ಗುಜರಾತ್ : ಬಡವರ ಅನ್ನ ತಿಂದು ಕೊಬ್ಬಿರುವ ಸರಕಾರಿ ಉದ್ಯೋಗಿಳು!
ಬಿಪಿಎಲ್, ಅಂತ್ಯೊದಯ ಪಟ್ಟಿಯಿಂದ ಬಡವರು ಔಟ್

ಗಾಂಧಿ ನಗರ: ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯನ್ನು ಜಾರಿಗೊಳಿಸಲು ಗುಜರಾತ್ ಸರಕಾರ ವಿಳಂಬವಾಗಿ ಎಪ್ರಿಲ್ 1ರಿಂದ ಜಾರಿಗೊಳಿಸಲು ನಿರ್ಧರಿಸಿರುವುದು ಒಂದು ಅಹಿತಕರ ಸತ್ಯವನ್ನು ಹೊರಗೆಡಹಿದೆ.
ಖಾಯಂ ಸರಕಾರಿ ಉದ್ಯೋಗ, ಕಾರುಗಳು, ಐದು ಹಾಗೂ ಅದಕ್ಕಿಂತ ಹೆಚ್ಚು ಎಕರೆ ಭೂಮಿ ಹೊಂದಿರುವವರು, ತಿಂಗಳಿಗೆ ರೂ.10,000 ಸಂಬಳ ಪಡೆಯುವವರು ಹಾಗೂ ಆದಾಯ ತೆರಿಗೆ ಪಾವತಿಸುವವರುಸರಕಾರ ಬಡವರಿಗೆಂದು ಪ್ರತಿ ಕೆ.ಜಿ.ಗೆ ರೂ.2ರಂತೆ ಕೊಡಮಾಡುವ ಅಕ್ಕಿ ಹಾಗೂ ಗೋಧಿ ಹಾಗೂ ಸಬ್ಸಿಡಿ ದರದ ಸಕ್ಕರೆ ಹಾಗೂ ಸೀಮೆಎಣ್ಣೆಯನ್ನು ಪಡೆಯುತ್ತಿರುವುದಾಗಿ ತಿಳಿದು ಬಂದಿದೆ.
ನಾಗರಿಕ ಪೂರೈಕೆಗಳ ಇಲಾಖೆಯು ರಾಜ್ಯದ ಸುಮಾರು 26 ಲಕ್ಷ ಬಿಪಿಎಲ್ ಕಾರ್ಡುದಾರರ ಬಗ್ಗೆ ಪರಿಶೀಲನೆ ನಡೆಸಿದಾಗಸುಮಾರು 1,58,333 ಅನರ್ಹ ಫಲಾನುಭವಿಗಳು ಈ ಸೌಲಭ್ಯವನ್ನು ಪಡೆಯುತ್ತಿರುವುದಾಗಿ ತಿಳಿದು ಬಂತು. ರಾಜ್ಯದಲ್ಲಿ ಮಾ ಅನ್ನಪೂರ್ಣ ಯೋಜನೆಯೆಂದು ಜಾರಿಗೊಳ್ಳುತ್ತಿರುವ ಆಹಾರ ಭದ್ರತಾ ಕಾಯಿದೆ ಈ ಸೌಲಭ್ಯ ಪಡೆಯಲು ಸೂಚಿಸಿರುವ ಅರ್ಹತೆಗಳು ಈ ಮಂದಿಗಿಲ್ಲವೆಂದು ತಿಳಿದು ಬಂದಿದೆ.
ಇನ್ನೂ ಅಘಾತಕಾರಿ ಅಂಶವೆಂದರೆ ಈ ಅನರ್ಹ ಬಿಪಿಎಲ್ ಕಾರ್ಡುದಾರರಲ್ಲಿ ಸುಮಾರು 23,550 ಮಂದಿ ಖಾಯಂ ಸರಕಾರಿ ಉದ್ಯೋಗಿಗಳಾಗಿದ್ದಾರೆ.
‘‘ಈ ಅನರ್ಹ 1.58 ಲಕ್ಷ ಫಲಾನುಭವಿಗಳನ್ನು ಬಿಪಿಎಲ್ ಪಟ್ಟಿಯಿಂದ ಹೊರಗಿಟ್ಟಲ್ಲಿ ಸರಕಾರ ವಾರ್ಷಿಕ 116 ಕೋಟಿ ರೂ. ಉಳಿತಾಯ ಮಾಡಬಲ್ಲುದು. ಅವರನ್ನು ಪಿಡಿಎಸ್ ಮೂಲಕ ಸಕ್ಕರೆ ಹಗೂ ಸೀಮೆಎಣ್ಣೆ ಪಡೆಯದಂತೆ ತಡೆದರೆ ಇನ್ನೂ 20 ಕೋಟಿ ರೂ. ಹಾಗೂ 38 ಕೋಟಿ ರೂ. ಸಬ್ಸಿಡಿ ಉಳಿತಾಯ ಮಾಡಿದಂತಾಗುವುದು,’’ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.





