ನವಜೀವನ ಸಮಿತಿ ಸದಸ್ಯರ ಪ್ರೇರಕರ ತಾ. ಮಟ್ಟದ ತರಬೇತಿ ಕಾರ್ಯಾಗಾರ

ಪುತ್ತೂರು: ಸಮಾಜಕ್ಕೆ ಪ್ರೇರಣಾದಾಯಿ ವ್ಯಕ್ತಿತ್ವಗಳು ಅಗತ್ಯ. ಇಂತಹ ಪ್ರೇರಣೆ ನೀಡುವಂತಹ ವ್ಯಕ್ತಿತ್ವವನ್ನು ಬೆಳೆಸಿಕೊಂಡು ಸಾಧನೆ ಮಾಡುವುದು ಸುಲಭವಲ್ಲ. ಇಂತಹ ವ್ಯಕ್ತಿತ್ವಗಳನ್ನು ರೂಪಿಸುವ ಕೆಲಸ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಬೆಳ್ತಂಗಡಿ ಜನಜಾಗೃತಿ ವೇದಿಕೆಯ ವಿವೇಕ್ ವಿನ್ಸೆಂಟ್ ಪಾಯಸ್ ಹೇಳಿದರು.
ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪುತ್ತೂರು ಯೋಜನಾ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾದ ತಾಲೂಕು ಮಟ್ಟದ ನವಜೀವನ ಸಮಿತಿ ಸದಸ್ಯರ ಪ್ರೇರಕರ ತರಬೇತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಕಾರ್ಯಾಗಾರವನ್ನು ಉದ್ಘಾಟಿಸಿದ ಜಿಲ್ಲಾ ಜನಜಾಗೃತಿ ವೇದಿಕೆ ನಿಕಟಪೂರ್ವ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಜಾಗೃತಿ ವೇದಿಕೆ, ನವಜೀವನ ಸಮಿತಿ ಮೂಲಕ ಅನೇಕ ಮಂದಿ ಪರಿವರ್ತನೆ ಹೊಂದಿ ಉತ್ತಮ ಬದುಕನ್ನು ನಡೆಸುತ್ತಿದ್ದಾರೆ. ಇಂತವರು ಇತರರಿಗೆ ಪ್ರೇರಣೆ ನೀಡುವ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಮೂಲಕ ಮಾದರಿ ಕಾರ್ಯ ಮಾಡುತ್ತಿದ್ದಾರೆ ಎಂದರು.
ಜನಜಾಗೃತಿ ವೇದಿಕೆ ಪುತ್ತೂರು ವಲಯ ಅಧ್ಯಕ್ಷ ಪದ್ಮನಾಭ ಶೆಟ್ಟಿ, ಪುತ್ತೂರು ತಾಲೂಕು ಯೋಜನಾಕಾರಿ ಧರ್ಣಪ್ಪ ಮೂಲ್ಯ, ಬೆಳ್ತಂಗಡಿ ಜನಜಾಗೃತಿ ವೇದಿಕೆ ಯೋಜನಾಕಾರಿ ತಿಮ್ಮಯ್ಯ ನಾಯ್ಕ, ಬೆಳ್ತಂಗಡಿ ತಾಲೂಕು ಜನಜಾಗೃತಿ ವೇದಿಕೆ ಶಿಬಿರಾಧಿಕಾರಿ ಭಾಸ್ಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶೇಖರ್ ಸ್ವಾಗತಿಸಿ, ಮ್ಯಾನೇಜರ್ ಕಮಲಾ ವಂದಿಸಿದರು. ಕುಶಾಲಪ್ಪ ಗೌಡ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಾಗಾರದಲ್ಲಿ ಗ್ರಾಮವೊಂದರಿಂದ ತಲಾ 2 ಮಂದಿಯಂತೆ ನವಜೀವನ ಸಮಿತಿ ಸದಸ್ಯರ ಪ್ರೇರಕರು ಪಾಲ್ಗೊಂಡಿದ್ದರು.







