ಅರಣ್ಯ ವಿಧೇಯಕ ತಿದ್ದುಪಡಿಗೆ ಕೇಂದ್ರ ಅಸ್ತು
ಹೊಸದಿಲ್ಲಿ, ಎ.20: ಅರಣ್ಯಭೂಮಿಯ ಅಭಿವೃದ್ಧಿಗೆ ನಿಗದಿಪಡಿಸಲಾಗಿರುವ 40 ಸಾವಿರ ಕೋಟಿ ರೂ.ಗೂ ಅಧಿಕ ಮೊತ್ತದ ಹಣವನ್ನು ತ್ವರಿತ ಹಾಗೂ ಪಾರದರ್ಶಕವಾಗಿ ಬಳಸಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ವಿಧೇಯಕ ತಿದ್ದುಪಡಿಯೊಂದನ್ನು ಸಂಸತ್‌ನಲ್ಲಿ ಮಂಡಿಸಲು ಕೇಂದ್ರ ಸರಕಾರವು ಬುಧವಾರ ಹಸಿರುನಿಶಾನೆಯನ್ನು ತೋರಿದೆ. ಎಪ್ರಿಲ್ 25ರಂದು ಆರಂಭಗೊಳ್ಳಲಿರುವ ಎರಡನೆ ಹಂತದ ಬಜೆಟ್ ಅಧಿವೇಶನದಲ್ಲಿ ಈ ವಿಧೇಯಕವು ಮಂಡನೆಯಾಗುವ ನಿರೀಕ್ಷೆಯಿದೆ.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಕೇಂದ್ರ ಸಂಪುಟವು ಪರಿಹಾರಾತ್ಮಕ ಅರಣ್ಯೀಕರಣ ನಿಧಿ ವಿಧೇಯಕ-2015ರ ತಿದ್ದುಪಡಿಗೆ ಅನುಮೋದನೆ ನೀಡಿರುವುದಾಗಿ ಅಧಿಕೃತ ಹೇಳಿಕೆಯೊಂದು ತಿಳಿಸಿದೆ.
ವಿಧೇಯಕದ ತಿದ್ದುಪಡಿಯಿಂದಾಗಿ ಪರಿಹಾರಾತ್ಮಕ ಅರಣ್ಯೀಕರಣ ನಿಧಿ ನಿರ್ವಹಣೆ ಅಡ್‌ಹಾಕ್ ಸಮಿತಿ ಹಾಗೂ ಯೋಜನಾ ಪ್ರಾಧಿಕಾರ (ಸಿಎಎಂಪಿಎ)ದ ಬಳಿ ಇರುವ ಸುಮಾರು 40 ಸಾವಿರ ಕೋಟಿ ರೂ.ಗಳನ್ನು ತ್ವರಿತವಾಗಿ ಬಳಸಿಕೊಳ್ಳಲು ಸಾಧ್ಯವಾಗಲಿದೆಯೆಂದು ಹೇಳಿಕೆ ತಿಳಿಸಿದೆ.
ಈ ಮೊತ್ತವನ್ನು ಅರಣ್ಯ ಭೂಮಿಯ ಪರಿವರ್ತನೆಯಿಂದಾಗಿ ಉಂಟಾದ ಪರಿಣಾಮವನ್ನು ತಗ್ಗಿಸಲು ಬಳಸಲಾಗುವುದು. ಜೊತೆಗೆ ಅರಣ.್ಯಪ್ರದೇಶದಲ್ಲಿ ಉತ್ಪಾದಕ ಆಸ್ತಿಗಳ ಸೃಷ್ಟಿ ಹಾಗೂ ಗ್ರಾಮಾಂತರ ಪ್ರದೇಶಗಲ್ಲಿ ಅದರಲ್ಲೂ ವಿಶೇಷವಾಗಿ ಬುಡಕಟ್ಟು ಪ್ರದೇಶಗಳಲ್ಲಿ ಉದ್ಯೋಗಗಳ ಸೃಷ್ಟಿಗೂ ಅವಕಾಶ ದೊರೆಯಲಿದೆಯೆಂದು ಜಾವಡೇಕರ್ ತಿಳಿಸಿದ್ದಾರೆ.
ವಿಧೇಯಕ ತಿದ್ದುಪಡಿಗೆ ಸಂಬಂಧಿಸಿ ಸ್ಥಾಯಿ ಸಮಿತಿಯ ವರದಿಯನ್ನು ತಾವು ಸ್ವೀಕರಿಸಿರುವುದಾಗಿ ಕೇಂದ್ರ ಅರಣ್ಯ ಹಾಗೂ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಮಂಗಳವಾರ ತಿಳಿಸಿದ್ದರು. ಮುಂಬರುವ ಸಂಸತ್ ಅಧಿವೇಶನದಲ್ಲಿ ಈ ವಿಧೇಯಕ ಮಂಡನೆಯಲಾಗಲಿದ್ದು, ಎಲ್ಲಾ ಪಕ್ಷಗಳು ಅದನ್ನು ಬೆಂಬಲಿಸುವ ನಿರೀಕ್ಷೆಯಿದೆಯೆಂದು ಅವರು ಹೇಳಿದ್ದಾರೆ.





