ಕ್ರಾಂತಿಕಾರಿ ಪೂಜಾರಿ : ಜನಾರ್ದನ ಪೂಜಾರಿಯನ್ನು ಕೊಂಡಾಡಿದ ಸಿಎಂ
ಬಂಟ್ವಾಳದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಬಂಟ್ವಾಳ: ಕುದ್ರೋಳಿ ದೇವಸ್ಥಾನದಲ್ಲಿ ದಲಿತ ಮಹಿಳೆಯರನ್ನು ಅರ್ಚಕರನ್ನಾಗಿಸುವ ಮೂಲಕ ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ಕ್ರಾಂತಿಕಾರಿ ಕೆಲಸ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಂಡಾಡಿದರು. ಗುರುವಾರ ಬಂಟ್ವಾಳ ತಾಲೂಕಿನ ಸಜಿಪ ಮೂಡಾ ಗ್ರಾಮದ ಸುಭಾಷ್‌ನಗರದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯ ವತಿಯಿಂದ ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಬ್ರಹ್ಮಶ್ರೀ ನಾರಾಯಣ ಗುರು ಜ್ಞಾನ ಮಂದಿರವನ್ನು ಲೋಕಾರ್ಪಣೆಗೈದು ಬಳಿಕ ನಡೆದ ಸಭಾಕಾರ್ಯಕ್ರಮಲ್ಲಿ ಅವರು ಮಾತನಾಡುತ್ತಿದ್ದರು.
ನಾಡುಕಂಡ ಶ್ರೇಷ್ಠ ದಾರ್ಶನಿಕರಾದ ಬುದ್ಧ, ಬಸವಣ್ಣ, ಪೇರಿಯಾರ್, ಅಂಬೇಡ್ಕರ್ ಮೊದಲಾದವರಂತೆ ನಾರಾಯಣಗುರು ಕೂಡಾ ಅಧರ್ಮಿಯ ಆಚರಣೆಯ ವಿರುದ್ಧ ಹೋರಾಟವನ್ನು ಮಾಡಿದ್ದರು. ಜನಾರ್ದನ ಪೂಜಾರಿಯ ಈ ಕ್ರಾಂತಿಕಾರಿ ಕೆಲಸಕ್ಕೆ ನಾರಾಯಣ ಗುರು ನಾಂದಿ ಹಾಡಿದ್ದರು ಎಂದು ಹೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಡವರು ಬ್ಯಾಂಕ್ ಮೆಟ್ಟಿಲು ಹತ್ತಲೂ ಸಾಧ್ಯವಾಗದ ಕಾಲವೊಂದಿದ್ದು, ಜನಾರ್ದನ ಪೂಜಾರಿ ಕೇಂದ್ರ ವಿತ್ತ ಸಚಿವರಾಗಿದ್ದಾಗ ಮಾಡಿದ ಮಹಾ ಕಾರ್ಯದಿಂದಾಗಿ ಇಂದು ಬಡವರು ಬ್ಯಾಂಕ್ ಮೆಟ್ಟಿಲು ಹತ್ತುವಂತಾಗಿದೆ ಎಂದು ವೇದಿಯಲ್ಲಿ ಅವರ ಮುಖವನ್ನು ನೋಡುತ್ತಲೇ ಶ್ಲಾಘಿಸಿದರು. ಈ ವೇಳೆ ಸಭಿಕರು ಕರತಾಡನಮೂಲಕ ಹರ್ಷ ವ್ಯಕ್ತಪಡಿಸಿದರು.







