ಜೈಲಿನಲ್ಲಿ ನಿಗೂಢವಾಗಿ ಮೃತಪಟ್ಟ ಕಿರ್ಪಾಲ್ ಸಿಂಗ್ ಅಂಗಾಂಗಳನ್ನು ಕದ್ದ ಪಾಕ್... !

ಅಮೃತಸರ, ಎ.20: ಪಾಕಿಸ್ತಾನದ ಕೋಟ್ ಲಖಪತ್ ಜೈಲಿನಲ್ಲಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ ಭಾರತದ ಕಿರ್ಪಾಲ್ ಸಿಂಗ್ ಅವರ ಮೃತದೇಹವನ್ನು ಮಂಗಳವಾರ ಭಾರತಕ್ಕೆ ಹಸ್ತಾಂತರಿಸಲಾಗಿದ್ದು, ಮೃತದೇಹದಿಂದ ಹೃದಯ , ಹೊಟ್ಟೆಯ ಭಾಗವನ್ನು ಕತ್ತರಿಸಿ ತೆಗೆಯಲಾಗಿದೆ.
ಅಮೃತಸರ ಮೆಡಿಕಲ್ ಕಾಲೇಜಿನಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದಾಗ ಈ ವಿಚಾರ ಬೆಳಕಿಗೆ ಬಂದಿದ್ದು, ದೇಹದ ಒಳಗೆ ಅಥವಾ ಹೊರಗೆ ಯಾವುದೇ ಗಾಯಗಳ ಗುರುತುಗಳು ಪತ್ತೆಯಾಗಿಲ್ಲ ಹೃದಯ ಮತ್ತು ಹೊಟ್ಟೆಯ ಭಾಗ ದೇಹದಲ್ಲಿ ಇಲ್ಲ. ಸಾವಿನ ಕಾರಣ ಪತ್ತೆ ಹಚ್ಚಲು ಕಿಡ್ನಿ ಮತ್ತು ಲಿವರ್‌ನ್ನು ತೆಗೆದು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಅಮೃತಸರ ಸರಕಾರಿ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎಸ್. ಬಾಲ್ ತಿಳಿಸಿದ್ದಾರೆ.
ಕಿರ್ಪಾಲ್ ಸಿಂಗ್ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಪಾಕಿಸ್ತಾನ ಹೇಳುತ್ತಿದ್ದರೂ, ಅವರನ್ನು ಜೈಲಿನಲ್ಲಿ ದೌರ್ಜನ್ಯ ನಡೆಸಿ ಸಾಯಿಸಲಾಗಿದೆ ಎಂದು ಕಿರ್ಪಾಲ್ ಸಿಂಗ್ ಅವರ ಕುಟುಂಬ ಆರೋಪಿಸಿದೆ.
1992ರಲ್ಲಿ ವಾಘಾ ಗಡಿಯ ಮೂಲಕ ಪಾಕಿಸ್ತಾನ ಪ್ರವೇಶ ಮಾಡಿದ ಗುರುದಾಸ್ ಪುರದ ಕಿರ್ಪಾಲ್ ಸಿಂಗ್ ಅವರನ್ನು ಗೂಢಚರ್ಯೆ ಆರೋಪದಲ್ಲಿ ಪಾಕಿಸ್ತಾನದ ಭದ್ರತಾ ಪಡೆ ಬಂಧಿಸಿತ್ತು. ಪಾಕಿಸ್ತಾನ ಪಂಜಾಬ್ ಪ್ರಾಂತ್ಯದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿರ್ಪಾಲ್ ಸಿಂಗ್ ವಿರುದ್ಧ ಆರೋಪಿ ಹೊರಿಸಿ ಅವರಿಗೆ ಮರಣದಂಡನೆ ವಿಧಿಸಲಾಗಿತ್ತು. ಕಳೆದ 25 ವರ್ಷಗಳಿಂದ ಜೈಲಿನಲ್ಲಿದ್ದ ಕಿರ್ಪಾಲ್ ಸಿಂಗ್ ಅವರು ಕಳೆದ ಸೋಮವಾರ ನಿಗೂಡವಾಗಿ ಮೃತಪಟ್ಟಿದ್ದರು.





