ಕೇರಳದಲ್ಲಿ ಐಕ್ಯರಂಗ ಮತ್ತೆ ಅಧಿಕಾರಕ್ಕೆ: ಚೆರ್ಕಳಂ ಅಬ್ದುಲ್ಲ

ಮಂಜೇಶ್ವರ, ಎ.20: ಕಾಸರಗೋಡು ಅಭಿವೃದ್ದಿಗೆ ಹೊಸ ಭಾಷ್ಯ ಬರೆದ ಐಕ್ಯರಂಗ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೇರಲಿದೆ. ಕಳೆದ ಬಾರಿ ಚುನಾವಣೆಯಲ್ಲಿ ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿ ಗೆದ್ದ ಐಕ್ಯರಂಗ ಈ ಬಾರಿ ಐದು ಕ್ಷೇತ್ರಗಳನ್ನೂ ತನ್ನದಾಗಿಸಿಕೊಳ್ಳಲಿದೆ ಎಂದು ಮಾಜಿ ಸಚಿವ, ಮುಸ್ಲಿಂ ಲೀಗ್‌ನ ಹಿರಿಯ ನೇತಾರ ಚೆರ್ಕಳಂ ಅಬ್ದುಲ್ಲಾ ಹೇಳಿದ್ದಾರೆ.
ಉಪ್ಪಳ ಮರಿಕೆ ಹಾಲ್‌ನಲ್ಲಿ ಮಂಗಳವಾರ ಸಂಜೆ ನಡೆದ ಐಕ್ಯರಂಗ ಸಮಾವೇಶದಲ್ಲಿ ಅವರು ಮಾತನಾಡುತ್ತಿದ್ದರು.
ಇತ್ತೀಚೆಗೆ ನಡೆದ ಸ್ಥಳೀಯ ಚುನಾವಣೆಯಲ್ಲಿ ಜಿಲ್ಲಾ ಪಂಚಾಯತ್ ಐಕ್ಯರಂಗದ ಪಾಲಾಗಿದೆ. ಅರೇರೀತಿ ಪಕ್ಷದ ಎಲ್ಲ ಕಾರ್ಯಕರ್ತರು ಅವಿರತವಾಗಿ ಶ್ರಮಿಸಿ ಐಕ್ಯರಂಗವನ್ನು ಮತ್ತೆ ಅಧಿಕಾರಕ್ಕೆ ಏರಿಸಬೇಕು ಎಂದು ವಿನಂತಿಸಿದರು.
ನ್ಯಾಯವಾದಿ ಕೆ.ಶ್ರೀಧರನ್ ನಾಯರ್ ಮಾತನಾಡಿ, ಮಂಜೇಶ್ವರ ಕ್ಷೇತ್ರದಲ್ಲಿ 16,000ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದು ಕೋಮುವಾದ ಬಿಜೆಪಿ ಹಾಗೂ ಓಲೈಕೆ ರಾಜಕೀಯ ಪಕ್ಷವಾದ ಎಡರಂಗಕ್ಕೆ ಇಲ್ಲಿ ಅವಕಾಶವಿಲ್ಲವೆಂದು ತೋರಿಸಬೇಕಿದೆ ಎಂದರು. ಕರ್ನಾಟಕ ಆರೋಗ್ಯ ಸಚಿವ ಯು.ಟಿ.ಖಾದರ್ ಮಾತನಾಡಿ, ಪಿ.ಬಿ.ಅಬ್ರುರ್ರಝಾಕ್ ಕಳೆದ ಐದು ವರ್ಷಗಳಲ್ಲಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಇವರ ಗೆಲುವಿಗೆ ಕಾರ್ಯಕರ್ತರು ಶ್ರಮಿಸುವುದು ಅತ್ಯವಶ್ಯ ಎಂದರು.
ಸಮಾವೇಶದಲ್ಲಿ ಮಾಜಿ ಶಾಸಕ ಸಿ.ಟಿ.ಅಹ್ಮದಲಿ, ಸುಬ್ಬಯ್ಯ ರೈ, ಜಿಪಂ ಅಧ್ಯಕ್ಷ ಎ.ಜಿ.ಸಿ.ಬಶೀರ್, ಸ್ಥಾಯಿ ಸಮಿತಿಯ ಅಧ್ಯಕ್ಷ ಹರ್ಷಾದ್ ವರ್ಕಾಡಿ, ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಎ.ಕೆ.ಎಂ ಅಶ್ರಫ್, ಎ.ಎ.ಅರಿಪ್ಪಾಡಿ, ಅಬ್ದುರ್ರಹ್ಮಾನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಡ್ವ.ಎ.ಶ್ರೀಧರನ್, ಪ್ರಧಾನ ಕಾರ್ಯದರ್ಶಿ ಕೇಶವ ಪ್ರಸಾದ ನಾಣಿತ್ತಿಲು, ಸುಂದರ ಆರಿಕ್ಕಾಡಿ, ಸೋಮಶೇಖರ ಜೆ.ಎಸ್. ಮುಂತಾದವರು ಉಪಸ್ಥಿತರಿದ್ದರು.







