ಸುಳ್ಯ: ಸ್ಥಾನ ಉಳಿಸಿಕೊಂಡ ಕಾಂಗ್ರೆಸ್, ಬಿಜೆಪಿ ವಿಜಯೋತ್ಸವದ ವೇಳೆ ಘರ್ಷಣೆ
ಪಂಚಾಯತಿ ಉಪ ಚುನಾವಣೆ

ಸುಳ್ಯ: ಸುಳ್ಯ ತಾಲೂಕಿನ ಮೂರು ಪಂಚಾಯತ್ ಸ್ಥಾನಗಳಿಗೆ ನಡೆದ ಉಪಚುನಾವಣೆಯ ಮತ ಎಣಿಕೆ ಬುಧವಾರ ನಡೆದಿದ್ದು, ಚುನಾವಣೆ ನಡೆದ ಮೂರೂ ಸ್ಥಾನಗಳನ್ನು ಈ ಮೊದಲು ಪ್ರತಿನಿಧಿಸುತ್ತಿದ್ದ ಪಕ್ಷಗಳೇ ಉಳಿಸಿಕೊಂಡಿದೆ.
ಸುಳ್ಯ ನಗರ ಪಂಚಾಯತ್‌ನ ಕಂದಡ್ಕ 1ನೇ ವಾರ್ಡ್‌ನ ಸದಸ್ಯರಾಗಿದ್ದ ಚಂದ್ರಕುಮಾರ್‌ರವರ ಆಕಸ್ಮಿಕ ನಿಧನದಿಂದ ತೆರವಾಗಿದ್ದ ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ ನಡೆದಿತ್ತು. ಬಿಜೆಪಿಯಿಂದ ದುಗಲಡ್ಕ ವಾರ್ಡ್ ಸಮಿತಿ ಅಧ್ಯಕ್ಷ ದಿನೇಶ್ ಮಣಿಯಾಣಿ, ಕಾಂಗ್ರೆಸ್‌ನಿಂದ ಚಂದ್ರಕುಮಾರ್‌ರ ಸಹೋದರ ಶಿವಕುಮಾರ್ ಕಂದಡ್ಕ ಸ್ಪರ್ಧಾ ಕಣದಲ್ಲಿದ್ದರು. ಇಲ್ಲಿ 347 ಪುರುಷ ಮತ್ತು 339 ಮಹಿಳೆಯರು ಒಟ್ಟು 686 ಮಂದಿ ಮತದಾರರಿದ್ದು, 574 ಮಂದಿ ಮತ ಚಲಾಯಿಸಿದ್ದರು. ಈ ಪೈಕಿ 290 ಮತಗಳನ್ನು ಶಿವಕುಮಾರ್ ಪಡೆದು ಆರು ಮತಗಳ ಅಂತರದಿಂದ ದಿನೇಶ್‌ರನ್ನು ಸೋಲಿಸಿದ್ದಾರೆ. ದಿನೇಶ್ 284 ಮತ ಪಡೆದಿದ್ದಾರೆ. ಈ ಕ್ಷೇತ್ರದಲ್ಲಿ ಚಂದ್ರಕುಮಾರ್ ಎರಡು ಬಾರಿ ನ.ಪಂ. ಸದಸ್ಯರಾಗಿ ಆಯ್ಕೆಯಾಗಿದ್ದರು.
ಅಮರಮುಡ್ನೂರು ಗ್ರಾ.ಪಂ.ನ ಅಮರಪಡ್ನೂರು - ಶೇಣಿ 2ನೇ ವಾರ್ಡ್‌ನಲ್ಲಿ ತೆರವಾಗಿದ್ದ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ರತಿನ್ ಚೂಂತಾರು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಅಶೋಕ್ ಚೂಂತಾರು ಅವರನ್ನು 15 ಮತಗಳ ಅಂತರದಿಂದ ಸೋಲಿಸಿದ್ದಾರೆ. ಇಲ್ಲಿ 851 ಮಂದಿ ಮತದಾರರಿದ್ದು, 680 ಮಂದಿ ಮತ ಚಲಾಯಿಸಿದ್ದರು. ರತಿನ್ ಚೂಂತಾರು 348 ಮತಗಳನ್ನು ಅಶೋಕ್ ಚೂಂತಾರು 333 ಮತಗಳನ್ನು ಪಡೆದಿದ್ದು, 8 ಮತಗಳು ತಿರಸ್ಕೃತಗೊಂಡಿತು.
ಕಲ್ಮಡ್ಕ ಗ್ರಾ.ಪಂ. ಪಡ್ಪಿನಂಗಡಿ 1ನೇ ವಾರ್ಡಿನಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಲೋಕೇಶ್ ಆಕ್ರಿಕಟ್ಟೆಯವರು ಬಿಜೆಪಿ ಬೆಂಬಲಿತ ರವೀಶ್ ಆಕ್ರಿಕಟ್ಟೆಯವರನ್ನು 160 ಮತಗಳ ಅಂತರದಲ್ಲಿ ಪರಾಭವಗೊಳಿಸಿದ್ದಾರೆ. ಕಣದಲ್ಲಿದ್ದರು. ಇಲ್ಲಿ 495 ಪುರುಷ, 510 ಮಹಿಳೆಯವರು ಹೀಗೆ ಒಟ್ಟು 1005 ಮಂದಿ ಮತದಾರರಿದ್ದು, 799 ಮಂದಿ ಮತ ಚಲಾಯಿಸಿದ್ದರು. ಲೋಕೇಶ್ ಆಕ್ರಿಕಟ್ಟೆಯವರು 458 ಮತಗಳನ್ನು, ರವೀಶ್ ಆಕ್ರಿಕಟ್ಟೆಯವರು 298 ಮತಗಳನ್ನು ಹಾಗೂ ಎಸ್.ಡಿ.ಪಿ.ಐ. ಅಭ್ಯರ್ಥಿ 32 ಮತ ಪಡೆದಿದ್ದು, 11 ಮತ ತಿರಸ್ಕೃತಗೊಂಡಿದೆ. ದೇವಚಳ್ಳ ಹಾಗೂ ಎಡಮಂಗಲ ಗ್ರಾ.ಪಂ.ನ ತಲಾ ಒಂದು ಸ್ಥಾನಗಳು ತೆರವಾಗಿದ್ದು, ಎರಡೂ ಕಡೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿರುವುದರಿಂದ ಚುನಾವಣೆ ನಡೆದಿಲ್ಲ.
ಸುಳ್ಯದಲ್ಲಿ ವಿಜಯೀ ಅಭ್ಯರ್ಥಿಗಳು ವಿಜಯೋತ್ಸವ ಆಚರಿಸಿದರು.
ಕಂದಡ್ಕದಲ್ಲಿ ಘರ್ಷಣೆ:
ಕಂದಡ್ಕದಲ್ಲಿ ಕಾಂಗ್ರೆಸ್ ವಿಜಯೋತ್ಸವ ಮೆರವಣಿಗೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ಮಧ್ಯೆ ಹೊಡೆದಾಟ ನಡೆದ ಘಟನೆ ನಡೆದಿದೆ. ಕಾಂಗ್ರೆಸ್ ಅಭ್ಯರ್ಥಿ ಶಿವಕುಮಾರ್ ಅವರು ಕಂದಡ್ಕ ತಲುಪುತ್ತಿದ್ದಂತೆ ಪಕ್ಷದ ಅಭಿಮಾನಿಗಳು ಅವರಿಗೆ ಶುಭಾಶಯ ಕೋರಿ ಸಂಭ್ರಮಿಸಿದರು. ಕಂದಡ್ಕದ ಶ್ರೀ ಕನಕ ಮುತ್ತುಮಾರಿಯಮ್ಮ ದೇವಸ್ಥಾನದ ಆವರಣದಲ್ಲಿ ಸಂಪನ್ನಗೊಂಡ ಕಾಲೋನಿಯವರು ಅಲ್ಲಿ ಕುಣಿದು ಕುಪ್ಪಳಿಸಿದರು. ಈ ಸಂದರ್ಭ ಅನ್ಯ ಕೋಮಿನ ಕಾರ್ಯಕರ್ತರೂ ಈ ವಿಜಯೋತ್ಸವದಲ್ಲಿ ಭಾಗಿಯಾಗಿದ್ದರೆನ್ನಲಾಗಿದೆ. ಬಳಿಕ ಮೆರವಣಿಗೆ ಕಾಲೋನಿಗೆ ತೆರಳಿದಾಗ ಅನ್ಯ ಕೋಮಿನವರನ್ನು ದೇವಸ್ಥಾನಕ್ಕೆ ಕರೆಸಿದ ಕ್ರಮವನ್ನು ಯುವಕರ ತಂಡವೊಂದು ಪ್ರಶ್ನಿಸಿದ್ದು, ಈ ಸಂದರ್ಭ ಎರಡೂ ಕಡೆಯವರು ಹೊಡೆದಾಡಿಕೊಂಡಿದ್ದಾರೆ. ಘಟನೆಯಲ್ಲಿ ಮಾಲತಿ ಎಂಬವರಿಗೆ ಗಾಯವಾಗಿದೆ ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಪರಿಸ್ಥಿತಿ ಶಾಂತವಾಯಿತು.







