ಕೇಂದ್ರ ಸರ್ಕಾರದಿಂದ ತಿಪ್ಪರಲಾಗ: ಕೊಹಿನೂರ್ ವಜ್ರ ತರಲು ಸರ್ವ ಪ್ರಯತ್ನ

ಹೊಸದಿಲ್ಲಿ: ಪರಸ್ಪರ ಸಹಮತಿಯಿಂದ ಅಮೂಲ್ಯ ಕೊಹಿನೂರ್ ವಜ್ರವನ್ನು ಭಾರತಕ್ಕೆ ವಾಪಾಸು ತರಲು ಸರ್ವ ಪ್ರಯತ್ನ ಮಾಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಈ ಬಗ್ಗೆ ಸುಪ್ರೀಂಕೋರ್ಟ್‌ಗೆ ಯಾವುದೇ ನಿರ್ಧಾರವನ್ನು ತಿಳಿಸಿಲ್ಲ. ಈ ವಿಷಯವನ್ನು ತಪ್ಪಾಗಿ ಮಾಧ್ಯಮಗಳಲ್ಲಿ ಅರ್ಥೈಸಲಾಗಿದೆ ಎಂದು ಸ್ಪಷ್ಟಪಡಿಸಿದೆ.
ಬ್ರಿಟಿಷ್ ರಾಣಿಯ ಕಿರೀಟದಲ್ಲಿ ಕಂಗೊಳಿಸುವ 106 ಕ್ಯಾರೆಟ್‌ನ ಅಮೂಲ್ಯ ಕೊಹಿನೂರು ವಜ್ರವನ್ನು ವಾಪಾಸು ಮಾಡುವಂತೆ ಬ್ರಿಟನ್‌ಗೆ ಮನವಿ ಮಾಡುವುದಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಅಫಿಡವಿಟ್ ನೀಡಿದ್ದಾಗಿ ಸೋಮವಾರ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. "ಇದನ್ನು ರಂಜಿತ್ ಸಿಂಗ್ ಬ್ರಿಟಿಷರಿಗೆ ಸ್ವಇಚ್ಛೆಯಿಂದ ನೀಡಿದ್ದರು. ಬ್ರಿಟಿಷ್ ಆಯೋಗ ಸಿಕ್ಖ್ ಯುದ್ಧದ ಸಂದರ್ಭದಲ್ಲಿ ಮಾಡಿದ ಸಹಾಯಕ್ಕಾಗಿ ಇದನ್ನು ನಿಡಲಾಗಿತ್ತು. ಇದು ಕದ್ದ ವಸ್ತುವಲ್ಲ" ಎಂದು ಅಫಿಡವಿತ್‌ನಲ್ಲಿ ವಿವರಿಸಿದೆ ಎಂದು ವರದಿಯಾಗಿತ್ತು.
ಕೊಹಿನೂರು ವಜ್ರವನ್ನು ವಾಪಾಸು ಮಾಡುವಂತೆ ಕೋರಲು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಬೇಕು ಎಂದು ಹಕ್ಕುಗಳ ಸಂಘಟನೆಯೊಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದೆ.
ಆದರೆ ಸುಪ್ರೀಂಕೋರ್ಟ್ ಇದನ್ನು ಇನ್ನೂ ವಿಚಾರಣೆಗೆ ಸ್ವೀಕರಿಸಿಲ್ಲ ಎಂದು ಸರ್ಕಾರ ಮಂಗಳವಾರ ಪ್ರಕಟಿಸಿದೆ. ಸರ್ಕಾರದ ಅಭಿಪ್ರಾಯವನ್ನು ಸಲ್ಲಿಸುವಂತೆ ಸಾಲಿಸಿಟರ್ ಜನರಲ್ ಅವರಿಗೆ ಕೋರ್ಟ್ ಸೂಚಿಸಿದೆ. ಈ ವಜ್ರದ ಇತಿಹಾಸವನ್ನು ಅವರು ಕೋರ್ಟ್‌ಗೆ ವಿವರಿಸಿದ್ದಾರೆ. ಈ ಬಗ್ಗೆ ಭಾರತದ ಪ್ರಾಚ್ಯಶಾಸ್ತ್ರ ಇಲಾಖೆಯಲ್ಲಿರುವ ದಾಖಲೆಗಳನ್ನು ಪರಿಶೀಲಿಸಿ, ಹೇಳಿಕೆ ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದೆ.





