ಶಕ್ತಿಮಾನ್ ಕುದುರೆ ಸಾವಿಗೆ ಕಾರಣವಾದ ಬಿಜೆಪಿ ಶಾಸಕನ ವಿರುದ್ಧ ಕ್ರಮಕ್ಕೆ ಆಗ್ರಹ

ಡೆಹ್ರಾಡೂನ್, ಎ.21: ಪೊಲೀಸ್ ಅಶ್ವ ಶಕ್ತಿಮಾನ್ ಸಾವಿಗೆ ತೀವ್ರ ಆತಂಕವ್ಯಕ್ತಪಡಿಸಿರುವ ಪ್ರಾಣಿ ಹಕ್ಕುಗಳ ಕಾರ್ಯಕರ್ತರು, ಆರೋಪಿ ಬಿಜೆಪಿ ಶಾಸಕ ಗಣೇಶ್ ಜೋಶಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸರಕಾರವನ್ನು ಆಗ್ರಹಿಸಿದ್ದಾರೆ.
ನಮ್ಮ ದೇಶದಲ್ಲಿ ಪ್ರಾಣಿಗೆ ಹಿಂಸೆ ನೀಡುವವರಿಗೆ ಕಠಿಣ ಕಾನೂನು ಜಾರಿಗೆ ತರಬೇಕಾದ ಅಗತ್ಯವಿದೆ ಎಂದು ಪೇಟಾ ಸಂಘಟನೆಯ ಮುಖ್ಯ ಕಾರ್ಯಾಧ್ಯಕ್ಷೆ ಪೂರ್ವ ಜೋಶಿಪುರ ಆಗ್ರಹಿಸಿದ್ದಾರೆ. ಮಾ.14 ರಂದು ಹರೀಶ್ ರಾವತ್ ನೇತೃತ್ವದ ಉತ್ತರಾಖಂಡ್ ಸರಕಾರದ ವಿರುದ್ಧ ಬಿಜೆಪಿ ನಡೆಸುತ್ತಿದ್ದ ಪ್ರತಿಭಟನೆಯ ವೇಳೆ ಬಿಜೆಪಿ ಶಾಸಕ ಜೋಶಿ ಪೊಲೀಸ್ ಕುದುರೆ ಶಕ್ತಿಮಾನ್ ಮೇಲೆ ಹಲ್ಲೆ ನಡೆಸಿದ್ದರು. ಇದರಿಂದಾಗಿ ಕುದುರೆಯ ಒಂದು ಕಾಲು ಮುರಿದುಹೋಗಿತ್ತು. 13 ವರ್ಷದ ಕುದುರೆಗೆ ಅಮೆರಿಕದಿಂದ ಬಂದಿದ್ದ ನುರಿತ ವೈದ್ಯರ ತಂಡ ಒಂದು ಕಾಲನ್ನು ಕತ್ತರಿಸಿ ಕೃತಕ ಕಾಲು ಜೋಡಿಸಿ ಶಸ್ತ್ರಚಿಕಿತ್ಸೆ ನಡೆಸಿದ್ದರು. 4 ಕ್ವಿಂಟಾಲ್‌ನ ಕುದುರೆ ಕೃತಕ ಕಾಲಿನೊಂದಿಗೆ ಡೆಹ್ರಾಡೂನ್‌ನ ಪೊಲೀಸ್ ಇಲಾಖೆಯ ಸುಪರ್ದಿನಲ್ಲಿ ಚೇತರಿಕೆ ಪಡೆಯುತ್ತಿತ್ತು. 36 ದಿನಗಳ ಕಾಲ ಚಿಕಿತ್ಸೆ ಪಡೆದಿದ್ದ ಕುದುರೆ ಬುಧವಾರ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿತ್ತು.





