ರಸಾಯನ ಶಾಸ್ತ್ರ ಪಾಠ ಕಲಿಯಲು ಸಿಐಡಿ ಎಕ್ಸ್‌ಪರ್ಟ್ ಕಾಲೇಜಿಗೆ ‘ಭೇಟಿ’ ನೀಡಿತೇ?
ಮಾನ್ಯರೆ,
ಪಿಯುಸಿ ರಸಾಯನ ಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದಲ್ಲಿ ಮಂಗಳೂರಿನ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ಮೇಲೆ ಯಾವುದೇ ಸಿಐಡಿ ದಾಳಿ ನಡೆದಿಲ್ಲ. ಸಿಐಡಿ ಅಧಿಕಾರಿಗಳು ಭೇಟಿ ಕೊಟ್ಟು ಕೆಲವೊಂದು ಮಾಹಿತಿಗಳನ್ನು ಕೇಳಿದ್ದರು. ಆ ಮಾಹಿತಿಯನ್ನು ತಕ್ಷಣ ನೀಡಿ ಪ್ರಕರಣದ ತನಿಖೆಗೆ ಪೂರ್ಣ ಪ್ರಮಾಣದಲ್ಲಿ ಸಹಕರಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ ನರೇಂದ್ರ ಎಲ್ ನಾಯಕ್ ಅವರು ಪತ್ರಿಕಾ ಪ್ರಕಟನೆ ನೀಡಿದ್ದನ್ನು ಗಮನಿಸಿದೆ. ರಾಜ್ಯದಲ್ಲಿ ಸಾವಿರಾರು ಪಿಯು ಕಾಲೇಜುಗಳಿವೆ. ಆ ಪೈಕಿ ಸಿಐಡಿಯವರು ಎಕ್ಸ್ ಪರ್ಟ್ ಸಹಿತ 11 ಕಾಲೇಜುಗಳಿಗೆ ಮಾತ್ರ ಯಾಕೆ ದಾಳಿ (ಅಲ್ಲಲ್ಲ ಭೇಟಿ )ಮಾಡಿದರು? ಏನಿದೆ ಅಂತಹ ವಿಶೇಷ ಈ ಕಾಲೇಜುಗಳಲ್ಲಿ? ಪ್ರಶ್ನೆಪತ್ರಿಕೆ ಸೋರಿಕೆ ಹಗರಣದ ತನಿಖೆ ನಡೆಸುತ್ತಿರುವ ತನಿಖಾ ಸಂಸ್ಥೆ ಇವರ ಕಾಲೇಜಿಗೆ ಹೋಗಿ ಕಾಲೇಜಿನ ವಿದ್ಯಾರ್ಥಿಗಳ, ಶಿಕ್ಷಕರ ಕೊನೆಗೆ ಜವಾನರ ವಿವರಗಳನ್ನೂ ಚೂರು ಬಿಡದಂತೆ ಕೇಳಿ ಪಡೆದಿದೆ ಎಂದರೆ ಅದರ ಅರ್ಥವೇನು? ಅಂತಹ ಯಾವ ಘನಂದಾರಿ ಕೆಲಸ ಈ ಕಾಲೇಜಿನಲ್ಲಿ ನಡೆದಿದೆ? ಅಥವಾ ರಸಾಯನ ಶಾಸ್ತ್ರ ಪಾಠ ಕಲಿಯಲು ಸಿಐಡಿ ಸಿಬ್ಬಂದಿ ಅಲ್ಲಿಗೆ ಬಂದರೆ?
ಇದು ಎಕ್ಸ್‌ಪರ್ಟ್‌ನಲ್ಲಿರುವ ಹಾಗೂ ಈ ರಾಜ್ಯದ ಎಲ್ಲ ಪಿಯು ಕಾಲೇಜುಗಳಲ್ಲಿರುವ ಹಾಗೂ ಈಗಾಗಲೇ ಕಲಿತು ಹೊರಬಂದಿರುವ ಲಕ್ಷಾಂತರ ವಿದ್ಯಾರ್ಥಿಗಳ, ಅವರ ದುಡಿಯುವ ಅಪ್ಪ ಅಮ್ಮಂದಿರ ಬದುಕಿನ, ಗೌರವದ, ಅಸ್ತಿತ್ವದ ಪ್ರಶ್ನೆಯಾಗಿದೆ. ಎಕ್ಸ್‌ಪರ್ಟ್‌ನಂತಹ ಕಾಲೇಜು ಮಾಲಕರ ಪ್ರತಿಷ್ಠೆಯ ಪ್ರಶ್ನೆ ಅಲ್ಲ ಇದು. ಈವರೆಗೆ ಸಿಐಡಿ ಈ ಹಗರಣದಲ್ಲಿ ಸಮರ್ಪಕವಾಗಿ ತನಿಖೆ ನಡೆಸುತ್ತಿರುವಂತೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಅದು ತನಿಖೆಯನ್ನು ತಾತ್ವಿಕ ಅಂತ್ಯಕ್ಕೆ ಕೊಂಡೊಯ್ಯಬೇಕು. ಈ ಹಗರಣದಲ್ಲಿ ಅದೆಷ್ಟೇ ದೊಡ್ಡವರಿರಲಿ ಅವರನ್ನು ಕಾನೂನಿನ ಎದುರು ತರಬೇಕು. ದುಡ್ಡು, ಪ್ರತಿಷ್ಠೆಗಾಗಿ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುವವರಿಗೆ ಉಗ್ರ ಶಿಕ್ಷೆಯಾಗಬೇಕು. ಅಂತಹವರು ಮುಂದೆ ಯಾವುದೇ ಶೈಕ್ಷಣಿಕ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ನಿಷೇಧ ಹೇರಬೇಕು. ಈ ವಿಷಯದಲ್ಲಿ ಯಾವುದೇ ಒತ್ತಡಕ್ಕೆ ರಾಜ್ಯ ಸರಕಾರ ಒಳಗಾಗಬಾರದು. ಸರಕಾರದ ಗೌರವಕ್ಕೂ, ರಾಜ್ಯದ ಹೆಸರಿಗೂ ಮಸಿ ಬಳಿಯುವ ಇಂತಹ ಕೆಲಸ ಮಾಡಿದವರನ್ನು ಮುಲಾಜಿಲ್ಲದ ಸದೆ ಬಡಿಯಬೇಕು. ಕಿಮ್ಮನೆಯವರು ಹಾಗೂ ಸಿಐಡಿ ಅಷ್ಟು ಮಾಡಿ ಪುಣ್ಯ ಕಟ್ಟಿಕೊಳ್ಳಲಿ.







