23ರಂದು ಸ್ಯಾಟ್‌ಕಾಂ ಮೂಲಕ ಸಿಎಂ ಭಾಷಣ
ಬೆಂಗಳೂರು,ಎ.20: ಅಂಬೇಡ್ಕರ್‌ರ 125ನೆ ಜಯಂತ್ಯುತ್ಸವ ಅಂಗವಾಗಿ ಅಂಬೇಡ್ಕರ್ ವಿಚಾರಧಾರೆಗಳನ್ನು ಹೇಳುವುದರ ಜೊತೆಗೆ ನಮ್ಮ ಗ್ರಾಮ, ನಮ್ಮ ಯೋಜನೆ ಪರಿಕಲ್ಪನೆಯಂತೆ ಮುಂದಿನ ಐದು ವರ್ಷಗಳಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೈಗೊಳ್ಳಬಹುದಾದ ಅಭಿವೃದ್ಧಿ ಯೋಜನೆಗಳ ಕುರಿತು ಎ.23 ರಂದು ನಡೆಯುವ ಸ್ಯಾಟ್ ಕಾಂನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾಯಿತ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಸ್ಯಾಟ್‌ಕಾಂನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ಗ್ರಾಮ, ತಾಲೂಕು ಹಾಗೂ ಜಿಲ್ಲಾ ಪಂಚಾಯತ್‌ಸದಸ್ಯರು ಹಾಗೂ ವಿಧಾನಸಭೆ, ವಿಧಾನ ಪರಿಷತ್ ಸದಸ್ಯರು ಇದರಲ್ಲಿ ಭಾಗವಹಿಸಲಿದ್ದಾರೆ.
ನಮ್ಮ ನಡಿಗೆ ಗ್ರಾಮದೆಡೆಗೆ ಕಾರ್ಯಕ್ರಮದ ಅಂಗವಾಗಿ ಮುಖ್ಯಮಂತ್ರಿಗಳು ಸ್ಯಾಟ್‌ಕಾಂ ಮೂಲಕ ಮಾಡುವ ಭಾಷಣವನ್ನು ಚುನಾಯಿತ ಪ್ರತಿನಿಧಿಗಳು ಆಲಿಸಲಿಕ್ಕಾಗಿ ಅಂದು ಮಧ್ಯಾಹ್ನ 4 ಗಂಟೆಗೆ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿರುವ ಸ್ಯಾಟ್‌ಕಾಂ ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಪಾಲಯ್ಯ ತಿಳಿಸಿದ್ದಾರೆ.





