ಚೀನಾ ಸರಕಾರದಿಂದ ಪರಿಹಾರ ಕೇಳುತ್ತಿರುವ ‘ಒಂದೇ ಮಗು ನೀತಿ’ಯ ಬಲಿಪಶುಗಳು!
ಬೀಜಿಂಗ್, ಎ. 20: ಈಗ ಸಡಿಲಗೊಂಡಿರುವ ಆದರೆ ಹಿಂದೆ ಕಟ್ಟುನಿಟ್ಟಾಗಿ ಜಾರಿಯಲ್ಲಿದ್ದ ಚೀನಾದ ಒಂದೇ ಮಗು ನೀತಿಯಿಂದಾಗಿ ಹೆಚ್ಚು ಮಕ್ಕಳನ್ನು ಪಡೆಯಲು ಸಾಧ್ಯವಾಗದ ದಂಪತಿಗಳು ಇದೀಗ ಸರಕಾರದಿಂದ ಪರಿಹಾರ ಕೇಳುತ್ತಿದ್ದಾರೆ.
ಮಂಗಳವಾರ ಹಲವಾರು ಚೀನಿ ನಾಗರಿಕರು ಬೀಜಿಂಗಿನಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ವರ್ಷ ಸರಕಾರ ತನ್ನ ಒಂದೇ ಮಗು ನೀತಿಯಲ್ಲಿ ತಿದ್ದುಪಡಿ ತಂದು ದಂಪತಿಗಳಿಗೆ ಎರಡನೆ ಮಗು ಪಡೆಯುವ ಆಯ್ಕೆ ನೀಡುವುದಾಗಿ ಹೇಳಿತ್ತು. ಹಿಂದಿನ ಒಂದೇ ಮಗು ನೀತಿಯಿಂದ ಬಾಧಿತರಾದ ದಂಪತಿಗಳನ್ನು ಈ ನೀತಿ ಕೆರಳಿಸಿದ್ದು ಅವರಲ್ಲಿ ಹೆಚ್ಚಿನವರು ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಬಾಗವಹಿಸಿದರು. ಹಿಂದೆಲ್ಲಾ ಒಂದಕ್ಕಿಂತ ಹೆಚ್ಚು ಮಕ್ಕಳನ್ನು ಪಡೆದವರಿಗೆ ಜೈಲುವಾಸ ಸೇರಿದಂತೆ ದಂಡ ಅಥವಾ ಬಲವಂತದ ಸಂತಾನಹರಣದಂತಹ ಕಠಿಣ ಶಿಕ್ಷೆ ವಿಧಿಸಲಾಗುತ್ತಿತ್ತು.
ಈಗ ಒಂದು ಮಗು ನೀತಿಯಲ್ಲಿ ಬದಲಾವಣೆ ತರುವುದರಿಂದ ಚೀನಾದ ಜನಸಂಖ್ಯಾ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿಲ್ಲವೆಂದು ಸರಕಾರದ ಟೀಕಾಕಾರರು ವಾದಿಸುತ್ತಿದ್ದಾರೆ. 2050ರ ಸುಮಾರಿಗೆ ಚೀನಾದ ಜನಸಂಖ್ಯೆ 145 ಕೋಟಿ ಆಗಲಿದೆ. ಆಗ ಪ್ರತಿ ಮೂರು ಮಂದಿ ಚೀನೀಯರಲ್ಲಿ ಒಬ್ಬರು 60 ವರ್ಷಕ್ಕಿಂತ ಮೇಲ್ಪಟ್ಟವರಾಗಿ ಕೆಲಸ ಮಾಡುವ ವಯಸ್ಸಿನ ಜನರ ಸಂಖ್ಯೆ ಕಡಿಮೆಯಾಗಲಿದೆ ಹಾಗೂ ಇಷ್ಟು ದೊಡ್ಡ ಜನಸಂಖ್ಯೆಯನ್ನು ಸಲಹುವುದು ಕಷ್ಟಕರವಾಗಲಿದೆಯೆಂದು ಅವರು ಹೇಳುತ್ತಾರೆ.
ಒಂದು ಮಗು ನೀತಿ ಪಾಲಿಸಿದ ಕೆಲವು ದಂಪತಿಗಳು, ಸರಕಾರ ತಮಗೆ ಕೊಡ ಮಾಡುವ 500 ಯುವಾನ್ ತಮ್ಮ ನಿರ್ವಹಣೆಗೆ ಸಾಕಾಗದು ಎಂದು ದೂರುತ್ತಾರೆ. ಒಂದು ಮಗು ನೀತಿಯನ್ನು ಈಗ ಸಡಿಲಗೊಳಿಸಿರುವುದರಿಂದ ಅದರ ಲಾಭ ಪಡೆಯಲು ತಾವು ಅಸಮರ್ಥರು ಎಂದು ಮತ್ತೆ ಕೆಲವರು ಹೇಳಿಕೊಂಡಿದ್ದಾರೆ.







