ಕೊಹಿನೂರು ವಜ್ರ ಭಾರತಕ್ಕೆ ಸೇರಿದ್ದು
ಒಂದೇ ದಿನದಲ್ಲಿ ಕೇಂದ್ರದ ತಿಪ್ಪರಲಾಗ

ಹೊಸದಿಲ್ಲಿ, ಎ.20: ಈಗ ಬ್ರಿಟಿಷ್ ರಾಜಮನೆತನದ ಆಭರಣಗಳ ಭಾಗವಾಗಿರುವ 106 ಕ್ಯಾರೆಟ್‌ನ ಕೊಹಿನೂರು ವಜ್ರವನ್ನು ಹಿಂದಿರುಗಿಸುವಂತೆ ತಾನು ವಿನಂತಿಸುವುದಿಲ್ಲವೆಂದು ಸುಪ್ರೀಂಕೋರ್ಟ್‌ಗೆ ತಿಳಿಸಿದ ಒಂದೇ ದಿನದಲ್ಲಿ ಕೇಂದ್ರ ಸರಕಾರವು ತಿಪ್ಪರಲಾಗ ಹೊಡೆ ದಿದ್ದು, ವಜ್ರವನ್ನು ಹಿಂದೆ ತರುವ ಬಗ್ಗೆ ತಾನು ಕೆಲಸ ಮಾಡುವೆನೆಂದು ಹೇಳಿದೆ.
19ನೆ ಶತಮಾನದ ಮಧ್ಯಭಾಗದಲ್ಲಿ ಕೊಹಿನೂರು ವಜ್ರವನ್ನು ಪಂಜಾಬ್‌ನ ದೊರೆ ಮಹಾರಾಜ ರಣಜಿತ್ ಸಿಂಗನು ಬ್ರಿಟಿಷರಿಗೆ ಉಡುಗೊರೆಯಾಗಿ ನೀಡಿದ್ದನು. ಬ್ರಿಟಿಷರು ಅದನ್ನು ಕದ್ದದ್ದೂ ಅಲ್ಲ. ಬಲಾತ್ಕಾರದಿಂದ ಒಯ್ದದ್ದೂ ಅಲ್ಲ. ಆದುದರಿಂದ ಬ್ರಿಟನ್ ವಜ್ರವನ್ನು ಹಿಂದೆ ಕೊಡಬೇಕಾಗಿಲ್ಲವೆಂದು ಸಾಲಿಸಿಟರ್ ಜನರಲ್ ಸೋಮವಾರ ನ್ಯಾಯಾಲಯಕ್ಕೆ ತಿಳಿಸಿದ್ದರು.
ಹಲವು ದಶಮಾನಗಳಿಂದ ಕೊಹಿನೂರು ವಜ್ರವನ್ನು ಮರಳಿಸಬೇಕೆಂದು ಆಗ್ರಹಿಸುತ್ತಿರುವಾಗ ಸರಕಾರದ ಈ ಹೇಳಿಕೆ ಆಶ್ಚರ್ಯವುಂಟು ಮಾಡಿತ್ತು. ಕೊಹಿನೂರು ವಜ್ರದ ನಷ್ಟವು ಬ್ರಿಟಿಷರ ವಸಾಹತುಶಾಹಿ ಆಡಳಿತದಲ್ಲಿ ಭಾರತವನ್ನು ದೋಚಿದುದರ ದ್ಯೋತಕವೆಂದು ಪರಿಗಣಿಸಲಾಗಿತ್ತು. ಅದರ ಮರಳಿಸುವಿಕೆಯು ಅನೇಕ ಶತಮಾನಗಳ ಕಾಲ ಭಾರತದಿಂದ ಗಳಿಸಿದ್ದ ಆರ್ಥಿಕ ಲಾಭದ ಭಾಗಶಃ ಪರಿಹಾರವೆಂದು ಭಾವಿಸಲಾಗಿತ್ತು. ಆದರೆ, ಮಂಗಳವಾರ ರಾತ್ರಿ ಸಂಸ್ಕೃತಿ ಸಚಿವಾಲಯವು ಹೇಳಿಕೆಯೊಂದನ್ನು ಹೊರಡಿಸಿ, ಅದು ತನ್ನ ನಿಲುವನ್ನು ಇನ್ನಷ್ಟೇ ಸ್ಪಷ್ಟಪಡಿಸಬೇಕಿದೆಯೆಂದು ಹೇಳಿತ್ತು.
ಕೊಹಿನೂರು ವಜ್ರವನ್ನು ಮರಳಿ ಕೇಳದಿರುವ ಕೇಂದ್ರದ ನಿರ್ಧಾರಕ್ಕೆ ಆರೆಸ್ಸೆಸ್ ಆಕ್ಷೇಪ ವ್ಯಕ್ತಪಡಿಸಿತ್ತು.







