ತುರ್ತು ಕಾಮಗಾರಿ ಕೈಗೆತ್ತಿಕೊಳ್ಳುವುದು ಅಗತ್ಯ: ವಿಜಯಲಕ್ಷ್ಮೀ
ಶಿಕಾರಿಪುರ,ಎ.20: ಬರಗಾಲದ ನೆರವಿಗಾಗಿ ಹಾಳಾಗಿದ್ದ ನೀರಿನ ಮೂಲ ಕೆರೆ,ಕಟ್ಟೆ,ಬಾವಿ, ನಾಲಾ,ಚೆಕ್ ಡ್ಯಾಂಗಳ ತುರ್ತು ಕಾಮಗಾರಿಯ ಯೋಜನೆಯನ್ನು ಕೈಗೆತ್ತಿಕೊಳ್ಳುವುದು ತಕ್ಷಣದ ಅಗತ್ಯವಾಗಿದೆ ಎಂದು ತಾಪಂ ಸದಸ್ಯೆ ವಿಜಯಲಕ್ಷ್ಮೀ ಈಶ್ವರಪ್ಪ ತಿಳಿಸಿದ್ದಾರೆ.
ಬುಧವಾರ ತಾಲೂಕಿನ ಹರಗುವಳ್ಳಿ ಗ್ರಾಮದಲ್ಲಿ ನಡೆದ ಕಂದಾಯ ಗ್ರಾಮ ಸಭೆ ಹಾಗೂ ನಮ್ಮ ಗ್ರಾಮ,ನಮ್ಮ ಯೋಜನೆ ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬರ ನಿರ್ವಹಣೆಗಾಗಿ ಅಂತರ್ಜಲ ಹೆಚ್ಚಿಸಲು ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಸಮರ್ಪಕವಾಗಿ ಕೆರೆಗಳ ಹೂಳೆತ್ತುವುದು, ನಾಲಾ ದುರಸ್ತಿ,ಬಾವಿ ತೋಡುವುದರಿಂದ ದನಕರುಗಳಿಗೆ ನೀರು ಮೇವು ಸಮಸ್ಯೆಯಾಗದಂತೆ ಯೋಜನೆ ರೂಪಿಸುವುದು ತುರ್ತು ಅಗತ್ಯವಾಗಿದೆ ಎಂದ ಅವರು ಈ ದಿಸೆಯಲ್ಲಿ ಗ್ರಾಮಸ್ಥರು ಸೂಕ್ತ ಸಲಹೆ ಸೂಚನೆಗಳನ್ನು ನೀಡುವಂತೆ ತಿಳಿಸಿದರು.
ಗ್ರಾಪಂ ಅಭಿವೃದ್ಧಿ ಅಧಿಕಾರಿ ಪಾಂಡುರಂಗರಾವ್ ಮಾತನಾಡಿ,ಕಂದಾಯ ಗ್ರಾಮ ಸಭೆಯು 5 ವರ್ಷಗಳ ಅಭಿವೃದ್ಧ್ದಿಯ ಮುನ್ಸೂಚನೆಯಾಗಿದ್ದು, ಗ್ರಾಮ ಸಭೆಗಳಲ್ಲಿ ಗ್ರಾಮಕ್ಕೆ ಅಗತ್ಯವಾದ ಸೌಲಭ್ಯಗಳ ಕುರಿತು ಪಟ್ಟಿ ಸಲ್ಲಿಸುವಂತೆ ತಿಳಿಸಿ ಸಮಗ್ರ ಗ್ರಾಮ ಅಭಿವೃದ್ಧಿಗಾಗಿ ಜನಸಮುದಾಯದ ಸಕ್ರಿಯ ಸಹಭಾಗಿತ್ವ ಅತ್ಯಗತ್ಯ ಎಂದು ತಿಳಿಸಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಂ.ವೈ. ಪೂಜಾರ್ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಕೆ.ಎಚ್. ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು.







