ಮಹಿಳಾ ಕಾರ್ಮಿಕರ ಬಿಡುಗಡೆಗೆ ಎಐಟಿಯುಸಿ ಆಗ್ರಹ
ಬೆಂಗಳೂರು, ಎ. 20: ಕೇಂದ್ರ ಸರಕಾರದ ನೂತನ ಪಿಎಫ್ ನೀತಿ ವಿರೋಧಿಸಿ ನಗರದಲ್ಲಿ ಮಂಗಳವಾರ ನಡೆದ ಪ್ರತಿಭಟನೆಯ ವೇಳೆ ಬಂಧಿಸಿರುವ ಮಹಿಳಾ ಕಾರ್ಮಿಕರನ್ನು ಬಿಡುಗಡೆಗೊಳಿಸಬೇಕು ಎಂದು ಎಐಟಿಯುಸಿ ಆಗ್ರಹಿಸಿದೆ.
ಎರಡು ದಿನ ನಡೆದ ಕಾರ್ಮಿಕರ ಪ್ರತಿಭಟನೆಗೆ ಮಣಿದು ಕೇಂದ್ರ ಸರಕಾರ ಹೊಸ ನೀತಿಯನ್ನು ಹಿಂತೆಗೆದುಕೊಂಡಿದೆ. ಆದರೆ ಪ್ರತಿಭಟನೆಯ ವೇಳೆ ಕಾರ್ಮಿಕರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂದು ಖಂಡಿಸಿದೆ. ಪ್ರತಿಭಟನೆಗೆ ಸಂಬಂಧಿಸಿದಂತೆ ವಿವಿಧ ಆರೋಪಗಳ ಮೇಲೆ ಬಂಧಿಸಿರುವ 166ಕ್ಕೂ ಹೆಚ್ಚು ಮಹಿಳಾ ಕಾರ್ಮಿಕರನ್ನು ಕೂಡಲೇ ಬಿಡುಗಡೆಗೊಳಿಸಬೇಕು ಮತ್ತು ಅವರ ಮೇಲೆ ಇರುವ ಪ್ರಕರಣಗಳನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದೆ.
ಸಿದ್ಧ ಉಡುಪು ಕಾರ್ಖಾನೆಗಳಲ್ಲಿ ಮಹಿಳಾ ಕಾರ್ಮಿಕರ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ಮತ್ತು ಅವರ ಸ್ಥಿತಿಗತಿಗಳನ್ನು ಅಧ್ಯಯನ ನಡೆಸಲು ಸಮಿತಿಯನ್ನು ರಚಿಸಿ, ನಿರ್ದಿಷ್ಟ ಅವಧಿಯೊಳಗೆ ವರದಿ ನೀಡಲು ಸೂಚಿಸಬೇಕು ಎಂದು ಸಂಘಟನೆ ಸರಕಾರವನ್ನು ಒತ್ತಾಯಿಸಿದೆ.
ಕೇಸುಗಳನ್ನು ಹಂಪಡೆಯಲಿ: ಕೇಂದ್ರ ಸರಕಾರ ಕಾರ್ಮಿಕ ವಿರೋಧಿ ನೀತಿ ವಿರುದ್ಧ ಹೋರಾಟ ನಿರತ ಕಾರ್ಮಿಕರ ಮೇಲೆ ಲಾಠಿ ಚಾರ್ಜ್ ಮಾಡಿರುವುದನ್ನು ಎಐಟಿಯುಸಿ ಖಂಡಿಸಿದ್ದು, ಈ ಸಂದರ್ಭದಲ್ಲಿ ಕಾರ್ಮಿಕರ ಮೇಲೆ ದಾಖಲಿಸಿರುವ ಕೇಸುಗಳನ್ನು ಹಿಂಪಡೆಯಬೇಕು ಎಂದು ಎಐಟಿಯುಸಿ ಕಾರ್ಯದರ್ಶಿ ಎ.ಡಿ.ಹರಿಗೋವಿಂದ ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.







