಪತ್ರಿಕೆಯನ್ನು ಅರಸು ನಿಯಮಿತವಾಗಿ ಓದುತ್ತಿದ್ದರು. ಅದು ಎಲ್ಲರಿಗೂ ಎಲ್ಲಾ ಕಡೆ ದೊರಕುವ ಪತ್ರಿಕೆಯಾಗಿರಲಿಲ್ಲ. ಬೌದ್ಧಿಕ ವಲಯದ ಕೆಲವರಷ್ಟೇ ಖಾಯಂ ಆಗಿ ಓದುತ್ತಿದ್ದ ಆ ಪತ್ರಿಕೆಯನ್ನು ಅರಸು ಮಿಸ್ ಮಾಡಿಕೊಳ್ಳದೆ ಓದುತ್ತಿದ್ದರು. ತಪ್ಪಿದರೆ, ಕೇಳಿ ಪಡೆದು ಓದುತ್ತಿದ್ದರು. ಅದರಲ್ಲಿ ಬರುತ್ತಿದ್ದ ಲೇಖನಗಳ ಕುರಿತು ಗಂಭೀರವಾಗಿ ಚರ್ಚಿಸುತ್ತಿದ್ದರು.
ಜನರ 'ಬುದ್ಧಿ'ಯೇ ಜನಸೇವಕ
ಅರಸು ಅವರ ಬಾಲ್ಯ, ಹಳ್ಳಿಯ ಬದುಕು ಕುತೂಹಲಕರವಾಗಿತ್ತು. ಕಲ್ಲಳ್ಳಿಯಲ್ಲಿ ಹತ್ತದಿನೈದು ಎಕರೆ ಜಮೀನಿತ್ತು. ನಗರದಲ್ಲಿ ಓದಿ ಪದವಿ ಪಡೆದ ನಂತರ ಮತ್ತೆ ಹಳ್ಳಿಗೆ ಹೋಗಿ ಹೊಲ ಗದ್ದೆಗಳಲ್ಲಿ ಸಾಮಾನ್ಯ ಕೃಷಿಕನಂತೆ ಕೆಲಸ ಮಾಡಿದ್ದರು. ಇದು ನಗರವಾಸಿಯಾದ ನನ್ನ ಕುತೂಹಲಕ್ಕೆ ಕಾರಣವಾಗಿ, ಅವರನ್ನು ಕೇಳುತ್ತಿದ್ದೆ, ಬಹಳ ಸ್ವಾರಸ್ಯಕರವಾಗಿ ಹೇಳುತ್ತಿದ್ದರು. ಅವರು ಓದಿದ್ದು ಬಿಎಸ್ಸಿ. ಅಪ್ಪಟ ನಾಸ್ತಿಕರು. ದೇವರು, ದೇವಸ್ಥಾನ, ಪೂಜೆ ಪುನಸ್ಕಾರ ಮಾಡಿದವರಲ್ಲ. ಮೈಸೂರು ಮಹಾರಾಜರ ವಂಶಸ್ಥರಾದ್ದರಿಂದ, ಹಳ್ಳಿಗಳಿಗೆ ನ್ಯಾಯ ಪಂಚಾಯ್ತಿ ಮಾಡಲು ಎತ್ತಿನಗಾಡಿಗಳಲ್ಲಿ ಹೋಗುತ್ತಿದ್ದರು. ತೀರ್ಪು ಕೊಡುವ ನ್ಯಾಯಾಧೀಶರನ್ನು ಹಳ್ಳಿಯ ಜನ ಅಪಾರ ಗೌರವದಿಂದ ಕಂಡು 'ಬುದ್ಧಿ' ಎಂದು ಸಂಬೋಧಿಸುತ್ತಿದ್ದರು. ಅವರು ಕೊಟ್ಟ ತೀರ್ಪಿನಂತೆಯೇ ನಡೆಯುತ್ತಿದ್ದರು. ಆದರೆ ಅರಸು ಮಾತ್ರ, ಅದೇ ಪ್ರಜೆಗಳ ಸೇವೆಗಾಗಿ ಪ್ರಜಾಸತ್ತಾತ್ಮಕ ರೀತಿಯಲ್ಲಿ ಆರಿಸಿಬಂದ ಜನಪ್ರತಿನಿಧಿ ಎಂಬುದನ್ನು ತಿಳಿದು ತಣ್ಣಗಿದ್ದರು. ಹಳ್ಳಿಗರ ಜೊತೆ ಮರದ ನೆರಳಲ್ಲಿ ಕೂತು ಬೀಡಿ ಸೇದಿ, ಅವರು ಕೊಟ್ಟ ರೊಟ್ಟಿ ತಿಂದು, ಕಾಫಿ ಕುಡಿದು ಅವರೊಂದಿಗೆ ಬೆರೆತು ಹೋಗುತ್ತಿದ್ದರು.
1967 ರಲ್ಲಿ, ನಿಜಲಿಂಗಪ್ಪನವರು, ಅರಸು ಅವರಿಗೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ತಪ್ಪಿಸಿದರು. ಆಗ ಊರಿನ ಜನ ಬಂದು, ಕಣ್ಣೀರು ಹಾಕುತ್ತಾ, 'ಡೆಲ್ಲಿಗೆ ಹೋಗಿ ಬನ್ನಿ ಬುದ್ಧಿ' ಎಂದು ಗೋಗರೆದರು. ಅರಸು 'ನನ್ನಲ್ಲಿ ಹಣವಿಲ್ಲ, ಟಿಕೆಟ್ ಕೊಟ್ರೆ ಕೊಡಲಿ, ನಾನಂತೂ ಯಾರನ್ನು ಕೇಳಲ್ಲ' ಎಂದು ಕೈ ಚೆಲ್ಲಿದರು. ಊರಿಗೇ ಬುದ್ಧಿ ಹೇಳುವ 'ಬುದ್ಧಿ'ಯಾಗಿದ್ದರೂ, ನಾಡನ್ನು ಆಳುವ ಅರಸರ ವಂಶಸ್ಥರಾಗಿದ್ದರೂ ಹಣವಿರಲಿಲ್ಲ. ಇನ್ನು ಡೆಲ್ಲಿಗೆ ಹೋಗುವುದೆಲ್ಲಿ? ಪರಿಸ್ಥಿತಿಯನ್ನು ಅರಿತ, ಅರಸರನ್ನು ಹತ್ತಿರದಿಂದ ಬಲ್ಲ ಹುಣಸೂರಿನ ಮುಸ್ಲಿಂ ಸಮುದಾಯದ ಪ್ರಭಾವಿ ವ್ಯಕ್ತಿಯೊಬ್ಬರು, ಡೆಲ್ಲಿಗೆ 2 ಸೀಟು ರೈಲ್ವೆ ಟಿಕೆಟ್ ಬುಕ್ ಮಾಡಿಸಿಕೊಂಡು ಬಂದು, ಅರಸರನ್ನು ಜೊತೆಯಲ್ಲಿಯೇ ಕರೆದುಕೊಂಡು ಡೆಲ್ಲಿಗೆ ಹೋದರು. ಅಲ್ಲಿ, ಆ ಸಮಯದಲ್ಲಿ, ಕರ್ನಾಟಕವೆಂದರೆ ನಿಜಲಿಂಗಪ್ಪನವರು, ಅವರ ಮಾತೇ ಫೈನಲ್. ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ 'ಅರಸು ಗೆಲ್ಲಲ್ಲ, ಟಿಕೆಟ್ ಬೇಡ' ಎಂದು ವಿರೋಧ ವ್ಯಕ್ತಪಡಿಸಿದರು. ಆದರೆ ಅರಸು ಅವರ ಸರಳ ಸಜ್ಜನಿಕೆಯ ಬಗ್ಗೆ ಗೊತ್ತಿದ್ದ ಶಾಸ್ತ್ರಿ ಮತ್ತು ನೆಹರೂ, ಟಿಕೆಟ್ ಕೊಡಬೇಕೆಂದು ತಾಕೀತು ಮಾಡಿದರು. ಡೆಲ್ಲಿಯಿಂದ ಟಿಕೆಟ್ ತಂದ ಅರಸು, 1967 ರ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.
ಸಿಂಡಿಕೇಟ್‌ಗೆ ಸಡ್ಡು ಹೊಡೆದ ಅರಸು
ಆ ಸಂದರ್ಭದ ರಾಜಕೀಯ ರಂಗದಲ್ಲಿ ಕರ್ನಾಟಕದ ನಿಜಲಿಂಗಪ್ಪ, ತಮಿಳುನಾಡಿನ ಕಾಮರಾಜ್, ಮಹಾರಾಷ್ಟ್ರದ ಎಸ್.ಆರ್. ಪಾಟೀಲ್, ಪಶ್ಚಿಮ ಬಂಗಾಲದ ಅತುಲ್ಯ ಘೋಷ್, ಉತ್ತರ ಪ್ರದೇಶದ ಗುಪ್ತಾರದು ಪವರ್‌ಫುಲ್ ಗ್ರೂಪ್ ಆಗಿತ್ತು. ರಾಷ್ಟ್ರೀಯ ಮಟ್ಟದ ಪ್ರಭಾವಿ ನಾಯಕರಾಗಿದ್ದ ಇವರು ರಚಿಸಿಕೊಂಡಿದ್ದ ಸಿಂಡಿಕೇಟ್ ಹೇಳಿದವರೇ ಪ್ರಧಾನಿಯಾಗುವ ಪರಿಸ್ಥಿತಿ ಇತ್ತು. ಇಂದಿರಾ ಕೂಡ ಇದೇ ಸಿಂಡಿಕೇಟ್ ಶಿಫಾರಸಿನಿಂದ 1966 ರಲ್ಲಿ ಪ್ರಧಾನಿಯಾಗಿದ್ದರು.
ಮೊದಲಿನಿಂದಲೂ ದೇವರಾಜ ಅರಸು ಕಂಡರೆ ಕರ್ನಾಟಕದ ಮೇಲ್ಜಾತಿ ರಾಜಕೀಯ ನಾಯಕರಿಗೆ ಅಷ್ಟಕ್ಕಷ್ಟೆ. ಅದರಲ್ಲೂ ನಿಜಲಿಂಗಪ್ಪನವರಿಗೆ ಅರಸು ರಾಜಕೀಯ ಬೆಳವಣಿಗೆ ಮೇಲೆ ಕಣ್ಣಿತ್ತು. ಅದಕ್ಕೆ ಪೂರಕವಾಗಿ, ಅರಸು ಇಂದಿರಾ ಗುಂಪಿನಲ್ಲಿ ಗುರುತಿಸಿಕೊಂಡಿದ್ದು, 1969ರ ಬೆಂಗಳೂರು ಕಾಂಗ್ರೆಸ್ ಅಧಿವೇಶನದಲ್ಲಿ ಇಂದಿರಾ ಗಾಂಧಿ ಮಾಡಿದ ಭಾಷಣವನ್ನು ಸಮರ್ಥಿಸಿಕೊಂಡು ಹೇಳಿಕೆ ನೀಡಿದ್ದು ಕಾಂಗ್ರೆಸ್ ಪಕ್ಷದೊಳಗಿನ ಹಿರಿಯರಿಗೆ ಇರಿಸು ಮುರಿಸನ್ನುಂಟು ಮಾಡಿತ್ತು, ಭಿನ್ನಾಭಿಪ್ರಾಯ ಉಲ್ಬಣಗೊಳ್ಳಲಿಕ್ಕೆ ಕಾರಣವಾಗಿತ್ತು. ನಾಯಕರ ನಡುವಿನ ಇಂತಹ ಮುಸುಕಿನ ಗುದ್ದಾಟದ ಸಮಯದಲ್ಲಿ, ರಾಷ್ಟ್ರಪತಿ ಆಯ್ಕೆಗೆ ನಡೆದ ಚುನಾವಣೆಯಲ್ಲಿ, ಪ್ರಧಾನಿ ಇಂದಿರಾ ಗಾಂಧಿಯವರು ನೀಲಂ ಸಂಜೀವರೆಡ್ಡಿಯವರ ಹೆಸರನ್ನು ಸೂಚಿಸಿದರು. ಆದರೆ ಉಪರಾಷ್ಟ್ರಪತಿಯಾಗಿದ್ದ ವಿ.ವಿ.ಗಿರಿ, ಸರಕಾರದ ವಿರುದ್ಧ ಸೆಟೆದುನಿಂತು, ಸ್ಪರ್ಧೆಗಿಳಿದರು. ಇಬ್ಬರನ್ನೂ ಬಿಡದ ಸಂದಿಗ್ಧಕ್ಕೆ ಸಿಲುಕಿದ ಇಂದಿರಾಗಾಂಧಿಯವರು, ಆತ್ಮಸಾಕ್ಷಿ ಮತಕ್ಕೆ ಕರೆ ಕೊಟ್ಟರು. ಇದು ಸಿಂಡಿಕೇಟ್ ಗುಂಪಿನವರಿಗೆ ತಪ್ಪು ರಾಜಕೀಯ ನಡೆಯಾಗಿ ಕಂಡು, ಇಂದಿರಾ ಅವರನ್ನು ಪಕ್ಷದಿಂದ ಅಮಾನತು ಮಾಡಿದರು.
ಕಾಂಗ್ರೆಸ್ ಇಬ್ಭಾಗ
ಪಕ್ಷದಿಂದ ಇಂದಿರಾರನ್ನು ಅಮಾನತು ಮಾಡಿದ್ದನ್ನು ವಿರೋಧಿಸಿ, ನಾನು ನನ್ನ ವಿದ್ಯಾರ್ಥಿ ಸಂಘಟನೆಯಿಂದ ಬೆಂಗಳೂರಿನಲ್ಲೊಂದು ಬೃಹತ್ ಮೆರವಣಿಗೆ ಆಯೋಜಿಸಿದೆ. ಅದನ್ನು ಅರಸು ಬೆಂಬಲಿಸಿದರು. ಇಂದಿರಾ ಅವರನ್ನು ಅಮಾನತು ಮಾಡಿದ ಮೇಲೆ, ಕರ್ನಾಟಕ ಕಾಂಗ್ರೆಸ್‌ನಲ್ಲಿ ನಿಜಲಿಂಗಪ್ಪನವರನ್ನು ಒಳಗೊಳಗೇ ವಿರೋಧಿಸುತ್ತಿದ್ದವರು ಬಿ.ಡಿ.ಜತ್ತಿಯವರ ನಾಯಕತ್ವದಲ್ಲಿ ಒಂದುಗೂಡಿದರು. ಅರಸು ಜತ್ತಿಯವರ ಗುಂಪಿನಲ್ಲಿ ಗುರುತಿಸಿಕೊಂಡರು. ಗುರುತಿಸಿಕೊಂಡಿದ್ದಷ್ಟೇ ಅಲ್ಲ, ಆಡಳಿತ ಸಿಂಡಿಕೇಟ್ ಕಾಂಗ್ರೆಸ್‌ನ 9 ಶಾಸಕರನ್ನು ಸೆಳೆದು, ಗುಪ್ತ ಸಭೆ ಕರೆದು, ಆತ್ಮಸಾಕ್ಷಿ ಓಟು ಮಾಡುವಂತೆ ಮನವೊಲಿಸಿದರು.
ಗುಪ್ತ ಸಭೆಗೆ ಹಾಜರಾದವರು ಬಹಿರಂಗವಾಗಿಯೇ ಆತ್ಮಸಾಕ್ಷಿ ಓಟು ಮಾಡುವುದಾಗಿ ಹೇಳಿಕೆ ನೀಡಿ, ನಿಜಲಿಂಗಪ್ಪನವರ ಸಿಂಡಿಕೇಟ್‌ಗೆ, ವೀರೇಂದ್ರ ಪಾಟೀಲರ ಸರಕಾರಕ್ಕೆ ಸಡ್ಡು ಹೊಡೆದರು. ಬಲಾಢ್ಯ ನಿಜಲಿಂಗಪ್ಪನವರು ಆ 9 ಶಾಸಕರನ್ನು (ದಯಾನಂದಸಾಗರ್, ವೀರಪ್ಪಗೌಡ, ಮಲ್ಲಿಕಾರ್ಜುನಸ್ವಾಮಿ, ಪ್ರಭಾಕರ್, ನಾಗರತ್ನಮ್ಮ, ಕೊಂಡಜ್ಜಿ ಬಸಪ್ಪ, ಚೆನ್ನಬಸಪ್ಪ, ಬದರಿ ನಾರಾಯಣ.. ಇನ್ನೊಬ್ಬರ ಹೆಸರು ಮರೆತುಹೋಗಿದೆ) ಪಕ್ಷದಿಂದ ಅಮಾನತು ಮಾಡಿದರು. ಇದು ಕಾಂಗ್ರೆಸ್ ಇಬ್ಭಾಗಕ್ಕೆ ನಾಂದಿಯಾಡಿತು. ಮುಂದುವರಿದು, 1969ರಲ್ಲಿ ಕಾಂಗ್ರೆಸ್ ಇಬ್ಭಾಗವಾಗಿ, ಸಿಂಡಿಕೇಟ್-ಇಂಡಿಕೇಟ್ ಎಂದು ಎರಡು ಭಾಗವಾಯಿತು. ಹಾಗೆಯೇ ಅರಸು ಅವರ ಈ ರಾಜಕೀಯ ನಡೆ ಇಂದಿರಾ ಗಾಂಧಿಯವರ ಮೆಚ್ಚುಗೆಗೆ ಪಾತ್ರವಾಯಿತು. ಕರ್ನಾಟಕದಲ್ಲಿ ನಿಜಲಿಂಗಪ್ಪನವರಿಗೆ ಸಮರ್ಥ ಎದುರಾಳಿಯಾಗಿ ಅರಸು ಕಾಣತೊಡಗಿದರು.
ನಾಯಕನಾಗಿ ಅರಳಿದ ಅರಸು
ಏತನ್ಮಧ್ಯೆ ಬಿ.ಡಿ. ಜತ್ತಿ ರಾಜ್ಯಪಾಲರಾಗಿ ಕರ್ನಾಟಕದಿಂದ ನಿರ್ಗಮಿಸಿದಾಗ, ಆ ಗುಂಪಿಗೆ ನಾಯಕರಿಲ್ಲದಂತಾಯಿತು. ದೇವರಾಜ ಅರಸು ನಾಯಕರಲ್ಲ, ಆದರೂ ಅವರ ಸಂದರ್ಭೋಚಿತ ರಾಜಕೀಯ ನಡೆ, ನಿರ್ಧಾರ, ಚತುರತೆ ಆ ಸ್ಥಾನಕ್ಕೆ ಸಮರ್ಥ ಎನ್ನುವುದನ್ನು ಸಾಬೀತುಪಡಿಸಿದವು. ಅರಸು-ಇಂದಿರಾರ ನಾಯಕತ್ವ ಒಪ್ಪಿ ಈ ಗುಂಪಿಗೆ ಸೋಷಲಿಸ್ಟ್ ಪಾರ್ಟಿಯಿಂದ ಎಸ್.ಎಂ.ಕೃಷ್ಣ, ಲಕ್ಕಪ್ಪ; ಸ್ವತಂತ್ರ ಪಾರ್ಟಿಯಿಂದ ಶಿವಪ್ಪ, ಎಚ್.ಎನ್.ನಂಜೇಗೌಡ; ಲೋಹಿಯಾ ಬೆಂಬಲಿಗರಾದ ಜೆ.ಎಚ್.ಪಟೇಲ್; ಕರ್ನಾಟಕ ಜನತಾ ಪಕ್ಷದ ಕೆ.ಎಚ್.ಪಾಟೀಲ್, ಸಿದ್ಧವೀರಪ್ಪರಂತಹ ಚುನಾಯಿತ ಜನಪ್ರತಿನಿಧಿಗಳು ಬಂದು ಸೇರಿದರು.
ವಿದ್ಯಾರ್ಥಿ ಸಂಘಟನೆ, ಯೂತ್ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬೇರೆ ಬೇರೆ ಪಕ್ಷದ ಪ್ರತಿನಿಧಿಗಳು ಇಂದಿರಾ ಕಾಂಗ್ರೆಸ್ಸನ್ನು ಬೆಂಬಲಿಸಿದ್ದು, ಇಂದಿರಾ ಗಾಂಧಿಯವರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿತು. ಅದರ ಫಲವಾಗಿ, ದೇವರಾಜ ಅರಸು ಅವರನ್ನು ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ(ಕನ್ವೀನರ್)ರನ್ನಾಗಿ, ಆರ್. ಗುಂಡೂರಾವ್ ಅವರನ್ನು ಯೂತ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ, ನನ್ನನ್ನು ಆಲ್ ಇಂಡಿಯಾ ಸ್ಟೂಡೆಂಟ್ಸ್ ಕಾಂಗ್ರೆಸ್‌ನ ಅಧ್ಯಕ್ಷನನ್ನಾಗಿ- ಮೂವರನ್ನು ಒಂದೇ ದಿನ ನೇಮಕ ಮಾಡಿ ಆದೇಶ ಹೊರಡಿಸಿದರು. ಈ ಗುಂಪಿನ ಶಾಸಕರೆಲ್ಲ ಸೇರಿ, ವಿಧಾನಸಭೆಯ ವಿರೋಧಪಕ್ಷದ ನಾಯಕರನ್ನಾಗಿ ಸಿದ್ಧವೀರಪ್ಪನವರನ್ನು ಆಯ್ಕೆ ಮಾಡಿಕೊಂಡರು. ಅರಸು ಪಕ್ಷದ ಚುಕ್ಕಾಣಿ ಹಿಡಿದ ನಂತರ, 1970ರಲ್ಲಿ, ತಮ್ಮ ನಾಯಕತ್ವಕ್ಕೆ ಸವಾಲಾಗಬಲ್ಲ ಮಹತ್ವದ ಮೂರು ಉಪಚುನಾವಣೆಗಳು ಎದುರಾದವು. ಹುನಗುಂದ, ಹೊಸಪೇಟೆ ಮತ್ತು ಶಿವಾಜಿನಗರ. ಅತ್ತ, ವಿರೋಧಿಗಳ ಗುಂಪಿನಲ್ಲಿ ಘಟಾನುಘಟಿ ನಾಯಕರಾದ ನಿಜಲಿಂಗಪ್ಪ, ವೀರೇಂದ್ರ ಪಾಟೀಲ್, ಹೆಗಡೆ ಮತ್ತು ದೇವೇಗೌಡರು. ಇತ್ತ, ಅರಸು ಮತ್ತು ಆಗತಾನೆ ಬಂದು ಸೇರಿದ ವಿವಿಧ ಪಕ್ಷಗಳ ಶಾಸಕರು. ಇಂದಿರಾ ಕಾಂಗ್ರೆಸ್‌ಗೆ ಅದು ನಿಜಕ್ಕೂ ಪ್ರತಿಷ್ಠೆಯ ಪ್ರಶ್ನೆ. ಅಂತಹ ಸಮಯದಲ್ಲಿ ಅರಸು ಮಾಡಿದ್ದೇನು ಗೊತ್ತೆ? ಶಿವಾಜಿನಗರ ಕ್ಷೇತ್ರಕ್ಕೆ ಹಮೀದ್ ಷಾ ಎಂಬ ಬಡವರಲ್ಲಿ ಬಡವನನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದು. ಈತ ಶಿವಾಜಿನಗರದ ಕೋಲ್ಸ್ ಪಾರ್ಕಿನಲ್ಲಿ ಕಡಲೇಕಾಯಿ ಮಾರಿಕೊಂಡು ಜೀವನ ನಡೆಸುತ್ತಿದ್ದು, ರಾಜಕಾರಣ ಎಂದರೆ ಏನೆಂಬುದೇ ಗೊತ್ತಿಲ್ಲದ ಅಮಾಯಕ. ಪ್ರತಿಪಕ್ಷದವರು ನಕ್ಕರು. ಹಮೀದ್ ಷಾ 10 ಸಾವಿರ ಲೀಡ್‌ನಲ್ಲಿ ಗೆದ್ದಾಗ ಬಡವರು, ಶೋಷಿತರು, ಅಸಹಾಯಕರು ಆತ್ಮವಿಶ್ವಾಸದ ನಗೆ ನಕ್ಕರು. ಜೊತೆಗೆ 3 ಉಪಚುನಾವಣೆಗಳನ್ನು ಗೆಲ್ಲುವ ಮೂಲಕ ಅರಸು ನಾಯಕರಾಗಿ ಗೆದ್ದರು.
ಸಾಮಾಜಿಕ ನ್ಯಾಯ ಚಾಲ್ತಿಗೆ
ಉಪ ಚುನಾವಣೆಯ ಗೆಲುವು ಅರಸು ಗುಂಪಿನಲ್ಲಿ ಹೊಸ ಉತ್ಸಾಹಕ್ಕೆ ಕಾರಣವಾಯಿತು. ಈ ವಿಜಯದ ಓಟಕ್ಕೆ ಮತ್ತೊಂದು ಅವಕಾಶ- ಬೆಂಗಳೂರು ನಗರಪಾಲಿಕೆ ಚುನಾವಣೆ. ಉಪಚುನಾವಣೆಯ ಗೆಲುವನ್ನು ಆಕಸ್ಮಿಕವೆಂದೇ ಪರಿಗಣಿಸಿದ್ದ ವೀರೇಂದ್ರ ಪಾಟೀಲರ ಆಡಳಿತ ಪಕ್ಷ, ನಗರಪಾಲಿಕೆಯಲ್ಲಿ ನಮ್ಮದೇ ಗೆಲುವು ಎಂಬ ಆತ್ಮವಿಶ್ವಾಸದಲ್ಲಿತ್ತು. ಅರಸರಿಗೆ ಅದು ಹೊಸದಾಗಿದ್ದರೂ ಹಿಂಜರಿಯಲಿಲ್ಲ, ಜೊತೆಗೆ ತಮ್ಮ ಸಾಮಾಜಿಕ ನ್ಯಾಯವನ್ನು ಜಾರಿಗೆ ತರುವುದನ್ನೂ ಮರೆಯಲಿಲ್ಲ. ನಗರಪಾಲಿಕೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಅರಸು ಅನುಭವಿ ರಾಜಕಾರಣಿಯಂತೆ, ದೂರದೃಷ್ಟಿಯುಳ್ಳ ಮುತ್ಸದ್ದಿಯಂತೆ ವರ್ತಿಸಿದರು. ಯಾರ ವಿರೋಧಕ್ಕೂ ಕಿವಿಗೊಡದೆ, ಬಡವರನ್ನು, ಹಿಂದುಳಿದವರನ್ನು, ನಿರ್ಲಕ್ಷಕ್ಕೊಳಪಟ್ಟ ಜಾತಿಗಳ ಜನರನ್ನು ಕಣಕ್ಕಿಳಿಸಿದರು. ಕಾಲೇಜು ವಿದ್ಯಾರ್ಥಿಯಾಗಿದ್ದ ರಮೇಶ್‌ಕುಮಾರ್ ದಿನ ಬೆಳಗಾಗುವುದರೊಳಗೆ ಅಭ್ಯರ್ಥಿಯಾಗಿ, ರಾಜಕಾರಣಿಯಾಗಿ ರೂಪುಗೊಂಡಿದ್ದರು. ಇಂತಹ ಉದಾಹರಣೆಗಳು ಬೇಕಾದಷ್ಟು. ಇದು ಇವತ್ತು ಇಲ್ಲಿ ಕೂತು ಮಾತನಾಡಿದಷ್ಟು ಸುಲಭವಾಗಿರಲಿಲ್ಲ. ಆದರೂ ಅರಸು ಅವರಿಗಿದ್ದ ಇಚ್ಛಾಶಕ್ತಿ, ಇವತ್ತಿನವರೆಗೂ ಯಾರಲ್ಲೂ ಕಾಣಲಾಗಿಲ್ಲ. ದೇವರಾಜ ಅರಸರ ಸಾಮಾಜಿಕ ನ್ಯಾಯವನ್ನು ಬೆಂಬಲಿಸಿದ ನಗರಿಗರು, ಇಂದಿರಾ ಕಾಂಗ್ರೆಸ್ ಪಕ್ಷವನ್ನು 64 ಸ್ಥಾನಗಳಲ್ಲಿ ಗೆಲ್ಲಿಸಿ, ಆಡಳಿತ ಪಕ್ಷವನ್ನು 3 ಸ್ಥಾನಗಳಿಗೆ ಇಳಿಸಿ, ವೀರೇಂದ್ರ ಪಾಟೀಲರ ಸರಕಾರಕ್ಕೆ ಭಾರೀ ಮುಖಭಂಗವನ್ನುಂಟು ಮಾಡಿದರು. ಉಪಚುನಾವಣೆ ಮತ್ತು ನಗರಪಾಲಿಕೆ ಚುನಾವಣೆಗಳ ಗೆಲುವು ಅರಸು ಅವರ ಗುಂಪಿನ ಬಲ ಹೆಚ್ಚಿಸಿತು. ಪ್ರಬಲ ಪಕ್ಷವಾಯಿತು. ಬೇರೆ ಪಕ್ಷಗಳ ನಾಯಕರು ಇತ್ತ ನೋಡುವಂತೆ ಮಾಡಿತು. ಇದಾದ ಕೆಲವೇ ತಿಂಗಳಿಗೆ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ, ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ, ದೇಶದ ಜನರ ಮೂಡ್ ತಮ್ಮ ಕಾಂಗ್ರೆಸ್ ಪರವಾಗಿದೆ ಎಂದು ತೀರ್ಮಾನಿಸಿ, ಲೋಕಸಭೆಯನ್ನು ವಿಸರ್ಜಿಸಿ ಚುನಾವಣೆಗೆ ಅಣಿಯಾಗತೊಡಗಿದರು. ಇತ್ತ ಕರ್ನಾಟಕದಲ್ಲಿ, ಇಂದಿರಾ ಕಾಂಗ್ರೆಸ್‌ನಲ್ಲಿ ಕೆ.ಎಚ್.ಪಾಟೀಲ್, ಸಿದ್ದವೀರಪ್ಪ, ತುಳಸಿ ದಾಸಪ್ಪ, ಕೆಂಗಲ್ ಹನುಮಂತಯ್ಯ, ಕೊಂಡಜ್ಜಿ ಬಸಪ್ಪರಂತಹ ನಾಯಕರಿದ್ದರೂ, ದೇವರಾಜ ಅರಸು ಕೇಂದ್ರಬಿಂದುವಾಗಿದ್ದರು. ಎರಡು ಚುನಾವಣೆಗಳನ್ನು ಸಮರ್ಥವಾಗಿ ನಿಭಾಯಿಸಿ, ಘಟಾನುಘಟಿ ನಾಯಕರು ಮತ್ತು ಬಹುಸಂಖ್ಯಾತ ಜಾತಿಗೆ ಸೇರಿದ ನಿಜಲಿಂಗಪ್ಪ-ವೀರೇಂದ್ರ ಪಾಟೀಲರನ್ನೇ ಮಣಿಸಿದ್ದರು. ಗೆದ್ದ ಅರಸು, ಮತ್ತಷ್ಟು ಆತ್ಮವಿಶ್ವಾಸದಿಂದ ತಮ್ಮ ಸಾಮಾಜಿಕ ನ್ಯಾಯವನ್ನು ಚಾಲ್ತಿಗೆ ತರಲು ಮುಂದಾದರು. ಆದರೆ ಅಷ್ಟರಲ್ಲಾಗಲೇ, ಇಂದಿರಾ ಕಾಂಗ್ರೆಸ್‌ನಲ್ಲಿ, ಅರಸು ವಿರುದ್ಧವೇ ಸಣ್ಣ ಮಟ್ಟದ ಬಂಡಾಯ, ವಿರೋಧ, ಅಸಹನೆ ಶುರುವಾಗಿತ್ತು. ಅದು ಇನ್ನಷ್ಟು ನಿಚ್ಚಳವಾಗಿ ಲೋಕಸಭಾ ಚುನಾವಣಾ ಅಭ್ಯರ್ಥಿಗಳ ಆಯ್ಕೆಯಲ್ಲಿ ಕಾಣತೊಡಗಿತ್ತು. (ಮುಂದುವರಿಯುವುದು)