ರಾಜೀವ್ ಗಾಂಧಿ ಹಂತಕರ ಬಿಡುಗಡೆ ;ತಮಿಳುನಾಡಿನ ಪ್ರಸ್ತಾವನೆಯನ್ನು 2ನೆ ಬಾರಿ ತಿರಸ್ಕರಿಸಿದ ಕೇಂದ್ರ ಸರಕಾರ

ಚೆನ್ನೈ,ಎ.20: ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೈಲುವಾಸ ಅನುಭವಿಸುತ್ತಿರುವ 7 ಅಪರಾಧಿಗಳಿಗೆ ಕ್ಷಮಾದಾನ ನೀಡಿ ಬಿಡುಗಡೆಗೊಳಿಸುವ ಬಗ್ಗೆ ತಮಿಳುನಾಡು ಸರಕಾರ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಕೇಂದ್ರ ಸರಕಾರ ಎರಡನೆ ಬಾರಿ ತಿರಸ್ಕರಿಸಿದೆ.
ಕ್ಷಮಾದಾನ ವಿಚಾರ ಸುಪ್ರೀಕೋರ್ಟ್ನಲ್ಲಿ ವಿಚಾರಣೆ ಹಂತದಲ್ಲಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಯಾವುದೇ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ತಮಿಳುನಾಡು ಸರಕಾರಕ್ಕೆ ಬರೆದಿರುವ ಪತ್ರದಲ್ಲಿ ತಿಳಿಸಿದೆ
ಮಾರ್ಚ್ 2ರಂದು ತಮಿಳುನಾಡಿನಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಎರಡು ದಿನಗಳ ಮೊದಲು ತಮಿಳುನಾಡಿನ ಪ್ರಧಾನ ಕಾರ್ಯದರ್ಶಿ ಕೆ. ಜ್ಞಾನಾಧಿಸಿಕಾನ್ ಅವರು ಈ ಸಂಬಂಧ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದ್ದರು. ರಾಜೀವ್ ಹತ್ಯೆ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿರುವ ನಳಿನಿ, ರವಿಚಂದ್ರನ್, ರಾಬರ್ಟ್ ಪಯಾಸ್, ಜಯಕುಮಾರ್, ಟಿ ಸುಂದರರಾಜನ್ ಅಲಿಯಾಸ್ ಶಾಂತನ್, ಎ.ಜಿ. ಪರಾರಿವಲ್ಲನ್ ಮತ್ತು ವಿ.ಶ್ರೀಹರನ್ ಅಲಿಯಾಸ್ ಮುರುಗನ್ ನ್ನು ಬಿಡುಗಡೆಗೊಳಿಸುವ ಬಗ್ಗೆ ತಮಿಳುನಾಡು ಸರಕಾರದ ಪ್ರಸ್ತಾವನೆಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗಿತ್ತು.
2014ರ ಫೆಬ್ರವರಿಯಲ್ಲಿ ತಮಿಳುನಾಡು ಸರಕಾರ ರಾಜೀವ್ ಹಂತಕರಿಗೆ ಕ್ಷಮಾದಾನ ನೀಡುವಂತೆ ಕೋರಿ ಯುಪಿಎ ಸರಕಾರಕ್ಕೆ ಪತ್ರ ಬರೆದಿತ್ತು. ಆದರೆ ಕೇಂದ್ರ ಸರಕಾರ ಈ ಪ್ರಸ್ತಾವನೆಯನ್ನು ತಿರಸ್ಕರಿಸಿತ್ತು.
ಕಳೆದ ವರ್ಷ ತಮಿಳುನಾಡು ವಿಧಾನಸಭೆಯಲ್ಲಿ ರಾಜೀವ್ ಗಾಂಧಿ ಹಂತಕರ ಕ್ಷಮಾದಾನ ಆಗ್ರಹಿಸಿ ನಿರ್ಣಯ ಕೈಗೊಳ್ಳಲಾಗಿತ್ತು.





