ರಾಷ್ಟ್ರಪತಿಯೂ ತಪ್ಪು ಮಾಡಬಹುದು: ಹೈಕೋರ್ಟ್
ಉತ್ತರಾಖಂಡ ವಿವಾದ
ರಾಯ್ಪುರ, ಎ.20: ರಾಷ್ಟ್ರಪತಿ ಸಹ ತಪ್ಪು ಮಾಡಲು ಸಾಧ್ಯವೆಂದು ಉತ್ತರಾಖಂಡ ಹೈಕೋರ್ಟ್ ನ್ಯಾಯಮೂರ್ತಿಗಳು ಇಂದು ಹೇಳಿದ್ದಾರೆ. ಕಾಂಗ್ರೆಸ್ ಸರಕಾರದಿಂದ ಮುಕ್ತಿ ಪಡೆಯಲು ಉತ್ತರಾಖಂಡದಲ್ಲಿ ರಾಷ್ಟ್ರಪತಿ ಆಡಳಿತವನ್ನು ಉಪಯೋಗಿಸಲಾಯಿತೆ ಎಂಬುದನ್ನು ಕುರಿತು ಅವರು ನಿರ್ಧರಿಸುತ್ತಿದ್ದಾರೆ.
ಸತತವಾಗಿ ನಡೆದಿರುವ ವಿಚಾರಣೆಯಲ್ಲಿ ಉತ್ತರಾಖಂಡ ಹೈಕೋರ್ಟ್‌ನ ನ್ಯಾಯಮೂರ್ತಿಗಳು ರಾಜ್ಯವು ರಾಜ್ಯಪಾಲರ ಮೂಲಕ ದಿಲ್ಲಿಯಿಂದ ಆಳಲ್ಪಡಬೇಕೆಂದು ನಿರ್ಧರಿಸಿದುದರಲ್ಲಿ ಕೇಂದ್ರದ ಉದ್ದೇಶ ಶಂಕಾಸ್ಪದವಾಗಿದೆ ಎಂದಿದ್ದಾರೆ.
ರಾಷ್ಟ್ರಪತಿ ಆಡಳಿತವನ್ನು ನ್ಯಾಯಾಲಯಗಳು ಪರಾಮರ್ಶಿಸುವಂತಿಲ್ಲವೆಂದು ಕೇಂದ್ರ ಸರಕಾರ ವಾದಿಸುತ್ತದೆ. ಆದರೆ, ಅದರಿಂದ ವಿಚಲಿತರಾಗದ ನ್ಯಾಯಮೂರ್ತಿಗಳು, ನ್ಯಾಯಾಂಗ ಪರಾಮರ್ಶೆಗೆ ಒಳಪಡಿಸಲಾಗದಂತಹ ರಾಜಾಜ್ಞೆಯ ರೀತಿಯ ನಿರ್ಧಾರ ಇಲ್ಲವೇ ಇಲ್ಲವೆಂದು ಹೇಳಿದೆ.
‘‘ನೀವು ಪ್ರಜಾಪ್ರಭುತ್ವದ ಬೇರನ್ನು ಕಡಿಯುತ್ತಿದ್ದೀರಿ’’ ಎಂದು ಹೈಕೋರ್ಟ್ ಈ ವಾರಂಭದಲ್ಲಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿತ್ತು. ತಾನು ಉತ್ತರಾಖಂಡದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ತಲೆದೋರುವುದನ್ನು ತಪ್ಪಿಸಲು ಕ್ರಮ ಕೈಗೊಂಡೆನೆಂಬ ಕೇಂದ್ರದ ವಾದವನ್ನು ಅದು ಬಲವಾಗಿ ತಿರಸ್ಕರಿಸಿತ್ತು.
ಪ್ರತಿಯೊಂದು ನಿರ್ಧಾರವೂ 10-20 ವರ್ಷಗಳ ಕಾಲ ಪರಿಣಾಮ ಬೀರುತ್ತದೆ. ವಿರೋಧ ಪಕ್ಷಗಳ ಸರಕಾರ ಇದ್ದಲ್ಲಿ ನ್ಯಾಯ ಬಾಹಿರವಾಗಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಿದರೆ, ಮುಂದೆ ಅದು ಪೂರ್ವ ನಿದರ್ಶನವಾಗುವ ಅಪಾಯವಿದೆಯೆಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.





