ಗ್ರಾಪಂ ಉಪಚುನಾವಣೆ: ಪುತ್ತೂರಿನಲ್ಲಿ 4 ಸ್ಥಾನ ಕಾಂಗ್ರೆಸ್‌ಗೆ, 2 ಬಿಜೆಪಿಗೆ

ಪುತ್ತೂರು, ಎ.20: ಪುತ್ತೂರು ತಾಲೂಕಿನ 6 ಗ್ರಾಮ ಪಂಚಾಯತ್‌ಗಳ ತಲಾ 6 ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ 4 ಸ್ಥಾನಗಳಲ್ಲಿ ಕಾಂಗ್ರೆಸ್ ಹಾಗೂ 2 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಇಂದು ನಡೆದ ಮತ ಎಣಿಕೆಯಲ್ಲಿ ಕೊಳ್ತಿಗೆ ಗ್ರಾಪಂನ 3ನೆ ವಾರ್ಡ್‌ನ ಅನುಸೂಚಿತ ಜಾತಿ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿತ ಷಣ್ಮುಖಲಿಂಗಂ ತಮ್ಮ ಪ್ರತಿಸ್ಪರ್ಧಿ ಬಿಜೆಪಿ ಬೆಂಬಲಿತ ಕರುಣಾನಿಧಿ ವಿರುದ್ಧ 75 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ. ನೆಟ್ಟಣಿಗೆ ಮುಡ್ನೂರು ಗ್ರಾಪಂನ 6ನೆ ವಾರ್ಡ್‌ನ ಹಿಂದುಳಿದ ವರ್ಗ ಎ ಮೀಸಲು ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಎಸ್.ಅಬ್ದುಲ್ ಖಾದರ್ ಕರ್ನೂರು 191 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಅಶ್ರಫ್ ಈಶ್ವರಮಂಗಲ ವಿರುದ್ಧ ಗೆಲುವು ಸಾಧಿಸಿದ್ದಾರೆ. ಬಡಗನ್ನೂರು ಗ್ರಾಪಂನ ಪಡುವನ್ನೂರು 1ನೆ ವಾರ್ಡ್‌ನ ಹಿಂದುಳಿದ ವರ್ಗ ಎ ಮಹಿಳಾ ಮೀಸಲು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸವಿತಾ ಮಡ್ಯಲಮೂಲೆ ಗೆಲುವು ಸಾಧಿಸಿದ್ದು, ಇವರು ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಅಭ್ಯರ್ಥಿ ಜ್ಯೋತಿ ಅರ್ತಿಕಜೆ ವಿರುದ್ಧ 62 ಮತಗಳ ಅಂತರದಿಂದ ಗೆಲವು ಪಡೆದಿದ್ದಾರೆ. ಸವಿತಾ ಅರು 356 ಮತಗಳನ್ನು ಪಡೆದಿದ್ದು, ಜ್ಯೋತಿ ಅರ್ತಿಕಜೆ 294 ಮತಗಳನ್ನು ಗಳಿಸಲಷ್ಟೇ ಶಕ್ತರಾಗಿದ್ದಾರೆ. ಕಡಬ ಗ್ರಾಪಂನಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕೃಷ್ಣಪ್ಪ ನಾಯ್ಕ 156 ಮತಗಳ ಅಂತರದಿಂದ ಬಿಜೆಪಿ ಬೆಂಬಲಿತ ಸಂಜೀವ ನಾಯ್ಕ ಅಜ್ಜಿಕಟ್ಟೆ ವಿರುದ್ಧ ಗೆಲುವು ಸಾಧಿಸಿದ್ದಾರೆ. ಅರಿಯಡ್ಕ ಗ್ರಾಪಂನ ಮಾಡ್ನೂರು 2ನೆ ವಾರ್ಡ್‌ನ ಸಾಮಾನ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸರೋಜಿನಿ ಜಯ ಗಳಿಸಿದ್ದಾರೆ. ಇವರು ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ಶಾಂತಾ ಜೆ. ರೈಯವರನ್ನು ಪರಾಭವಗೊಳಿಸಿದ್ದಾರೆ. ನೂಜಿಬಾಳ್ತಿಲ ಗ್ರಾಪಂನ 1ನೆ ವಾರ್ಡ್‌ನಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪಿ.ಯು. ಸ್ಕರಿಯಾ ಗೆಲುವು ಪಡೆದಿದ್ದಾರೆ. ಬಿಜೆಪಿ ಬೆಂಬಲಿತ ಅಭ್ಯರ್ಥಿ ಅಂಜೇರಿ ಜೋಸ್‌ರನ್ನು ಪರಾಭವಗೊಳಿಸಿದ್ದಾರೆ





