ಕೃಪಾಲ್ ಸಿಂಗ್‌ರ ಮೃತದೇಹ ಭಾರತಕ್ಕೆ ಹಸ್ತಾಂತರ
ಹೃದಯ ಮತ್ತಿತರ ಅಂಗಗಳು ಕಾಣೆ

ಹೊಸದಿಲ್ಲಿ, ಎ.20: ಪಾಕಿಸ್ತಾನದ ಕಾರಾಗೃಹದಲ್ಲಿ ಅಸು ನೀಗಿದ್ದ ಕೃಪಾಲ್ ಸಿಂಗ್ ಎಂಬ ಕೈದಿಯ ಮೃತದೇಹವನ್ನು ಅದು ಭಾರತಕ್ಕೆ ಹಸ್ತಾಂತರಿಸಿದೆ. ಆದರೆ, ಆತನ ಹೃದಯ ಸಹಿತ ಪ್ರಧಾನ ಅಂಗಗಳನ್ನು ವಿಧಿ ವಿಜ್ಞಾನ ಪರೀಕ್ಷೆಗಾಗಿ ಅದು ತೆಗೆದಿರಿಸಿದೆ. ಪರೀಕ್ಷೆ ಲಾಹೋರಿನ ಜಿನ್ನಾ ಆಸ್ಪತ್ರೆಯಲ್ಲಿ ನಡೆಯಲಿದೆ.
ಗೂಡಚರ್ಯೆ ಹಾಗೂ ಭಯೋತ್ಪಾದನೆಯ ಆರೋಪದಲ್ಲಿ ಪಾಕಿಸ್ತಾನದ ನ್ಯಾಯಾಲದದಿಂದ ಮರಣದಂಡನೆ ವಿಧಿಸಲ್ಪಟ್ಟಿದ್ದ 50ರ ಹರೆಯದ ಕೃಪಾಲ್ ಸಿಂಗ್ ಕಳೆದ ವಾರ ಲಾಹೋರ್‌ನ ಕೋಟ್ ಲಖಪತ್ ಕಾರಾಗೃಹದಲ್ಲಿ ಮರಣ ಹೊಂದಿದ್ದರು. ಅವರಿಗೆ ಹೃದಯಾಘಾತವಾಗಿತ್ತೆಂದು ಪಾಕಿಸ್ತಾನದ ಅಧಿಕಾರಿಗಳು ಪ್ರತಿಪಾದಿಸಿದ್ದಾರೆ.
ಅಮೃತಸರ ವೈದಕೀಯ ಕಾಲೇಜಿನಲ್ಲಿ ನಡೆಸಿದ್ದ ಮರಣೋತ್ತರ ಪರೀಕ್ಷೆಯು ಸಾವಿನ ಕಾರಣದ ಬಗ್ಗೆ ತೀರ್ಮಾನಕ್ಕೆ ಬರಲು ವಿಫಲವಾಗಿತ್ತು. ಶರೀರದಲ್ಲಿ ಬಾಹ್ಯ ಅಥವಾ ಆಂತರಿಕ ಗಾಯಗಳಿಲ್ಲವೆಂದು ಪರೀಕ್ಷೆ ನಡೆಸಿದ್ದ ವೈದ್ಯರು ಹೇಳಿದ್ದರು.
ಮೇಲ್ನೋಟಕ್ಕೆ ಯಾವುದೇ ಕಪಟ ನಡೆದಂತೆ ತೋರುವುದಿಲ್ಲ. ಆದರೆ, ಜಿನ್ನಾ ಆಸ್ಪತ್ರೆಯಿಂದ ಮರಣೋತ್ತರ ಪರೀಕ್ಷಾ ವರದಿ ಹಾಗೂ ಸ್ರಾವಗಳ ಪರೀಕ್ಷಾ ವರದಿ ದೊರೆತ ಬಳಿಕವೇ ತಾವು ಸಾವಿನ ಕಾರಣದ ಕುರಿತು ಏನನ್ನಾದರೂ ನಿಖರವಾಗಿ ಹೇಳಬಲ್ಲೆವೆಂದು ಅಮೃತಸರ ವೈದ್ಯಕೀಯ ಕಾಲೇಜು ತಂಡದ ಮುಖ್ಯಸ್ಥ ಅಶೋಕ್ ಚನಾನಾ ತಿಳಿಸಿದ್ದಾರೆ.
ಪಾಕಿಸ್ತಾನ ನಡೆಸುವ ಯಾವುದೇ ಶವ ಪರೀಕ್ಷೆಯ ಕುರಿತು ತಮಗೆ ವಿಶ್ವಾಸವಿಲ್ಲ. ಭಾರತದಲ್ಲಿ ನಡೆಸುವ ಮರಣೋತ್ತರ ಪರೀಕ್ಷೆಯಿಂದಷ್ಟೇ ಕೃಪಾಲ್‌ರ ಸಾವಿನ ಕುರಿತು ಸತ್ಯ ತಿಳಿದೀತೆಂದು ಅವರ ಕುಟುಂಬಿಕರು ಹೇಳಿದ್ದಾರೆ.
ಕೃಪಾಲ್ ಸಿಂಗ್‌ರ ಸಾವಿನ ವಿಷಯವನ್ನು ‘ಉನ್ನತ ಮಟ್ಟದವರೆಗೆ’ ಕೊಂಡೊಯ್ಯುವಂತೆ ಹೊಸದಿಲ್ಲಿಯು ತನ್ನ ಪಾಕಿಸ್ತಾನಿ ರಾಯಭಾರಿಗೆ ಸೂಚಿಸಿದೆ.
ಕೃಪಾಲ್‌ರ ಅಂತ್ಯಕ್ರಿಯೆಯನ್ನು ಬುಧವಾರ ಅವರ ತವರು ಪಟ್ಟಣ ಗುರುದಾಸ್‌ಪುರದಲ್ಲಿ ನಡೆಸಲಾಗುವುದು.





