ಸೋನಿಯಾ ಗಾಂಧಿಗೇ ಕೈ ಕೊಟ್ಟರೆ ಕಾಂಗ್ರೆಸಿಗರು ?

ಹೊಸದಿಲ್ಲಿ, ಎ. 20 : ಕಾಂಗ್ರೆಸ್ ನಾಯಕರ ಪಕ್ಷದೆಡೆಗಿನ ಬದ್ಧತೆ ಹಾಗು ನಾಯಕತ್ವದ ಮೇಲೆ ಇರುವ ಪ್ರಾಮಾಣಿಕ ನಂಬಿಕೆ ಬಗ್ಗೆ ಮತ್ತೆ ಪ್ರಶ್ನೆಗಳೆದ್ದಿವೆ. ಸೋನಿಯಾ ಎಂದರೆ ಅಮ್ಮ, ತಾಯಿ ಎಂದು ಬಹಿರಂಗವಾಗಿ ಘೋಷಿಸುವ, ಅವರೆದುರು ದೀನರಾಗಿ ನಿಲ್ಲುವ ಪಕ್ಷದ ನಾಯಕರು ಅಗತ್ಯ ಬಿದ್ದಾಗ , ಸೂಕ್ಷ್ಮ ಸಂದರ್ಭಗಳಲ್ಲಿ ಪಕ್ಷದ, ನಾಯಕತ್ವದ ರಕ್ಷಣೆಗೆ ಅಷ್ಟೇ ಬದ್ಧರಾಗಿ ನಿಲ್ಲುವುದಿಲ್ಲ ಎಂಬ ಮಾತು ಈಗ ಮತ್ತೆ ನಿಜವಾಗಿದೆ. ಪಕ್ಷವನ್ನು ಸಮರ್ಥಿಸಿಕೊಳ್ಳಲು, ತಮ್ಮ ನಾಯಕರ ಪರ ನಿಲ್ಲಲು ಹಿಂಜರಿಯುವ ನಾಯಕರು ಇರುವುದು ಕಾಂಗ್ರೆಸ್ ನಲ್ಲಿ ಮಾತ್ರ.
ಇಷ್ರತ್ ಜಹಾನ್ ಪ್ರಕರಣದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧೀ ಆದೇಶದ ಮೇರೆಗೆ ಆಗಿನ ಗೃಹ ಸಚಿವ ಚಿದಂಬರಂ ಎರಡನೇ ಅಫಿದವಿತ್ ಸಲ್ಲಿಸಿ ಇಷ್ರತ್ ಅಮಾಯಕೆ ಎಂದು ಸುಳ್ಳು ಹೇಳಿದರು ಎಂದು ಬಿಜೆಪಿ ನೇರವಾಗಿ ಆರೋಪ ಮಾಡಿದೆ. ಇದು ಬಹು ಗಂಭೀರ ಆರೋಪ. ಇದನ್ನು ಸಮರ್ಥವಾಗಿ ಎದುರಿಸದಿದ್ದರೆ ರಾಜಕೀಯವಾಗಿ ಪಕ್ಷಕ್ಕೆ ಇದು ಬಹಳ ದುಬಾರಿಯಾಗಲಿದೆ. ಆದರೆ ಪಕ್ಷಾಧ್ಯಕ್ಷೆಯ ಮೇಲೆಯೇ ಇಂತಹ ಗಂಭೀರ ಆರೋಪ ಬಂದಾಗ ಅದನ್ನು ಅದಕ್ಕೆ ಸಮರ್ಥವಾಗಿ ಪ್ರತಿದಾಳಿ ನಡೆಸುವಲ್ಲಿ ಕಾಂಗ್ರೆಸಿಗರು ಎಡವಿದ್ದಾರೆ. ಹೀಗೆಂದು ಬೇರೆ ಯಾರೂ ಹೇಳಿಲ್ಲ. ಸ್ವತಹ ಕಾಂಗ್ರೆಸ್ ಅಧಿನಾಯಕಿ ಸೋನಿಯಾಗೆ ಅನಿಸಿದೆ. ಇದಕ್ಕಾಗಿ ಅವರು ಪಕ್ಷದ ನಾಯಕರ ಮೇಲೆ ಭಾರೀ ಗರಂ ಆಗಿದ್ದಾರೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಮೊದಲು ಕೇಂದ್ರ ಸಚಿವ ನಿರ್ಮಲಾ ಸೀತಾರಾಮನ್ ಅವರು ಸೋನಿಯಾ ಹೆಸರು ಎಳೆದು ತಂದರು. ಮರುದಿನ ಬಿಜೆಪಿ ವಕ್ತಾರ ಸಂಬಿತ್ ಪಾತ್ರ ನೇರವಾಗಿ ಸೋನಿಯಾ ವಿರುದ್ಧ ಆರೋಪ ಮಾಡಿ ಅವರೇ ಚಿದಂಬಂರಂ ಗೆ ಹೇಳಿ ಎರಡನೇ ಅಫಿದವಿತ್ ಸಲ್ಲಿಸುವ ಹಾಗೆ ಮಾಡಿದರು ಎಂದರು. ಈ ಎರಡೂ ಆರೋಪಕ್ಕೂ ಕಾಂಗ್ರೆಸ್ ಪ್ರತಿಕ್ರಿಯೆ ನೀಡಿತಾದರೂ ಸೋನಿಯಾರನ್ನು ರಕ್ಷಿಸುವ ಪ್ರಯತ್ನ ಮಾಡಲೇ ಇಲ್ಲ. ಸಂಬಿತ್ ಪಾತ್ರ ಆರೋಪ ಮಾಡಿದ ಕೆಲವೇ ನಿಮಿಷಗಳಲ್ಲಿ ಕಾಂಗ್ರೆಸ್ ಪ್ರತಿಕ್ರಿಯೆ ಬಿಡುಗಡೆ ಮಾಡಿದರೂ ಅದರಲ್ಲಿ ಸೋನಿಯಾರ ಉಲ್ಲೇಖವೇ ಇರಲಿಲ್ಲ. ಬಹಳ ತಡವಾಗಿ ಬುಧವಾರ ಪಕ್ಷದ ವತಿಯಿಂದ ಈ ಪ್ರಕರಣದಲ್ಲಿ ಸೋನಿಯಾ ಗಾಂಧೀ ಅವರ ಯಾವುದೇ ಪಾತ್ರ ಇಲ್ಲ ಎಂಬ ಹೇಳಿಕೆ ನೀಡಲಾಯಿತು.







