ಖ್ಯಾತ ಕವಿ ರಾಹತ್ ಇಂದೋರಿಗೆ ಅಮೆರಿಕ ವೀಸಾ ನಿರಾಕರಣೆ
ಹೊಸದಿಲ್ಲಿ, ಎ.20: ಖ್ಯಾತ ಉರ್ದು ಕವಿ ಹಾಗೂ ದ್ವಿಪದಿ ರಚನಾಕಾರ ರಾಹತ್ ಇಂದೋರಿಯವರಿಗೆ ಮುಂದಿನ ತಿಂಗಳು ಟೆಕ್ಸಾಸ್‌ನಲ್ಲಿ ನಡೆಯಲಿರುವ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಅಮೆರಿಕವು ವೀಸಾ ನೀಡಲು ನಿರಾಕರಿಸಿದೆ. ತಾನು ಮರಳಿ ಬರುವೆನೆಂಬುದನ್ನು ಅಧಿಕಾರಿಗಳಿಗೆ ‘ಮನದಟ್ಟು ಮಾಡಲು ವಿಫಲನಾಗಿದ್ದೇನೆಂಬ’ ಕಾರಣದಿಂದ ತನಗೆ ವೀಸಾ ನಿರಾಕರಿಸಲಾಗಿದೆಯೆಂದು ಇಂದೋರಿ ಮಂಗಳವಾರ ತಿಳಿಸಿದ್ದಾರೆ.
ತಾನು ವಲಸೇತರ ವೀಸಾಕ್ಕೆ ಅರ್ಜಿ ಸಲ್ಲಿಸಿದ ಬಳಿಕ ಅಮೆರಿಕನ್ ಕಾನ್ಸುಲೇಟ್ ತನ್ನನ್ನು ಸಂದರ್ಶನಕ್ಕೆ ಕರೆಯಿತು. ಸಂದರ್ಶನದ ಬಳಿಕ, ತನಗೆ ಅಮೆರಿಕವನ್ನು ಸಂದರ್ಶಿಸಲು ಈ ಬಾರಿ ವೀಸಾ ನೀಡಲಾಗುವುದಿಲ್ಲವೆಂದು ತಿಳಿಸಿ ಅದು ತನ್ನ ಪಾಸ್‌ಪೋರ್ಟನ್ನು ಹಿಂದಿರುಗಿಸಿತೆಂದು ಅವರು ಪಿಟಿಐಗೆ ವಿವರಿಸಿದ್ದಾರೆ.
ಅಧಿಕಾರಿಗಳು ತನಗೊಂದು ಕಾಗದವನ್ನು ನೀಡಿದರು. ಕಾರ್ಯಕ್ರಮದ ಬಳಿಕ ತಾನು ಭಾರತಕ್ಕೆ ಹಿಂದಿರುಗುವೆನೆಂಬುದನ್ನು ಅಧಿಕಾರಿಗಳಿಗೆ ಮನದಟ್ಟು ಮಾಡಲು ವಿಫಲನಾಗಿದ್ದೇನೆಂದು ಅದರಲ್ಲಿ ತಿಳಿಸಲಾಗಿತ್ತು. ವೀಸಾ ಕೇಳಲಾದ ನಿಗದಿತ ಅವಧಿಯ ಬಳಿಕ ತಾನು ಭಾರತಕ್ಕೆ ಹಿಂದಿರುಗುವುದನ್ನು ಖಚಿತಪಡಿಸಲು ತಾನು ವಿಫಲನಾಗಿರುವುದರಿಂದ ತನ್ನ ಅರ್ಜಿ ವಜಾಗೊಂಡಿದೆಯೆಂಬುದು ಪತ್ರದ ಒಟ್ಟು ಸಾರಾಂಶವಾಗಿದೆಯೆಂದು ಇಂದೋರಿ ಹೇಳಿದ್ದಾರೆ.
ಆಧಾರವಿಲ್ಲದ ಶಂಕೆಯಿಂದ ಅವರು ತನಗೆ ವೀಸಾ ನಿರಾಕರಿಸಿದ್ದಾರೆ. ತಾನು ತಾಯ್ನೆಲ ಬಿಟ್ಟು ಇನ್ನೊಂದು ದೇಶಕ್ಕೆ ಹೋಗುವುದನ್ನು ಕನಸಲ್ಲೂ ಕಲ್ಪಿಸಿಲ್ಲ. ತನಗೆ ಇಲ್ಲಿ ಗೌರವವಿದೆ, ಕುಟುಂಬವಿದೆ. ಆದರೆ, ಇದೆಲ್ಲ ಅಮೆರಿಕನ್ ಅಧಿಕಾರಿಗಳಿಗೆ ಅರ್ಥವಾಗಿಲ್ಲವೆಂಬುದಕ್ಕೆ ವಿಷಾದವಾಗುತ್ತಿದೆ. ತಾನು ಕಳೆದ 10 ವರ್ಷಗಳಲ್ಲಿ 11 ಬಾರಿ ಅಮೆರಿಕಕ್ಕೆ ಹೋಗಿದ್ದೇನೆ. ಆ ವೇಳೆ 100ಕ್ಕೂ ಹೆಚ್ಚು ‘ಮುಶಾಯ್ರೆಸ್’ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ಈ ಪ್ರವಾಸಗಳ ವೇಳೆ ತಾನು ಒಂದೇ ಒಂದು ತಪ್ಪನ್ನೂ ಮಾಡಿಲ್ಲ. ಕಾನ್ಸುಲೇಟ್ ಅಧಿಕಾರಿಗಳು ತನ್ನೆಲ್ಲ ದಾಖಲೆಗಳನ್ನು ಪರಿಶೀಲಿಸಿದ ಬಳಿಕವೂ ವೀಸಾ ನಿರಾಕಸಿದ್ದಾರೆಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
‘ಜಶ್ನೆ ಇಂದೋರಿ’ ಕಾರ್ಯಕ್ರಮವು ತನ್ನ ಗೌರವರ್ಥ ಮೇ.7ರಂದು ಡಲ್ಲಾಸ್ ನಗರದಲ್ಲಿ ನಡೆಯಲಿದೆಯೆಂದು ಇಂದೋರಿ ತಿಳಿಸಿದ್ದಾರೆ.







