ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳಲ್ಲಿ ಸ್ವಾಗತ ಕೊಠಡಿ: ಎಸ್ಪಿ ರವಿ ಡಿ. ಚೆನ್ನಣ್ಣನವರ್
ಶಿವಮೊಗ್ಗ, ಎ. 20: ಮುಂದಿನ ಎರಡು ತಿಂಗಳಲ್ಲಿ ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳಲ್ಲಿ ಸ್ವಾಗತ ಕೊಠಡಿ ತೆರೆಯಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚೆನ್ನಣ್ಣನವರ್ ತಿಳಿಸಿದ್ದಾರೆ. ನಗರದ ಡಿಎಆರ್ ಸಭಾಂಗಣದಲ್ಲಿ ಬುಧವಾರ ನಾಗರಿಕ ಸಮಿತಿಯ ಸದಸ್ಯರಿಗೆ ಗುರುತು ಪತ್ರ ವಿತರಿಸಿದ ನಂತರ ಮಾತನಾಡಿದ ಅವರು, ಪೊಲೀಸ್ ಠಾಣೆಗಳಲ್ಲಿ ಸ್ವಾಗತ ಕೊಠಡಿ ತೆರೆಯಲು ತಲಾ 1 ಲಕ್ಷ ರೂ. ಸರಕಾರ ತನ್ನ ಬಜೆಟ್‌ನಲ್ಲಿ ಬಿಡುಗಡೆ ಮಾಡಿದೆ. ಈಗಾಗಲೇ ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಈ ವ್ಯವಸ್ಥೆ ಆರಂಭಿಸಲಾಗಿದೆ. ಉಳಿದ ಠಾಣೆಗಳಲ್ಲಿ ಇದಕ್ಕೆ ಸಂಬಂಧಿಸಿದ ಕೆಲಸಗಳು ಪ್ರಗತಿಯಲ್ಲಿವೆ ಎಂದು ಮಾಹಿತಿ ನೀಡಿದರು. ಸ್ವಾಗತ ಕೊಠಡಿಯಲ್ಲಿರುವ ಸ್ವಾಗತಕಾರರು ಠಾಣೆಗೆ ಬರುವವರನ್ನು ಸ್ವಾಗತಿಸಿ, ಠಾಣೆಗೆ ಆಗಮಿಸಿದ ಕಾರಣ ಕೇಳುತ್ತಾರೆ. ಅರ್ಧ ಗಂಟೆಯಲ್ಲಿ ಅವರ ಕೆಲಸ ಮಾಡಿಸಿಕೊಡಲಿದ್ದಾರೆ. ಬಂದವರು ಅರ್ಧ ಗಂಟೆಗಿಂತ ಜಾಸ್ತಿ ಠಾಣೆಯಲ್ಲಿ ಕುಳಿತುಕೊಳ್ಳದಂತೆ ಮಾಡಲಾಗುವುದು. ಪತ್ರಿಕೆ, ಕುಡಿಯುವ ನೀರನ್ನು ಸ್ವಾಗತ ಕೊಠಡಿಯಲ್ಲಿ ಒದಗಿಸಲಾಗುವುದು. ಜನರನ್ನು ಅತಿಥಿಗಳಂತೆ ನೋಡಿಕೊಳ್ಳುವ ಸಂಪ್ರದಾಯ ಆರಂಭಿಸುವ ಉದ್ದೇಶ ಇದರದ್ದಾಗಿದೆ ಎಂದರು. ರಾಜ್ಯ ಪೊಲೀಸ್ ಮಹಾನಿರ್ದೇಶಕರು ವಾರದಲ್ಲಿ ನಗರಕ್ಕಾಗಮಿಸಲಿದ್ದು, ಸ್ವಾಗತ ಕೊಠಡಿಗೆ ವಿದ್ಯುಕ್ತ ಚಾಲನೆ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಜಿಲ್ಲಾ ಪೊಲೀಸ್ ಇಲಾಖೆ ಹೊರತಂದಿರುವ ಪೊಲೀಸ್ ಕಾನೂನು ಪುಸ್ತಕವನ್ನು ಸಹ ಬಿಡುಗಡೆಗೊಳಿಸಲಿದ್ದಾರೆ ಎಂದರು. ಗುರುತಿನ ಪತ್ರ:
ಪೊಲೀಸ್ ಇಲಾಖೆಗೆ ನೆರವಾಗುವ, ಸಹಯೋಗದಲ್ಲಿ ಕೆಲಸ ಮಾಡುವ ನಾಗರಿಕರಿಗೆ ಗುರುತಿನ ಪತ್ರವನ್ನು ನೀಡಲಾಗುತ್ತಿದೆ. ಇದನ್ನು ಸದುಪಯೋಗ ಮಾಡಿಕೊಂಡು ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಮುಂದೆ ಬರಬೇಕೆಂದು ಇದೇ ಸಂದರ್ಭದಲ್ಲಿ ಎಸ್ಪಿ ತಿಳಿಸಿದರು. ಪ್ರಸ್ತುತ ಸಮಾಜದ ಒಳಿತಿಗಾಗಿ ಕೆಲಸ ಮಾಡುವವರು ಬೇಕಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇಲಾಖೆಯು ಪೊಲೀಸರಂತೆ ಕೆಲಸ ಮಾಡುವವರನ್ನು ಆಯ್ಕೆಮಾಡಿಕೊಂಡಿದೆ. ನಾಗರಿಕ ಸಮಿತಿಯ ಸದಸ್ಯರಿಗೆ ಗುರುತಿನ ಪತ್ರ ನೀಡುವ ಮೂಲಕ ಪೊಲೀಸರಿಗೆ ಮಾಹಿತಿ ಒದಗಿಸುವುದು, ನೆರವಾಗುವ ಕೆಲಸವನ್ನು ಅವರು ಮಾಡಬಹುದಾಗಿದೆ. ತಮ್ಮ ಸುತ್ತಮುತ್ತಲ ಪ್ರದೇಶಗಳಲ್ಲಿ ಅಪರಾಧ ಚಟುವಟಿಕೆ ನಡೆಯುತ್ತಿದ್ದರೆ, ಸಮಾಜದ್ರೋಹಿಗಳಿದ್ದರೆ ಆ ಬಗ್ಗೆ ಮಾಹಿತಿ ಕೊಡಬಹುದಾಗಿದೆ. ರಾತ್ರಿ ಗಸ್ತಿಗೆ ಪೊಲೀಸರ ಜೊತೆ ಹೋಗಬಹುದಾಗಿದೆ. ತಮ್ಮ ವಾರ್ಡಿನಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡಿಕೊಳ್ಳುವ ಜವಾಬ್ದಾರಿಯನ್ನೂ ಇವರಿಗೆ ವಹಿಸಲಾಗಿದೆ ಎಂದು ವಿವರಿಸಿದರು.
ಗುರುತಿನ ಚೀಟಿ ಹೊಂದಿದ ನಾಗರಿಕರು ಸಾಮಾನ್ಯ ನಾಗರಿಕರಿಗಿಂತ ಭಿನ್ನ ಅಧಿಕಾರ ಹೊಂದಿರುತ್ತಾರೆ. ಎಲ್ಲ ವಾರ್ಡುಗಳಲ್ಲಿರುವ ಎಲ್ಲ ಸಮುದಾಯದವರನ್ನೂ ಇಲ್ಲಿ ಸೇರಿಸಿಕೊಳ್ಳಲಾಗಿದೆ. ಖಾಕಿ ಧರಿಸದ ಪೊಲೀಸರಾಗಿ ಇವರು ಕೆಲಸ ಮಾಡುವರು. ನಾಗರಿಕ ಸಮಾಜದ ಸುಧಾ ರಣೆಗೆ ಸಲಹೆ- ಸೂಚನೆ ನೀಡುವ ಅಧಿಕಾರ ಇವರಿಗಿದೆ.
ಜೊತೆಗೆ ವಾರ್ಡುಗಳಲ್ಲಿ ಸ್ವಚ್ಛತೆ, ಯಾವುದೇ ಸಮಸ್ಯೆ ಉಂಟಾದಲ್ಲಿ ಅದನ್ನು ಬಗೆಹರಿಸಿಕೊಳ್ಳುವ ಅಧಿಕಾರವನ್ನೂ ಇವರಿಗೆ ಕೊಡಲಾಗಿದೆ. ಆದರೆ ಕಾರ್ಡನ್ನು ದುರುಪಯೋಗ ಪಡಿಸಿಕೊಳ್ಳುವಂತಿಲ್ಲ. ಹಾಗೇನಾದರೂ ಮಾಡಿದಲ್ಲಿ ಅದು ಶಿಕ್ಷಾರ್ಹ ಅಪರಾಧವಾಗಲಿದೆ ಎಂದು ಎಚ್ಚರಿಸಿದರು.
ಹೆಚ್ಚುವರಿ ಎಸ್ಪಿ ವಿಷ್ಣುವರ್ಧನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊಬೆಶನರಿ ಐಪಿಎಸ್ ಅಧಿಕಾರಿ ಸುಜಿತಾ ಮುಹಮ್ಮದ್, ಶಿವಮೊಗ್ಗ ಡಿಎಸ್ಪಿ ಡಾ. ರಾಮ್ ಎಲ್. ಅರಸಿದ್ದಿ, ತೀರ್ಥಹಳ್ಳಿ ಡಿಎಸ್ಪಿ ರಾಮಚಂದ್ರ ನಾಯಕ್, ಭದ್ರಾವತಿ ಡಿಎಸ್ಪಿ ನಾಗರಾಜ್ ಉಪಸ್ಥಿತರಿದ್ದರು.







