ಹೊಸ ಬಣ್ಣ... ಹೊಸ ನೋಟ...
ಸರಕಾರಿ ಕಟ್ಟಡವೊಂದು ಮರುಜೀವ ಪಡೆದು, ನಿಜವಾದ ಅರ್ಥದಲ್ಲಿ ಸಂಪನ್ಮೂಲ ಕೇಂದ್ರವಾಗಿ ಕಂಗೊಳಿಸುವ ರೂಪಕ್ಕೆ ಬದಲಾದ ಕಥೆಯನ್ನು ನಾನು ನಿಮಗೆ ಹೇಳಲೇಬೇಕು. ಈ ಕಥೆ ಬಂಟ್ವಾಳದ ಶಿಕ್ಷಣ ಇಲಾಖೆಯ ಕ್ಷೇತ್ರಸಂಪನ್ಮೂಲ ಕೇಂದ್ರ (ಬಿ.ಆರ್.ಸಿ)ದ ಕಥೆ. ಒಂದು ಕಾಲದಲ್ಲಿ ಪಾಚಿಕಟ್ಟಿದ ಗೋಡೆಗಳು, ಒಳಗೆಲ್ಲಾ ರಾಶಿಬಿದ್ದಿರುವ ಶಿಕ್ಷಣ ಇಲಾಖೆಯ ಕಡತಗಳು, ಮಾಹಿತಿಯ ಮಹಾಪೂರದಿಂದ ತುಂಬಿ ಅಕ್ಷರಶಃ ಗೋದಾಮಿನಂತಾಗಿದ್ದ ಈ ಕಟ್ಟಡ, ಕಳೆದ ಒಂದು ವರ್ಷದ ಅವಧಿಯಲ್ಲಿ ತನ್ನ ಹಳೆಯ ಕೊಳೆಯನ್ನು ಕಳಚಿಕೊಂಡು ಹೊಸದಾಗಿ ಕಂಗೊಳಿಸುತ್ತಿದೆ.
ಇದರ ರೂವಾರಿ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿಗಳಾದ ರಾಜೇಶ್ ಅವರು. ಸದಾ ಇಲಾಖೆಯ ಮಾಹಿತಿ ಸಂಗ್ರಹ, ತರಬೇತಿಗಳು, ಪಠ್ಯಪುಸ್ತಕ ವಿತರಣೆ, ಸಮವಸ್ತ್ರ ವಿತರಣೆ ಎಂಬಿತ್ಯಾದಿ ಕೆಲಸಗಳಲ್ಲೇ ಮುಳುಗಿರುವ ಕೇಂದ್ರದ ಸಿಬ್ಬಂದಿಗೆ ಇದೀಗ ನವಹರುಷದ ಸಮಯ.
ಕ್ಷೇತ್ರ ಸಂಪನ್ಮೂಲ ಕೇಂದ್ರಕ್ಕೆ ಮುಖ್ಯ ರಸ್ತೆಯಿಂದ ಸಂಪರ್ಕ ನೀಡುವ ದಾರಿ ಸಂಪೂರ್ಣ ಶಿಥಿಲಾವಸ್ಥೆಯಲ್ಲಿತ್ತು. ಇದೀಗ ಕಾಂಕ್ರಿಟೀಕರಣಗೊಂಡು ಭದ್ರವಾಗಿದೆ. ಅಚ್ಚುಕಟ್ಟಾದ ಮೋರಿಯ ವ್ಯವಸ್ಥೆಯಾಗಿದೆ. ಆವರಣಗೋಡೆ ನಿರ್ಮಾಣವಾಗಿದೆ. ಹೊಸದಾಗಿ ಸುಂದರವಾದ ಗೇಟನ್ನು ಅಳವಡಿಸಲಾಗಿದೆ. ಕಟ್ಟಡದ ಮುಂಭಾಗದಲ್ಲಿ ಶೀಟ್ ಅಳವಡಿಸಲಾಗಿದ್ದು ವಾಹನ ನಿಲುಗಡೆಗೆ ಅನುಕೂಲವಾಗಿದೆ. ಕಟ್ಟಡದ ಒಳಆವರಣದಲ್ಲಿ ಟೈಲ್ಸ್ ಹಾಸಿ ಸುಂದರಗೊಳಿಸಲಾಗಿದೆ.
ಇಷ್ಟೇ ಆಗಿದ್ದರೆ ನಾನು ಈ ಕಥೆ ಹೇಳುವ ಅಗತ್ಯವೇ ಇರಲಿಲ್ಲ. ಇವೆಲ್ಲದಕ್ಕೂ ಕಳಶವಿಟ್ಟಂತೆ ಕಟ್ಟಡಕ್ಕೆ ಆಕರ್ಷಕವಾದ ಬಣ್ಣಬಳಿದು, ಹೊರಗಿನ ಮತ್ತು ಒಳಗಿನ ಗೋಡೆಗಳಮೇಲೆ ಸುಂದರವಾದ ಚಿತ್ರಗಳನ್ನು ಬರೆಯಲಾಗಿದೆ. ಕಲಾವಿದ ತಾರನಾಥ ಕೈರಂಗಳ ಮತ್ತು ಸಹಕಲಾವಿದರು ಮೂಡಿಸಿದ ವರ್ಲಿ ಶೈಲಿಯ ಈ ಚಿತ್ರಗಳು ಇಡೀ ಕ್ಷೇತ್ರಸಂಪನ್ಮೂಲ ಕೇಂದ್ರಕ್ಕೆ ಹೊಸಜೀವ ನೀಡಿದೆ.
ಆವರಣದ ಒಳಗೆ ಪ್ರವೇಶಿಸುತ್ತಿದ್ದಂತೆಯೇ ಗೇಟಿನ ಮೇಲೆ ಮೂಡಿದ ಜಾತ್ರೆಯ ಕೊಡೆಗಳನ್ನು ಹಿಡಿದು, ಡೋಲು, ತಮಟೆ ಬಾರಿಸುವ ಚಿತ್ರಗಳು ನಿಮಗೆ ಸ್ವಾಗತ ನೀಡುತ್ತವೆ. ಗೇಟಿನಿಂದ ಒಳಬಂದು ದಾರಿಯ ಬಲಭಾಗದ ಆವರಣಗೋಡೆಯನ್ನು ನೋಡುತ್ತಾ ಸಾಗಿದರೆ ತುಳುನಾಡಿನ ಜಾತ್ರೆಯ ವೈಭವ, ರಥೋತ್ಸವ, ಆಟಿಕಳೆಂಜ,ಕಂಗೀಲು ಕುಣಿತ, ಭೂತದಕೋಲ, ಕಂಬಳ, ಕೋಳಿ ಅಂಕ,ಯಕ್ಷಗಾನ, ಬೇಸಾಯ, ಮೀನುಗಾರರ ಬದುಕು, ಪೂಜಾಕುಣಿತ, ಪಟಕುಣಿತ, ಡೊಳ್ಳುಕುಣಿತ, ದೀಪಾವಳಿ ಹಬ್ಬ, ಗ್ರಾಮೀಣ ಆಟಗಳು, ಕೋಲೆಬಸವ, ಮಲ್ಲಕಂಬ ಮೊದಲಾದ ಹಲವಾರು ಜನಪದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಚಿತ್ರಗಳು ನಿಮ್ಮ ಗಮನವನ್ನು ಸೆಳೆಯುತ್ತವೆ. ದಾರಿಯ ಎಡಭಾಗದಲ್ಲಿ ಹಲವಾರು ಶಿಲ್ಪಗಳು, ಸುಂದರವಾದ ಮಾವಿನಕಟ್ಟೆಯೂ ಇವೆ. ಕೇಂದ್ರದ ಹೊಸತನದಲ್ಲಿ ತಾನೂ ಭಾಗಿಯೇನೋ ಎಂಬಂತೆ ಮಾವಿನಮರ ಮೊದಲನೆ ಬಾರಿಗೆ ಮೈತುಂಬಾ ಹಣ್ಣುಗಳನ್ನು ತುಂಬಿಕೊಂಡಿದೆ.
ಇದೆಲ್ಲವನ್ನೂ ಆಸ್ವಾದಿಸುತ್ತಾ ಕ್ಷೇತ್ರ ಸಂಪನ್ಮೂಲ ಕೇಂದ್ರವನ್ನು ಪ್ರವೇಶಿಸಿದರೆ ಒಳಭಾಗದಲ್ಲೂ ಸುಂದರವಾದ ಚಿತ್ರಗಳಿವೆ. ಶಿಕ್ಷಣ ಇಲಾಖೆಯ ವಿವಿಧ ಯೋಜನೆಗಳಾದ ಅಕ್ಷರದಾಸೋಹ, ಕ್ಷೀರಭಾಗ್ಯ, ಸಮವಸ್ತ್ರ, ಕಂಪ್ಯೂಟರ್ ಶಿಕ್ಷಣ, ಹೆಣ್ಣುಮಕ್ಕಳ ಶಿಕ್ಷಣ, ಲಿಂಗತಾರತಮ್ಯ, ಹತ್ತು ಅಂಶದ ಕಾರ್ಯಕ್ರಮ, ಪಡೇ ಭಾರತ್-ಬಡೇ ಭಾರತ್, ವಿಜ್ಞಾನ ಪ್ರಯೋಗ, ಬಾ ಮರಳಿ ಶಾಲೆಗೆ ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳನ್ನು ಬಿಂಬಿಸುವ ವರ್ಲಿ ಚಿತ್ರಗಳಿವೆ. ಮೀಟಿಂಗ್ ಹಾಲ್‌ನಲ್ಲಿ ಶ್ರೀಕೃಷ್ಣನ ಬಾಲಲೀಲೆಗಳನ್ನು ಬಿಂಬಿಸುವ ಸುಂದರ ಆಲಂಕಾರಿಕ ಚಿತ್ರಗಳಿವೆ. ಆಲಂಕಾರಿಕವಾದ ಹಲವಾರು ಚಿತ್ರಗಳೂ ಇವೆ.
ಸಿಬ್ಬಂದಿ ಕೊಠಡಿ, ಕಂಪ್ಯೂಟರ್ ಕೊಠಡಿಗಳು ಹೊಸ ಪೀಠೋಪಕರಣಗಳನ್ನು ಪಡೆದು ಸುಂದರವಾಗಿ ಕಾಣುತ್ತಿವೆ. ಹೊಸದೊಂದು ಅಕ್ವೇರಿಯಂ ಜೀವಂತಿಕೆಯನ್ನು ತೋರಿಸುತ್ತವೆ.
ಹೀಗೆ ಸಮನ್ವಯಾಧಿಕಾರಿ ರಾಜೇಶ್ ಅವರ ಉತ್ಸಾಹ, ನಮ್ಮ ಕೇಂದ್ರ ವಿಭಿನ್ನವಾಗಿರಬೇಕು, ಇಲ್ಲಿ ಜೀವಂತಿಕೆ ಇರಬೇಕು ಎಂಬ ಕಾಳಜಿಯಿಂದಾಗಿ ಕೇಂದ್ರಕ್ಕೊಂದು ಹೊಸ ಹುಟ್ಟು ಸಿಕ್ಕಿದೆ. ಕೇವಲ ಸರಕಾರಿ ಅನುದಾನಗಳಿಗಾಗಿ ಕಾಯದೆ ದಾನಿಗಳ ನೆರವಿನಿಂದಲೇ ಹೊಸತನದ ವ್ಯವಸ್ಥೆ ರೂಪುಗೊಂಡಿದೆ. ಈ ಎಲ್ಲವನ್ನೂ ಮಾಡುವಾಗ ತಮ್ಮ ಕಚೇರಿ ಸಿಬ್ಬಂದಿಯ ಸಹಕಾರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಹಕಾರ, ಉಸ್ತುವಾರಿ ಸಚಿವರ ಬೆಂಬಲವನ್ನು ಅಷ್ಟೇ ಪ್ರಾಮಾಣಿಕವಾಗಿ ಸ್ಮರಿಸುತ್ತಾರೆ.
ಬಂಟ್ವಾಳದ ಶಿಕ್ಷಣ ಇಲಾಖೆಯ ಕ್ಷೇತ್ರಸಂಪನ್ಮೂಲ ಕೇಂದ್ರ ಹೊಸಬಣ್ಣ- ಹೊಸನೋಟ ಪಡೆದು ಜಿಲ್ಲೆ ಹಾಗೂ ರಾಜ್ಯಕ್ಕೇ ಮಾದರಿ ಕೇಂದ್ರವಾಗಿ ರೂಪುಗೊಂಡಿದೆ. ಬಿ.ಸಿ.ರೋಡ್ ರೈಲ್ವೆ ಸ್ಟೇಷನ್ ಹತ್ತಿರದಲ್ಲಿರುವ ಕ್ಷೇತ್ರಸಂಪನ್ಮೂಲ ಕೇಂದ್ರಕ್ಕೆ ಸಮಯ ಸಿಕ್ಕಾಗ ಭೇಟಿ ಕೊಡಿ, ನಿಮಗೊಂದು ಹೊಸ ಶಿಕ್ಷಣ ನೋಟ ಸಿಗಬಹುದು.