ಮೊಬೈಲ್ ಫೋನ್ ಕ್ಷೇತ್ರದಲ್ಲಿ ಸೌದಿಗಳಿಗೆ ಮಾತ್ರ ಉದ್ಯೋಗ : ಅಧಿಕೃತ ಆದೇಶ
ಸೌದಿ ಸಂಕಟ

ರಿಯಾಧ್: ಮೊಬೈಲ್ ಹಾಗೂ ಟೆಲಿಕಮ್ಯೂನಿಕೇಶನ್ಸ್ ಕ್ಷೇತ್ರದಲ್ಲಿ ಯಾವುದೇ ವಿದೇಶಿಗಳಿಗೆ ಉದ್ಯೋಗವನ್ನು ನೀಡಲು ಸೌದಿ ಅರೇಬಿಯಾದ ಕಾರ್ಮಿಕ ಸಚಿವಾಲಯವು ಅನುಮತಿಸುವುದಿಲ್ಲವೆಂದು ಹೇಳಿದೆ.
ಬುಧವಾರಈ ಬಗ್ಗೆ ಅಧಿಕೃತ ಆದೇಶವನ್ನು ಸಚಿವಾಲಯ ಹೊರಡಿಸಿದೆ. ಸೆಪ್ಟೆಂಬರ್ 2ರೊಳಗಾಗಿಮೊಬೈಲ್ ಫೋನ್ ಮಾರಾಟ, ನಿರ್ವಹಣೆ, ಬಿಡಿಭಾಗಗಳು, ಹೀಗೆ ಎಲ್ಲಾಕ್ಷೇತ್ರಗಳಲ್ಲಿಯೂ ಸೌದಿ ರಾಷ್ಟ್ರೀಯರನ್ನೇ ನೇಮಿಸಬೇಕೆಂದು ಕಾರ್ಮಿಕ ಸಚಿವ ಮುಫ್ರೆಝ್ ಅಲ್-ಹಖಬನಿ ಈ ಹಿಂದೆ ನಿರ್ದೇಶನ ನೀಡಿದ್ದರು.
ಈ ನಿಯಮ ಸೌದಿಗಳನ್ನು ಹೊರತುಪಡಿಸಿ ಎಲ್ಲಾ ರಾಷ್ಟ್ರಗಳವರಿಗೂ ಅನ್ವಯಿಸುವುದು ಎಂದು ಕಾರ್ಮಿಕ ಸಚಿವಾಲಯದ ವಕ್ತಾರ ಖಾಲಿದ್ ಅಭ ಅಲ್-ಖೈಲ್ ತಿಳಿಸಿದ್ದಾರೆ.
‘‘ರಮ್ಜಾನ್ ಆರಂಭದಲ್ಲಿ ಮೊಬೈಲ್ ಫೋನ್ ಕ್ಷೇತ್ರದ ಎಲ್ಲಾ ಉದ್ಯಮಗಳಲ್ಲಿಯೂ ತಪಾಸಣೆ ನಡೆಸಲಾಗುವುದು. ನಾವು ಸೌದಿಯ ಯುವಕ, ಯುವತಿಯರನ್ನು ಈ ಕ್ಷೇತ್ರದಲ್ಲಿ ನೇಮಿಸಲು ಉತ್ಸುಕರಾಗಿದ್ದೇವೆ,’’ಎಂದು ಅವರು ಹೇಳಿದರು.
ಆಸಕ್ತಿಯಿರುವ ಯುವಜನತೆಗೆ ತಮ್ಮ ಸಚಿವಾಲಯ ತರಬೇತಿ ಕಾರ್ಯಕ್ರಮಗಳನ್ನು ವಾಣಿಜ್ಯ ಹಾಗೂ ಕೈಗಾರಿಕೆ, ಮುನಿಸಿಪಲ್ ಮತ್ತು ಗ್ರಾಮೀಣ ವ್ಯವಹಾರ, ಸಂವಹನ ಮತ್ತು ತಂತ್ರಜ್ಞಾನ, ಮಾನವ ಸಂಪನ್ಮೂಲ ಅಭಿವೃದ್ಧಿಹಾಗೂ ಇತರ ಇಲಾಖೆಗಳ ಸಹಯೋಗದೊಂದಿಗೆ ಆಯೋಜಿಸಲಾಗುವುದು.
ತಮ್ಮ ದೇಶದ ಯುವಜನತೆಯನ್ನು ಆರ್ಥಿಕ ಸ್ವಾವಲಂಬನೆಯೊದಗಿಸುವುದು ಈ ಕ್ರಮದ ಪ್ರಮುಖ ಉದ್ದೇಶವಾಗಿದ್ದು ಆದೇಶವನ್ನು ಉಲ್ಲಂಘಿಸುವ ಉದ್ಯಮಗಳು ಭಾರೀ ಮೊತ್ತದ ದಂಡ ಪಾವತಿಸಬೇಕಾಗುತ್ತದೆ ಎಂದು ಸಚಿವಾಲಯ ಎಚ್ಚರಿಸಿದೆ.





